ಬೆಂಗಳೂರು[ಜ.18]: ವೇದಾಂತ ಭಾರತೀ ಸಂಸ್ಥೆಯು ಬೆಂಗಳೂರಿನ ಅರಮನೆ ಮೈದಾನದ ಶ್ರೀಕೃಷ್ಣ ವಿಹಾರದಲ್ಲಿ ಹಮ್ಮಿಕೊಂಡಿರುವ ವಿವೇಕದೀಪಿನೀ ಮಹಾ ಸಮರ್ಪಣೆ ಕಾರ್ಯಕ್ರಮವು ಶನಿವಾರ ಮಧ್ಯಾಹ್ನ 12.30ಕ್ಕೆ ನಡೆಯಲಿದೆ. ಸಮಾರಂಭದಲ್ಲಿ ಎರಡು ಲಕ್ಷ ವಿದ್ಯಾರ್ಥಿಗಳು ಶಂಕರಾಚಾರ್ಯ ವಿರಚಿತ ಪ್ರಶ್ನೋತ್ತರ ರತ್ನ ಮಾಲಿಕೆಯಿಂದ ಆಯ್ದ 37 ಶ್ಲೋಕಗಳನ್ನು ಪಠಣ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೃಷ್ಣರಾಜನಗರದ ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠದ ಪೀಠಾಧ್ಯಕ್ಷ ಶಂಕರಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

'20 ವರ್ಷ ಬೇಕಾದ್ರೆ ಆಳ್ವಿಕೆ ಮಾಡಿ, ಜನರಿಗೆ ವಿಷ ಹಾಕ್ಬೇಡಿ'

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿರುವ 1,500 ಶಾಲೆಗಳಿಂದ ಸುಮಾರು ಎರಡು ಲಕ್ಷ ವಿದ್ಯಾರ್ಥಿಗಳು ಸಾಮೂಹಿಕವಾಗಿ ಶ್ಲೋಕಗಳನ್ನು ಪಠಿಸಲಿದ್ದಾರೆ. ಮೌಲ್ಯಯುತ ಶಿಕ್ಷಣದ ಮೂಲಕ ಮಕ್ಕಳಿಗೆ ಉತ್ತಮ ನಡತೆ, ವ್ಯಕ್ತಿತ್ವ ವಿಕಸನದ ಮೂಲಕ ರಾಷ್ಟ್ರೀಯ ಭಾವೈಕ್ಯತೆ ಮೂಡಿಸಲು ಸಂಸ್ಥೆಯು ವಿವೇಕದೀಪಿನೀ ಎಂಬ ಅಭಿಯಾನವನ್ನು ಶಾಲಾ-ಕಾಲೇಜುಗಳಲ್ಲಿ ಹಮ್ಮಿಕೊಂಡಿದೆ.

ಶಂಕರಾಚಾರ್ಯ ವಿರಚಿತ ‘ಪ್ರಶ್ನೋತ್ತರ ರತ್ನಮಾಲಿಕೆ’ಯಿಂದ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾದ 37 ಪದ್ಯಗಳನ್ನು ಆಯ್ದು ‘ವಿವೇಕ ದೀಪಿನೀ’ ಎಂಬ ಪುಸ್ತಕದಲ್ಲಿ ಅರ್ಥಸಹಿತ ಮುದ್ರಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ದ್ವೇಷ-ಅಸೂಯೆಯಂತಹ ದುಷ್ಟಗುಣಗಳನ್ನು ಅಳಿಸಿ, ಪರಸ್ಪರ ಸ್ನೇಹ-ಸೌಹಾರ್ದಭಾವದ ಗುಣ ಬೆಳೆಸುವ ಉದ್ದೇಶದಿಂದ ಈ ಉಪದೇಶಗಳನ್ನು ಬೋಧಿಸಲಾಗುತ್ತಿದೆ. ಇದೀಗ ಈ ಉಪದೇಶಗಳ ಬೆಳಕು ದೇಶದೆಲ್ಲೆಡೆ ಪಸರಿಸಬೇಕು ಎಂಬ ಉದ್ದೇಶದಿಂದ ವಿದ್ಯಾರ್ಥಿಗಳ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಟ್ರಸ್ಟಿಎಸ್‌.ಎಸ್‌. ನಾಗಾನಂದ ತಿಳಿಸಿದ್ದಾರೆ.

ಪೌರತ್ವ ಕಾಯ್ದೆ ಪರ ಅಮಿತ್‌ ಶಾ ಕಹಳೆ: ಕೇಸರಿಮಯವಾದ ಹುಬ್ಬಳ್ಳಿ