ಬೆಂಗಳೂರು(ಡಿ.09): ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ರಾಜ್ಯದಲ್ಲಿ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಮಕ್ಕಳಿಗೆ ಪಡಿತರ ವಿತರಿಸಲು ಅನುಸರಿಸುತ್ತಿರುವ ಕ್ರಮಕ್ಕೆ ಸರ್ಕಾರದ ವಿರುದ್ಧ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.\

ಕೊರೋನಾ ಸೋಂಕು ತಡೆಯಲು ಲಾಕ್‌ಡೌನ್‌ ಘೋಷಿಸಿದ ಪರಿಣಾಮ ಸಾರ್ವಜನಿಕರಿಗೆ ಉಂಟಾದ ಅನನುಕೂಲತೆ ಬಗೆಹರಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು, ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.

ಬಿಸಿಯೂಟ ವಂಚಿತ ಮಕ್ಕಳಿಗೆ ಪಡಿತರ ಭಾಗ್ಯ..!

ಪ್ರಾಥಮಿಕ ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಿ, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ. ಇದೀಗ ಯೋಜನೆಯಡಿ ಮಕ್ಕಳಿಗೆ ಆಹಾರ ಧಾನ್ಯ ಒದಗಿಸಲಾಗುತ್ತದೆ. ಉಪ್ಪು, ಎಣ್ಣೆ ಮತ್ತು ಬೇಳೆ ಸಂಗ್ರಹಿಸಿ ವಿತರಿಸಲು ಕರ್ನಾಟಕ ಆಹಾರ ನಿಗಮಕ್ಕೆ(ಕೆಎಸ್‌ಸಿಎಸ್‌ಸಿ) ಡಿ. 5 ರಂದೇ ಆದೇಶ ಹೊರಡಿಸಲಾಗಿದೆ. 2020ರ ಆಗಸ್ಟ್‌ನಿಂದ ಐದು ತಿಂಗಳ ಲೆಕ್ಕಚಾರದಲ್ಲಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ ಒಂದು ಕೆ.ಜಿ. ಅಯೋಡೈಸ್ಡ್‌ ಉಪ್ಪು, ತೊಗರಿ ಬೇಳೆ ಮತ್ತು ಅಡುಗೆ ಎಣ್ಣೆ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪಡಿತರವನ್ನು ಯಾವ ರೀತಿಯಲ್ಲಿ ಹಂಚಿಕೆ ಮಾಡುತ್ತಿದ್ದೀರಿ? ಉಪ್ಪು ಮತ್ತು ಅಡುಗೆ ಎಣ್ಣೆ ಬದಲಿಗೆ ತೊಗರಿ ಬೇಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ವಿತರಿಸಲು ಸಾಧ್ಯವೇ ಎಂದು ಪ್ರಶ್ನಿಸಿತು.

ಉಮಾಶಂಕರ್‌ ಉತ್ತರಿಸಿ, ಮಾರುಕಟ್ಟೆಯಲ್ಲಿ ಬೆಲೆ ಹೇಗಿರುತ್ತದೆಯೋ ಅದರ ಮೇಲೆ ತೊಗರಿ ಬೇಳೆ ಎಷ್ಟುನೀಡಬೇಕು ಎಂಬುದು ನಿರ್ಧಾರವಾಗುತ್ತದೆ. ಅದೆಲ್ಲವನ್ನೂ ಇಲಾಖೆಯ ಆಯುಕ್ತರು ನೋಡಿಕೊಳ್ಳುತ್ತಾರೆ ಎಂದರು. ಇದರಿಂದ ಅಸಮಾಧಾನಗೊಂಡ ನ್ಯಾಯಪೀಠ, ಇಲಾಖೆ ಮುಖ್ಯಸ್ಥರಾಗಿ ನಿಮಗೇ ಎಷ್ಟು ತೊಗರಿ ಬೇಳೆ ವಿತರಿಸಬೇಕು ಎಂಬುದರ ಲೆಕ್ಕ ಗೊತ್ತಿಲ್ಲದಿದ್ದರೆ ಹೇಗೆ ಎಂದು ಪ್ರಶ್ನಿಸಿತು. ಹಾಗೆಯೇ, ಮಾರುಕಟ್ಟೆ ಬೆಲೆ ಆಧಾರದಲ್ಲಿ ಪಡಿತರ ಎಷ್ಟು ಪ್ರಮಾಣದಲ್ಲಿ ಪಡಿತರ ವಿತರಿಸಬೇಕು ಎಂಬುದನ್ನು ನಿರ್ಧರಿಸುವುದು ಸರಿಯಲ್ಲ. ಉಪ್ಪು ಮತ್ತು ಎಣ್ಣೆ ಕಡಿಮೆ ದರಕ್ಕೆ ಸಿಗುತ್ತವೆ ಎಂಬ ಕಾರಣಕ್ಕೆ ಹೆಚ್ಚಾಗಿ ನೀಡುವ ಅಗತ್ಯವಿಲ್ಲ. ಅವುಗಳನ್ನು ಕಡಿಮೆ ಮಾಡಿ ಬೇಳೆ ಹಾಗೂ ಇತರೆ ದವಸಗಳನ್ನು ನೀಡಲು ಕ್ರಮ ಕೈಗೊಳ್ಳಬಹುದು. ಪಡಿತರ ವಿತರಣೆ ನಿಯಮಗಳನ್ನು ಅನುಸರಿಸಿ ಪ್ರತಿ ಮಗುವಿಗೆ ಆಹಾರ ಧಾನ್ಯ ವಿತರಿಸಬೇಕು ಎಂದು ಸೂಚಿಸಿತು.

2020ರ ಆಗಸ್ಟ್‌ನಿಂದ ಬಾಕಿಯಿರುವ ಪಡಿತರವನ್ನು ಶೀಘ್ರವಾಗಿ ತಲುಪಿಸಬೇಕು. ಮಾರ್ಚ್‌ನಿಂದ ಈವರೆಗೆ ಅಂಗನವಾಡಿಗಳಲ್ಲಿ ಪೂರೈಕೆಯಾಗಿರುವ ಪಡಿತರದ ಕುರಿತು ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.