ಅಬಕಾರಿ ಅಧಿಕಾರಿಗಳು ವಾರೆಂಟ್‌ ಇಲ್ಲದೆ ದಾಳಿ ಮಾಡಿ ಶೋಧ ನಡೆಸಿದ ಹಿನ್ನೆಲೆಯಲ್ಲಿ ಅರ್ಜಿದಾರರ ವಿರುದ್ಧ ದಾಖಲಿಸಿದ್ದ ಎಫ್‌ಐಆರ್‌ ಅನ್ನು ರದ್ದುಪಡಿಸಿ ಆದೇಶಿಸಿದ ಹೈಕೋರ್ಟ್‌

ಬೆಂಗಳೂರು(ಡಿ.29):  ಮದ್ಯ ಮಾರಾಟಕ್ಕೆ ಮಾತ್ರ ಪರವಾನಗಿ ಪಡೆದಿದ್ದರೂ ಮದ್ಯಪಾನಕ್ಕೆ ಸ್ಥಳಾವಕಾಶ ಕಲ್ಪಿಸಿದ ಮತ್ತು ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಿದ ಪ್ರಕರಣದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ವಾರಂಟ್‌ ಇಲ್ಲದೆ ಮದ್ಯದಂಗಡಿ ಮೇಲೆ ದಾಳಿ ನಡೆಸುವಂತಿಲ್ಲ ಎಂದು ಹೈಕೋರ್ಟ್‌ ಆದೇಶಿಸಿದೆ. ಸಿಎಲ್‌-2 ಪರವಾನಗಿ ಷರತ್ತು ಉಲ್ಲಂಘನೆ ಸಂಬಂಧ ತಮ್ಮ ಮದ್ಯದಂಗಡಿ ಮೇಲೆ ವಾರೆಂಟ್‌ ಇಲ್ಲದೆ ದಾಳಿ ನಡೆಸಿ ಬಳಿಕ ಎಫ್‌ಐಆರ್‌ ದಾಖಲಿಸಿದ ಅಬಕಾರಿ ಇನ್ಸ್‌ಪೆಕ್ಟರ್‌ ಕ್ರಮ ಪ್ರಶ್ನಿಸಿ ಕೊಪ್ಪಳದ ಎಂ.ಸುದರ್ಶನ ಗೌಡ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅವರ ಪೀಠ ಈ ಆದೇಶ ಮಾಡಿದೆ.

ಅಲ್ಲದೆ, ಸಿಎಲ್‌-2 ಪರವಾನಗಿದಾರರು ಪರವಾನಗಿ ಷರತ್ತು ಉಲ್ಲಂಘಿಸಿರುವ ಪ್ರಕರಣದಲ್ಲಿ ಅಬಕಾರಿ ನಿರೀಕ್ಷಕರು ವಾರಂಟ್‌ ಪಡೆದು ದಾಳಿ ನಡೆಸಬೇಕು. ಇಲ್ಲವೇ ಷರತ್ತು ಉಲ್ಲಂಘನೆಯಾಗಿದೆ ಎಂದು ತಿಳಿದುಬಂದರೆ, ಶೋಧ ನಡೆಸುವುದಕ್ಕೆ ಇರುವ ಅಗತ್ಯ ಕಾರಣಗಳನ್ನು ದಾಖಲಿಸಿದ ಬಳಿಕ ಮದ್ಯದಂಗಡಿ ಮೇಲೆ ದಾಳಿ ನಡೆಸಿ ಶೋಧ ಮಾಡಬಹುದು. ಜತೆಗೆ, ಅಲ್ಲಿ ಅಕ್ರಮ ನಡೆಯುತ್ತಿದ್ದರೆ ಜಪ್ತಿ ಕಾರ್ಯ ಮಾಡಬಹುದು. ಆದರೆ, ವಾರಂಟ್‌ ಇಲ್ಲದೆ ದಾಳಿ ನಡೆಸುವಂತಿಲ್ಲ ಎಂದು ಆದೇಶದಲ್ಲಿ ನ್ಯಾಯಪೀಠ ಅಭಿಪ್ರಾಯಟ್ಟಿದೆ.

ಅಪ್ರಾಪ್ತರ ಪಾಸ್‌ಪೋರ್ಟ್‌ ಗೊಂದಲ ಪರಿಹರಿಸಿ: ಹೈಕೋರ್ಟ್‌

ಪ್ರಕರಣವೇನು?:

ಅರ್ಜಿದಾರ ಎಂ.ಸುದರ್ಶನ್‌ಗೌಡ ಕೊಪ್ಪಳ ಜಿಲ್ಲೆಯ ಆಗಲಕೆರೆ ಎಂಬಲ್ಲಿ ಸಿಎಲ್‌-2 ಪರವಾನಿಗೆ ಪಡೆದಿದ್ದರು. ಈ ಮಳಿಗೆಯಲ್ಲಿ ಮಾರಾಟಕ್ಕೆ ಮಾತ್ರ ಅವಕಾಶವಿದ್ದರೂ, ಗ್ರಾಹಕರಿಗೆ ಮದ್ಯಪಾನ ಮಾಡಲು ಅವಕಾಶ ನೀಡಿದ ಮತ್ತು ಎಂಆರ್‌ಪಿಗಿಂತ (ಗರಿಷ್ಠ ಚಿಲ್ಲರೆ ದರ) ಅಧಿಕ ದರಕ್ಕೆ ಮದ್ಯಬಾಟಲಿ ಮಾರಾಟ ಮಾಡಿದ ಸಂಬಂಧ ಅರ್ಜಿದಾರರ ಮೇಲೆ ಆರೋಪ ಕೇಳಿಬಂದಿತ್ತು.

ಇದರಿಂದ ಕೊಪ್ಪಳ ವಲಯ ಅಬಕಾರಿ ನಿರೀಕ್ಷಕರು, ಅರ್ಜಿದಾರರ ಮದ್ಯದಂಗಡಿ ಮೇಳೆ ದಾಳಿ ನಡೆಸಿ ಶೋಧ ನಡೆಸಿದ್ದರು. ನಂತರ ಎಫ್‌ಐಆರ್‌ ದಾಖಲಿಸಿದ್ದರು. ಅದನ್ನು ರದ್ದುಪಡಿಸಲು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಸುದರ್ಶನ್‌, ವಾರೆಂಟ್‌ ಇಲ್ಲದೆ ದಾಳಿ ನಡೆಸಲಾಗಿದೆ. ಅದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ವಾದ ಮಂಡಿಸಿದ್ದರು. ಈ ವಾದ ಪರಿಗಣಿಸಿದ ಹೈಕೋರ್ಟ್‌, ಅಬಕಾರಿ ಅಧಿಕಾರಿಗಳು ವಾರೆಂಟ್‌ ಇಲ್ಲದೆ ದಾಳಿ ಮಾಡಿ ಶೋಧ ನಡೆಸಿದ ಹಿನ್ನೆಲೆಯಲ್ಲಿ ಅರ್ಜಿದಾರರ ವಿರುದ್ಧ ದಾಖಲಿಸಿದ್ದ ಎಫ್‌ಐಆರ್‌ ಅನ್ನು ರದ್ದುಪಡಿಸಿ ಆದೇಶಿಸಿದೆ.