Asianet Suvarna News Asianet Suvarna News

ಇನ್ಮುಂದೆ ಕೋರ್ಟ್‌ನಲ್ಲಿ ಹೆಂಗ್‌ ಬೇಕೋ ಹಂಗೆ ಆರೋಪಿಗಳ ಪ್ರಶ್ನೆ ಕೇಳುವಂತಿಲ್ಲ

  • ಹೈಕೋರ್ಟ್‌, ಪ್ರಶ್ನಾವಳಿ ಸಿದ್ಧಪಡಿಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾರ್ಗಸೂಚಿ
  • *ಆರೋಪಿ ನೀಡುವ ಉತ್ತರ, ವಿವರಣೆಯನ್ನು ದಾಖಲಿಸಿಕೊಳ್ಳಬೇಕು
  • *ಸತ್ಯ ಅಥವಾ ಸುಳ್ಳು ಎಂಬ ಏಕಪದದ ಉತ್ತರ ನೀಡಲು ಸೂಚಿಸಬಾರದು
     
High Court Rules For questioning accused snr
Author
Bengaluru, First Published Oct 19, 2021, 7:27 AM IST

ವರದಿ :  ವೆಂಕಟೇಶ್‌ ಕಲಿಪಿ

 ಬೆಂಗಳೂರು (ಅ.19):  ಅಪರಾಧ ಪ್ರಕರಣಗಳ (Case) ಆರೋಪಿಗಳ (accused) ವಿಚಾರಣೆ ಸಂದರ್ಭದಲ್ಲಿ ವಿಚಾರಣಾ ನ್ಯಾಯಾಲಯಗಳು (Court) ಸೂಕ್ತ ರೀತಿಯಲ್ಲಿ ಪ್ರಶ್ನಾವಳಿ ಸಿದ್ಧಪಡಿಸದೆ ಇರುವುದನ್ನು ಮನಗಂಡಿರುವ ಹೈಕೋರ್ಟ್‌ (High Court), ಪ್ರಶ್ನಾವಳಿ ಸಿದ್ಧಪಡಿಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾರ್ಗಸೂಚಿ ರಚಿಸಿದೆ.

ಆರೋಪಿ ನೀಡಿದ ಉತ್ತರ (Answer) ಮತ್ತು ವಿವರಣೆಯನ್ನು ವಿಚಾರಣಾ ನ್ಯಾಯಾಲಯ ದಾಖಲಿಸಿಕೊಳ್ಳಬೇಕೆ ಹೊರತು ‘ಸುಳ್ಳು ಮತ್ತು ಸತ್ಯ’ ಎಂಬುದಾಗಿ ಏಕ ಪದದಲ್ಲಿ ಉತ್ತರ ನೀಡುವಂತೆ ಆರೋಪಿಗೆ ಸೂಚಿಸಬಾರದು ಎಂಬುದು ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ಹೈಕೋರ್ಟ್‌ ರಚಿಸಿದೆ.

13 ವರ್ಷ ಹಿಂದೆ ಲಂಚ ಪಡೆದಿದವಗೆ ಈಗ 2 ವರ್ಷ ಶಿಕ್ಷೆ

ಮೈಸೂರಿನ ಟಿ.ನರಸೀಪುರ (T Narasipura) ಪೊಲೀಸ್‌ ಠಾಣೆಯಲ್ಲಿ (Police station) ದಾಖಲಾಗಿದ್ದ ಕೊಲೆ ಪ್ರಕರಣವೊಂದರ ಆರೋಪಿಗಳಿಬ್ಬರಿಗೆ ವಿಚಾರಣಾ ನ್ಯಾಯಾಲಯ ಸೂಕ್ತ ರೀತಿಯಲ್ಲಿ ಪ್ರಶ್ನೆ ಕೇಳದ ಮತ್ತು ಅವರಿಗೆ ವಿವರಣೆ ನೀಡಲು ಅವಕಾಶ ನೀಡದ ಪ್ರಕರಣದಲ್ಲಿ ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರ ನ್ಯಾಯಪೀಠ ಈ ಮಾರ್ಗಸೂಚಿಗಳನ್ನು ರಚಿಸಿದೆ.

