ಬೆಂಗಳೂರು(ಜು.17):  ಕೇಂದ್ರ ಸರ್ಕಾರದ ಪರಿಸರ ಪರಿಣಾಮ ಅಧ್ಯಯನ-2020 ಕರಡು ಅಧಿಸೂಚನೆ ಬಗ್ಗೆ ಆಯಾ ರಾಜ್ಯಗಳ ಸ್ಥಳೀಯ ಭಾಷೆಗಳಲ್ಲಿ ವ್ಯಾಪಕ ಪ್ರಚಾರ ಮಾಡದೇ ಸಾರ್ವಜನಿಕರಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಸಾಕಷ್ಟು ಮಯ ಸಿಗದೇ ಹೋದರೆ ಅಧಿಸೂಚನೆಗೆ ತಡೆ ನೀಡಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿರುವ ಹೈಕೋರ್ಟ್‌, ವ್ಯಾಪಕ ಪ್ರಚಾರ ಮಾಡಲು ಮತ್ತು ಆಕ್ಷೇಪಣೆ ಸಲ್ಲಿಸಲು ಸಮಯವನ್ನು ವಿಸ್ತರಿಸುವ ಬಗ್ಗೆ ಪರಿಶೀಲಿಸುವಂತೆ ನಿರ್ದೇಶಿಸಿದೆ.

ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸುವ ಕಾಲಾವಕಾಶವನ್ನು 2020ರ ಡಿ.31ರವರೆಗೆ ವಿಸ್ತರಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಯುನೈಟೆಡ್‌ ಕನ್ಸರ್ವೇಷನ್‌ ಮೂವ್‌ಮೆಂಟ್‌ ಚಾರಿಟಬಲ್‌ ಆ್ಯಂಡ್‌ ವೆಲ್‌ ಫೇರ್‌ ಟ್ರಸ್ಟ್‌ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿತು.

ಕೊರೋನಾ ನಿಯಂತ್ರಿಸಲು ಸಂಪೂರ್ಣ ವಿಫಲ: ಬಿಬಿಎಂಪಿಗೆ ಹೈಕೋರ್ಟ್‌ ಹಿಗ್ಗಾಮುಗ್ಗ ತರಾಟೆ

ಕೇಂದ್ರ ಸರ್ಕಾರಿ ವಕೀಲರು ವಾದಿಸಿ, ‘2020ರ ಏ.11ರಂದು ಕರಡು ಅಧಿಸೂಚನೆಯನ್ನು ಇ-ಗೆಜೆಟ್‌ ಹೊರಡಿಸಿ ಜೂನ್‌ 11ರವರೆಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಕೋವಿಡ್‌-19 ಹಿನ್ನೆಲೆಯಲ್ಲಿ ಆಕ್ಷೇಪಣಾ ಅವಧಿಯನ್ನು ಆಗಸ್ಟ್‌ 11ರವರೆಗೆ ವಿಸ್ತರಿಸಲಾಗಿದ್ದು, ಆ ಸಮಯವನ್ನು ಈಗ ಮತ್ತೆ ವಿಸ್ತರಿಸಲು ನಿಯಮಗಳಲ್ಲಿ ಅವಕಾಶವಿಲ್ಲ. ಈಗಾಗಲೇ ನಾಲ್ಕು ಲಕ್ಷ ಆಕ್ಷೇಪಣೆಗಳು ಬಂದಿವೆ. ಕರಡು ಅಧಿಸೂಚನೆಯನ್ನು ಎಲ್ಲ ರಾಜ್ಯಗಳ ಪರಿಸರ ಪರಿಣಾಮ ಅಧ್ಯಯನ ಪ್ರಾಧಿಕಾರಕ್ಕೆ ಕಳಿಸಿ ವೆಬ್‌ ಸೈಟ್‌ನಲ್ಲಿ ಪ್ರಕಟಿಸಲು ಹಾಗೂ ಸ್ಥಳೀಯ ಭಾಷೆಯಲ್ಲಿ ಪ್ರಚಾರ ನೀಡಲು ಸೂಚಿಸಲಾಗಿತ್ತು. ಪ್ರಚಾರ ಕಲ್ಪಿಸುವುದು ಪ್ರಾಧಿಕಾರಗಳ ಕೆಲಸವಾಗಿದೆ’ ಎಂದು ತಿಳಿಸಿದರು.

ಇದಕ್ಕೆ ಆಕ್ಷೇಪಿಸಿದ ನ್ಯಾಯಪೀಠ, ‘ಸಾರ್ವಜನಿಕರ ಆಕ್ಷೇಪಣೆಗೂ ಮೊದಲು ವ್ಯಾಪಕ ಪ್ರಚಾರ ಅಗತ್ಯ. ಅದನ್ನು ನಿರ್ವಹಿಸದೇ ಕರಡು ಅಂತಿಮಗೊಳಿಸುವುದು ಹೇಗೆ? ಪ್ರಚಾರ ನೀಡದೆಯೇ 4 ಲಕ್ಷ ಆಕ್ಷೇಪಣೆಗಳು ಹೇಗೆ ಬಂದವು? ಕರಡು ಅಧಿಸೂಚನೆ ಬಗ್ಗೆ ಎಲ್ಲ ರಾಜ್ಯಗಳ ಅಧಿಕೃತ ಸ್ಥಳೀಯ ಭಾಷೆಯಲ್ಲಿ ಪ್ರಚಾರ ನೀಡಬೇಕು. ಆದ್ದರಿಂದ ಸಮರ್ಪಕ ಪ್ರಚಾರ ನೀಡಿ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಆಗಸ್ಟ್‌ 11ರ ಗಡುವು ಮತ್ತಷ್ಟು ವಿಸ್ತರಿಸುವ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡಬೇಕು. ಇಲ್ಲವಾದರೆ, ಕರಡು ಅಧಿಸೂಚನೆಗೆ ತಡೆ ನೀಡಲಾಗುವುದು’ ಎಂದು ಕೇಂದ್ರ ಸರ್ಕಾರವನ್ನು ಎಚ್ಚರಿಸಿ ವಿಚಾರಣೆಯನ್ನು ಮುಂದೂಡಿತು.