ಬೆಂಗಳೂರು(ಡಿ.07): ಡೆತ್‌ನೋಟ್‌ನಲ್ಲಿ (ಮರಣ ಪತ್ರ) ಹೆಸರಿದ್ದ ಮಾತ್ರಕ್ಕೆ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದಾಗಿ ತೀರ್ಮಾನಿಸಿ ಜಾಮೀನು ನಿರಾಕರಿಸಲಾಗದು ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ವನಜಾಕ್ಷಿ ಎಂಬ ಮಹಿಳೆ ಆತ್ಮಹತ್ಯೆಗೆ ಶರಣಾಗುವ ಮುನ್ನ ಬರೆದಿದ್ದಾರೆ ಎನ್ನಲಾದ ಡೆತ್‌ನೋಟ್‌ನಲ್ಲಿ ಹೆಸರು ಉಲ್ಲೇಖವಾದ ಕಾರಣಕ್ಕೆ ಪೊಲೀಸರಿಂದ ಬಂಧಿಸಲ್ಪಟ್ಟು ಜೈಲುಪಾಲಾದ ಬೆಂಗಳೂರಿನ ಬೆಳ್ಳಂದೂರಿನ ವ್ಯಾಪಾರಿ ಬಿ.ಕೆ.ಪದ್ಮನಾಭ ರೆಡ್ಡಿಯ ಜಾಮೀನು ಅರ್ಜಿ ತೀರ್ಪಿನಲ್ಲಿ ನ್ಯಾಯಮೂರ್ತಿ ಬಿ.ಎ.ಪಾಟೀಲ್‌ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಕರಣದಲ್ಲಿ ಮೃತ ಮಹಿಳೆ ಮತ್ತು ಅರ್ಜಿದಾರ ಪದ್ಮನಾಭ ರೆಡ್ಡಿ ನಡುವೆ 2002ರಿಂದಲೂ ಹಣಕಾಸು ವ್ಯವಹಾರ ಇತ್ತು. ಹಲವು ಬಾರಿ ಮನವಿ ಮಾಡಿದರೂ ಅರ್ಜಿದಾರ ಹಣ ನೀಡದಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಣ ಕೇಳಲು ಮೃತ ಮಹಿಳೆ ಕರೆ ಮಾಡಿದಾಗ ‘ನೀನು ಹೋಗಿ ಸಾಯಿ; ನಿನಗೆ ಇಷ್ಟ ಬಂದ ಹಾಗೆ ಮಾಡು. ನಾನು ದುಡ್ಡು ಕೊಡುವುದಿಲ್ಲ’ ಎಂಬುದಾಗಿ ಅರ್ಜಿದಾರ ಹೇಳಿದ್ದಾನೆ. ಇದು ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದನ್ನು ಸ್ಪಷ್ಟಪಡಿಸುತ್ತದೆ. ಡೆತ್‌ನೋಟ್‌ನಲ್ಲಿ ಅರ್ಜಿದಾರರ ಹೆಸರು ಇದೆ. ಅದು ಮಹಿಳೆಗೆ ಸಾವಿಗೆ ಅರ್ಜಿದಾರನೇ ಕಾರಣ ಎಂಬುದಕ್ಕೆ ಸ್ವಯಂ ವಿವರಣೆ ನೀಡಲಿದ್ದು, ಆತನಿಗೆ ಜಾಮೀನು ನೀಡಬಾರದೆಂದು ಪ್ರಾಸಿಕ್ಯೂಷನ್‌ ವಾದಿತ್ತು.
ಆ ವಾದವನ್ನು ತಿರಸ್ಕರಿಸಿದ ಹೈಕೋರ್ಟ್‌, ಯಾವಾಗ ಹಣಕಾಸು ವ್ಯವಹಾರ ನಡೆದಿತ್ತು? ಅರ್ಜಿದಾರನಿಗೆ ಯಾವಾಗ ಕರೆ ಮಾಡಲಾಗಿತ್ತು? ಆ ಸಮಯದಲ್ಲಿ ಯಾವೆಲ್ಲಾ ಸಂಭಾಷಣೆ ನಡೆದಿತ್ತು? ಎಂಬ ಬಗ್ಗೆ ನಿಖರವಾಗಿ ಡೆತ್‌ನೋಟ್‌ನಲ್ಲಿ ಮೃತರು ಬರೆದಿಲ್ಲ. ಡೆತ್‌ನೋಟ್‌ನಲ್ಲಿ ಹೆಸರಿದೆ ಎಂಬ ಮಾತ್ರಕ್ಕೆ ಅರ್ಜಿದಾರನೇ ಮೃತರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ. ಆತ ಹೇಳಿದ್ದರಿಂದಲೇ ಮೃತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ತೀರ್ಮಾನಕ್ಕೆ ಬರಲಾಗದು ಎಂದು ಅಭಿಪ್ರಾಯಪಟ್ಟಿತು.