ಹೈಕೋರ್ಟ್‌ ನಿರ್ದೇಶನ:

ಪ್ರಶ್ನಾವಳಿ ಸಿದ್ಧಪಡಿಸುವ ವೇಳೆ ಈ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ರಿಜಿಸ್ಟ್ರಾರ್‌ ಜನರಲ್‌ ಈ ಆದೇಶ ಪ್ರತಿಯನ್ನು ರಾಜ್ಯದ ಎಲ್ಲ ವಿಚಾರಣಾ ನ್ಯಾಯಾಲಯಗಳಿಗೆ ಕಳುಹಿಸಬೇಕು. ರಾಜ್ಯ ನ್ಯಾಯಾಂಗ ಅಕಾಡೆಮಿ ಮಾದರಿ ಪ್ರಶ್ನಾವಳಿ ಸಿದ್ಧಪಡಿಸಿ, ಮಾರ್ಗದರ್ಶನಕ್ಕಾಗಿ ಎಲ್ಲ ವಿಚಾರಣಾ ನ್ಯಾಯಾಲಯಗಳಿಗೆ ರವಾನಿಸಬೇಕೆಂದು ಹೈಕೋರ್ಟ್‌ (High Court) ನಿರ್ದೇಶಿಸಿದೆ.

ಪ್ರಕರಣದ ಆರೋಪಿಗಳಾದ ಮೀನಾಕ್ಷಿ ಮತ್ತು ತ್ರಿನೇತ್ರ ವಿರುದ್ಧ ಮೈಸೂರಿನ 2ನೇ ಹೆಚ್ಚುವರಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ 2021ರ ಫೆ.22ಂದು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (CRPC)) ಸೆಕ್ಷನ್‌ 313 ಅಡಿಯಲ್ಲಿ ಆರೋಪಿಗಳ ವಿರುದ್ಧ ದಾಖಲಿಸಿದ್ದ ಹೇಳಿಕೆಗಳನ್ನು ರದ್ದುಪಡಿಸಿ, ಹೊಸದಾಗಿ ದಾಖಲಿಸಬೇಕು ಎಂದು ಆದೇಶಿಸಿದೆ.

ಆರೋಪಿಗಳ ಸಂಖ್ಯೆಗೆ ಅನುಗುಣವಾಗಿ ಪ್ರಶ್ನಾವಳಿ ಸಿದ್ಧಪಡಿಸುವುದು ವಾಡಿಕೆ. ಎಲ್ಲ ಪ್ರಶ್ನಾವಳಿ (question) ಗುಚ್ಛದಲ್ಲಿ ಅದೇ ಪ್ರಶ್ನೆಗಳು ಪುನಾರಾವರ್ತನೆಯಾಗಿರುತ್ತದೆ. ಪ್ರತಿ ಆರೋಪಿಗೂ ವೈಯಕ್ತಿಕವಾಗಿ ಪ್ರಶ್ನೆ ಕೇಳಲಾಗುತ್ತದೆ. ಪ್ರತಿಯೊಂದು ಪ್ರಶ್ನಾವಳಿ ಗುಚ್ಛಕ್ಕೆ ಕೇವಲ ಓರ್ವ ಆರೋಪಿಯ ಸಹಿ ಪಡೆಯಲಾಗುತ್ತದೆ. ಆರೋಪಿಗಳ ಸಂಖ್ಯೆಗೆ ಸಮಾನವಾಗಿ ಪ್ರಶ್ನಾವಳಿ ಸಿದ್ಧಪಡಿಸುವುದು ಸರಿಯಾದ ಪ್ರಕ್ರಿಯೆಯಲ್ಲ ಎಂದು ಹೈಕೋರ್ಟ್‌ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಮಾರ್ಗಸೂಚಿಗಳು

1. ಸಾಮಾನ್ಯ ಭಾಷೆಯಲ್ಲಿ ಸಾಧ್ಯವಾದ ಮಟ್ಟಿಗೆ ಚಿಕ್ಕ ವಾಕ್ಯಗಳ ಪ್ರಶ್ನೆ ಸಿದ್ಧಪಡಿಸಬೇಕು

2. ಮೌಖಿಕ ಹಾಗೂ ಲಿಖಿತ ಸಾಕ್ಷ್ಯಗಳಿಂದ ದೋಷಾರೋಪ ಸಾಕ್ಷ್ಯಗಳನ್ನು ಮಾತ್ರ ಆಯ್ಕೆ ಮಾಡಬಹುದು

3. ಸಾಕ್ಷಿದಾರ ಕೆಲವೊಮ್ಮೆ ಎರಡು ಮತ್ತು ಅದಕ್ಕಿಂತ ಹೆಚ್ಚು ಆರೋಪಿಗಳ ಕೃತ್ಯದ ಬಗ್ಗೆ ಸಾಕ್ಷ್ಯ ಹೇಳುವಾಗ ಒಂದೇ ಪ್ರಶ್ನೆ ಸಿದ್ಧಪಡಿಸಬೇಕು. ಪ್ರತಿ ಆರೋಪಿಯನ್ನು ವೈಯಕ್ತಿಕವಾಗಿ ಪ್ರಶ್ನೆ ಮಾಡಿ, ಅವರ ಉತ್ತರ ಪ್ರತ್ಯೇಕವಾಗಿ ದಾಖಲಿಸಬೇಕು

