ಬೆಂಗಳೂರು, (ನ.24): ರಾಷ್ಟ್ರಕವಿ ಕುವೆಂಪು ವಿರಚಿತ ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ ಕವಿತೆಯ ಸಾಲನ್ನು   ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಯೇಸು ಎಂದು ಬ್ಯಾನರ್ ಹಾಕಲಾಗಿದ್ದು, ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಈ ವಿವಾದಿತ ಬ್ಯಾನರ್‌ನಲ್ಲಿ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಅವರ ಫೋಟೋ ಇದ್ದು, ಇದೀಗ ಅವರ ವಿರುದ್ಧ ಕನ್ನಡ ಹಾಗೂ ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ.

ಬೆಳಿಗ್ಗೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಪೋಸ್ಟರ್ ಗಳು ವೈರಲ್ ಆಗಿದ್ದವು. ಜಯನಗರದ 8ನೇ ಬಡಾವಣೆಯಲ್ಲಿ ಓಂ ಕನ್ನಡ ಮರಿಯಮ್ಮನ ಕರುನಾಡ ಸಂಘದ ವತಿಯಿಂದ ಮೊನ್ನೆ ಭಾನುವಾರ ಕನ್ನಡ ರಾಜ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ರಾಜ್ಯೋತ್ಸವದ ಪ್ರಯುಕ್ತ ಹಾಕಲಾಗಿದ್ದ ಪೋಸ್ಟರ್ ಹಾಗೂ ಬ್ಯಾನರ್ ಗಳಲ್ಲಿ ತಾಯಿ ಭುವನೇಶ್ವರಿ ಕಾಣೆಯಾಗಿದ್ದಳು! ಭುವನೇಶ್ವರಿ ಬದಲಿಗೆ ಏಸು ಕ್ರಿಸ್ತನ ಫೋಟೋ ಹಾಕಲಾಗಿತ್ತು.

BJP ಸಭೆಯಲ್ಲಿ ಕಾಂಗ್ರೆಸ್ ನಾಯಕ, ಚಂಡಮಾರುತ ಭೀತಿಯಲ್ಲಿ ಕರ್ನಾಟಕ; ನ.24ರ ಟಾಪ್ 10 ಸುದ್ದಿ!

ಇನ್ನು ರಾಷ್ಟ್ರಕವಿ ಕುವೆಂಪು ವಿರಚಿತ ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ ಕವಿತೆಯ ಸಾಲನ್ನು ವಿಕೃತವಾಗಿ ಬರೆಯಲಾಗಿತ್ತು. ಬ್ಯಾನರ್ ನಲ್ಲಿ ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಯೇಸು ಎಂದು ಬರೆಯಲಾಗಿತ್ತು. ಶಿವನ ಬದಲಿಗೆ ಏಸುವನ್ನು ಬರೆದು ಕರ್ನಾಟಕದ ಮಹತ್ವದ ಗೀತೆಗೆ ಅಪಮಾನ ಮಾಡಲಾಗಿದೆ.

ಇನ್ನು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜಯನಗರದ ಶಾಸಕಿ ಸೌಮ್ಯ ರೆಡ್ಡಿ ಅವರು ಭಾಗವಹಿಸಬೇಕಾಗಿತ್ತು. ಕರ್ನಾಟಕ ರಾಜ್ಯೋತ್ಸವದ ಹೆಸರಿನಲ್ಲಿ ಧರ್ಮದ ಪ್ರಚಾರ ಮಾಡುತ್ತಿದ್ದ ಕಿಡಿಗೇಡಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ನಂತರ ಕೆಲವೇ ಗಂಟೆಗಳಲ್ಲಿ ಪೋಸ್ಟರ್ ಗಳಿದ್ದ ಸ್ಥಳಕ್ಕೆ ಬಜರಂಗದಳ ಹಾಗೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಬಂದು ಪೋಸ್ಟರ್ ಹಾಗೂ ಬ್ಯಾನರ್ ಗಳನ್ನು ಕಿತ್ತೆಸಿದಿದ್ದಾರೆ.