KAS ನೇಮಕ ಲೋಪ: ಸರಿಪಡಿಸದಿದ್ರೆ KPSC ವಿರುದ್ಧ ನ್ಯಾಯಾಂಗ ನಿಂದನೆ

ಅಲ್ಲದೆ, ಇನ್ನು ಮೃತ ಮಹಿಳೆ ಆತ್ಮಹತ್ಯೆಗೆ ಶರಣಾದ ದಿನದ (2020ರ ಜುಲೈ 28) ಮಧ್ಯಾಹ್ನದಂದು ಪುತ್ರನ ಜೊತೆಗೆ ಊಟ ಮಾಡಿದ್ದಾರೆ. ಅರ್ಜಿದಾರನ ಜೊತೆಗೆ ಹಣಕಾಸು ವ್ಯಹಿವಾಟು ಇದ್ದಿದ್ದರೆ, ಆ ಬಗ್ಗೆ ಸಾಯುವ ಮುನ್ನ ಮಗನಿಗೆ ಮಾಹಿತಿ ನೀಡಬೇಕಿತ್ತು. ಆದರೆ, ಮಗನಿಗೆ ಯಾವುದೇ ಮಾಹಿತಿ ನೀಡಿಲ್ಲ ಹಾಗೂ ಮಾತುಕತೆಯೂ ನಡೆಸಿಲ್ಲ. ಡೆತ್‌ನೋಟ್‌ನಲ್ಲಿ ಹೆಸರಿದೆ ಎಂಬ ಕಾರಣ ಪರಿಗಣಿಸಿ ಜಾಮೀನು ನಿರಾಕರಿಸಲಾಗದು. ಡೆತ್‌ನೋಟ್‌ ಮತ್ತು ಇತರೆ ವಿಚಾರಗಳು ವಿಚಾರಣಾ ನ್ಯಾಯಾಲಯದ ವಿಚಾರಣೆಯಲ್ಲಿ ಪರಿಗಣಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್‌, ಆರೋಪಿ ಪದ್ಮನಾಭ ರೆಡ್ಡಿಗೆ ಜಾಮೀನು ನೀಡಿತು.

ಪ್ರಕರಣವೇನು?

ವನಜಾಕ್ಷಿ ಎಂಬ ಮಹಿಳೆಯು 2020ರ ಜುಲೈ 28ರಂದು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತದೇಹದ ಪಕ್ಕದಲ್ಲಿ ಡೆತ್‌ನೋಟ್‌ ಸಿಕ್ಕಿತ್ತು. ಅದರಲ್ಲಿ ಪದ್ಮನಾಭ ರೆಡ್ಡಿ ಸೇರಿ ಮೂವರ ಹೆಸರಿತ್ತು. ಇದರಿಂದ ಮೃತರ ಪುತ್ರ ಅಭಿಷೇಕ ನೀಡಿದ ದೂರು ಆಧರಿಸಿ ಎಚ್‌ಎಸ್‌ಆರ್‌ ಲೇಔಟ್‌ ಠಾಣಾ ಪೊಲೀಸರು ಐಪಿಸಿ ಸೆಕ್ಷನ್‌ 306 (ಆತ್ಮಹತ್ಯೆಗೆ ಪ್ರಚೋದನೆ) ಪ್ರಕರಣದಡಿ ಎಫ್‌ಐಆರ್‌ ದಾಖಲಿಸಿ ಪದ್ಮನಾಭ ರೆಡ್ಡಿಯನ್ನು ಬಂಧಿಸಿದ್ದರು. ಅಧೀನ ನ್ಯಾಯಾಲಯ ಜಾಮೀನು ನಿರಾಕರಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇದರಿಂದ ಜಾಮೀನು ಕೋರಿ ಆತ ಹೈಕೋರ್ಟ್‌ ಮೊರೆ ಹೋಗಿದ್ದ.