4. ಎರಡು, ಅದಕ್ಕಿಂತ ಹೆಚ್ಚು ಸಾಕ್ಷಿದಾರರು ಆರೋಪಿಗಳ ಕೃತ್ಯದ ಬಗ್ಗೆ ಸಾಮೂಹಿಕ ಸಾಕ್ಷ್ಯ ನುಡಿಯುವ ಸಾಧ್ಯತೆಯಿರುವಾಗ ಒಂದೇ ಪ್ರಶ್ನೆ ಕೇಳಬಹುದು

5. ದೋಷಾರೋಪಣೆಗಳು ಇರುವ ಸಂದರ್ಭದಲ್ಲಿ ಪಟ್ಟಿಮಾಡಲಾಗಿರುವ ದಾಖಲೆ ಮತ್ತು ವಸ್ತುಗಳ ಕುರಿತು ಆರೋಪಿಗಳ ಗಮನ ಸೆಳೆಯಬೇಕು

6. ಔಪಚಾರಿಕ ಸಾಕ್ಷಿಗಳು ನೀಡಿದ ಸಾಕ್ಷ್ಯದ ಬಗ್ಗೆ ಆರೋಪಿಯನ್ನು ಪ್ರಶ್ನೆ ಮಾಡುವ ಅಗತ್ಯವಿಲ್ಲ.

7. ಎರಡು, ಅದಕ್ಕಿಂತ ಹೆಚ್ಚು ಆರೋಪಿಗಳು ಇದ್ದು, ಅವರು ಸಾಮೂಹಿಕವಾಗಿ ಅಪರಾಧ ಕೃತ್ಯ ಎಸಗಿದ ಸಂದರ್ಭದಲ್ಲಿ ಆರೋಪಿಗಳ ಸಂಖ್ಯೆಗೆ ಅನುಗುಣವಾಗಿ ಪ್ರಶ್ನಾವಳಿ ಗುಚ್ಛ ಸಿದ್ಧಪಡಿಸುವ ಅಗತ್ಯವಿಲ್ಲ. ಒಂದು ಪ್ರಶ್ನಾವಳಿ ಸಿದ್ಧಪಡಿಸಿದರೆ ಸಾಕು. ನಿರ್ದಿಷ್ಟಆರೋಪಿಗೆ ವೈಯಕ್ತಿಕವಾಗಿ ಅಥವಾ ಸಾಮೂಹಿಕವಾಗಿ ಪ್ರಶ್ನೆ ಕೇಳಬಹುದು.

8. ಆರೋಪಿಯು ನೀಡಿದ ಉತ್ತರ-ವಿವರಣೆಯನ್ನು ದಾಖಲಿಸಿಕೊಳ್ಳಬೇಕೇ ಹೊರತು ಉತ್ತರವನ್ನು ‘ಸುಳ್ಳು ಮತ್ತು ಸತ್ಯ’ ಎಂಬುದಾಗಿ ಏಕ ಪದದಲ್ಲಿ ಉತ್ತರಿಸುವಂತೆ ಆರೋಪಿಗೆ ಸೂಚಿಸಬಾರದು.

9. ಸಿಆರ್‌ಪಿಸಿ ಸೆಕ್ಷನ್‌ 313ಕ್ಕೆ 2009ರಲ್ಲಿ ತಂದ ತಿದ್ದುಪಡಿ ಪ್ರಕಾರ ಆರೋಪಿಗಳಿಗೆ ಕೇಳಬಹುದಾದ ಪ್ರಶ್ನೆಗಳನ್ನು ಸಿದ್ಧಪಡಿಸಿಕೊಡಲು ಸರ್ಕಾರಿ ಅಭಿಯೋಜಕರು/ಡಿಫೆನ್ಸ್‌ ವಕೀಲರಿಗೆ ನ್ಯಾಯಾಧೀಶರು ಸೂಚಿಸಬಹುದಾಗಿದೆ. ಅವರು ಸಿದ್ಧಪಡಿಸಿದ ಪ್ರಶ್ನೆಗಳನ್ನು ಪರಿಶೀಲಿಸಿ ಅಗತ್ಯವಿದ್ದರೆ ತಿದ್ದುಪಡಿ ಮಾಡಬಹುದು.

10. ಪ್ರಶ್ನೆಯನ್ನು ಕೇಳಿ ಉತ್ತರ ನಮೂದಿಸಿಕೊಳ್ಳುವ ಬದಲಾಗಿ ಪ್ರಶ್ನೆಗಳಿಗೆ ಲಿಖಿತ ಉತ್ತರ ದಾಖಲಿಸಲು ಆರೋಪಿಗೆ ಸೂಚಿಸಬಹುದು.

Follow Us:
Download App:
  • android
  • ios