ಶಕ್ತಿ ಯೋಜನೆ ಜಾರಿಯಾದ ನಂತರ ಬಸ್‌ಗಳಲ್ಲಿ ದಟ್ಟಣೆ ಉಂಟಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ, ಹಾಗಾದರೆ, ಯೋಜನೆ ಜಾರಿಯಾಗುವ ಮುನ್ನ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಇರಲಿಲ್ಲವೇ, ಯೋಜನೆಯಿಂದಾಗಿಯೇ ಬಸ್‌ಗಳಲ್ಲಿ ದಟ್ಟಣೆ ಉಂಟಾಗಿದೆಯೇ, ಯಾವ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ಇದೆ, ಸರ್ಕಾರಿ ಬಸ್‌ಗಳಲ್ಲಿ ಇಷ್ಟೇ ಜನರಿರಬೇಕೆಂಬ ನಿಯಮ ಇದೆಯೇ, ಮೊದಲು ಸಂಚಾರ ಸುಗಮವಾಗಿತ್ತೆ ಖಾರವಾಗಿ ಪ್ರಶ್ನಿಸಿದ ನ್ಯಾಯಪೀಠ.
ಬೆಂಗಳೂರು(ಸೆ.01): ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುವ ‘ಶಕ್ತಿ’ ಯೋಜನೆಯಿಂದ ಹಲವು ಸಮಸ್ಯೆಗಳು ಸೃಷ್ಟಿಯಾಗಿದೆ ಎಂದು ಆಕ್ಷೇಪಿಸಿ ಅರ್ಜಿ ಸಲ್ಲಿಸಿದ್ದ ಕಾನೂನು ವಿದ್ಯಾರ್ಥಿಗಳ ಬಗ್ಗೆ ಹೈಕೋರ್ಟ್ ಗುರುವಾರ ಅಸಮಾಧಾನ ವ್ಯಕ್ತಪಡಿಸಿದೆ.
ಬೆಂಗಳೂರಿನ ವಿವಿಧ ಕಾನೂನು ಕಾಲೇಜುಗಳ ಕಾನೂನು ವಿದ್ಯಾರ್ಥಿಗಳಾದ ಅಶ್ವಿನ್ ಶಂಕರ್ ಭಟ್, ನೇಹಾ ವೆಂಕಟೇಶ್ ಹಾಗೂ ಯಾಶಿಕಾ ಸರವಣ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಫ್ರೀ ಬಸ್ ಯೋಜನೆ ಉದ್ದೇಶ ಈಡೇರಿದೆ: ಸಿಎಂ ಸಿದ್ದರಾಮಯ್ಯ ಸಂತಸ
ಕೆಲ ಕಾಲ ಅರ್ಜಿದಾರರ ವಾದ ಆಲಿಸಿದ ನಂತರ ಪ್ರತಿಕ್ರಿಯಿಸಿದ ನ್ಯಾಯಪೀಠ, ಶಕ್ತಿ ಯೋಜನೆ ಜಾರಿಯಾದ ನಂತರ ಬಸ್‌ಗಳಲ್ಲಿ ದಟ್ಟಣೆ ಉಂಟಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ, ಹಾಗಾದರೆ, ಯೋಜನೆ ಜಾರಿಯಾಗುವ ಮುನ್ನ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಇರಲಿಲ್ಲವೇ, ಯೋಜನೆಯಿಂದಾಗಿಯೇ ಬಸ್‌ಗಳಲ್ಲಿ ದಟ್ಟಣೆ ಉಂಟಾಗಿದೆಯೇ, ಯಾವ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ಇದೆ, ಸರ್ಕಾರಿ ಬಸ್‌ಗಳಲ್ಲಿ ಇಷ್ಟೇ ಜನರಿರಬೇಕೆಂಬ ನಿಯಮ ಇದೆಯೇ, ಮೊದಲು ಸಂಚಾರ ಸುಗಮವಾಗಿತ್ತೆ ಖಾರವಾಗಿ ಪ್ರಶ್ನಿಸಿತು.
ಅರ್ಜಿ ಸಲ್ಲಿಸುವ ಮುನ್ನ ಅರ್ಜಿದಾರರು ಸಮರ್ಪಕ ಅಧ್ಯಯನ ನಡೆಸಿಲ್ಲ ಎಂದು ನುಡಿದ ನ್ಯಾಯಪೀಠ, ಏಕೆ ಸಾರಿಗೆ ನಿಯಮಗಳನ್ನು ಅಧ್ಯಯನ ನಡೆಸಿಲ್ಲ, ಸರ್ಕಾರ ದುರ್ಬಲ ವರ್ಗಗಳಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡಿದೆಯಲ್ಲವೇ, ಹಾಗಾದರೆ, ಯೋಜನೆಯನ್ನು ಪ್ರಶ್ನಿಸಲಾಗಿದೆಯೇ? ದಟ್ಟಣೆ ಕುರಿತು ಪರಿಹಾರ ಕೋರಲಾಗಿದೆಯೇ, ಮುಂಬೈ ಲೋಕಲ್ ರೈಲುಗಳ ದಟ್ಟಣೆಯ ನಿಮಗೆ ಅರಿವಿದೆಯೇ ಎಂದು ಪ್ರಶ್ನಿಸುವ ಮೂಲಕ ಬೇಸರ ವ್ಯಕ್ತಪಡಿಸಿತು.
ಅಂತಿಮವಾಗಿ ಸೂಕ್ತ ಅಧ್ಯಯನ ನಡೆಸಿದ ನಂತರ ಅಗತ್ಯ ದಾಖಲೆ ಹಾಗೂ ಸಿದ್ಧತೆಗಳೊಂದಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬಹುದು ಎಂದು ಸಲಹೆ ನೀಡಿದ ನ್ಯಾಯಪೀಠ, ಅರ್ಜಿ ಹಿಂಪಡೆಯಲು ಆರ್ಜಿದಾರರಿಗೆ ಅನುಮತಿ ನೀಡಿ ಆದೇಶಿಸಿತು.
ಉಚಿತ ಪ್ರಯಾಣದ ಶಕ್ತಿ ಯೋಜನೆ ನಿಲ್ಲುತ್ತಾ? ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಿಷ್ಟು..
ಶಕ್ತಿ ಯೋಜನೆಯಿಂದ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಕ ದಟ್ಟಣೆ ಹೆಚ್ಚಾಗಿ ಹಿರಿಯ ನಾಗರಿಕರು, ಮಕ್ಕಳು ಬಸ್‌ಗಳಲ್ಲಿ ಹತ್ತಲು ಆಗುತ್ತಿಲ್ಲ. ನಿಗದಿತ ಸಮಯಕ್ಕೆ ಶಾಲಾ-ಕಾಲೇಜು ತಲುಪಲು ಆಗುತ್ತಿಲ್ಲ. ಬಸ್‌ಗಳಲ್ಲಿ ಸೀಟು ಪಡೆಯಲು ಗಲಾಟೆ, ಹೊಡೆದಾಟ ಘಟನೆಗಳು ನಡೆದಿವೆ. ಉಚಿತ ಪ್ರಯಾಣದಿಂದ ವಾರಕ್ಕೆ 100 ಕೋಟಿ ರು. ತೆರಿಗೆದಾರರ ಹಣ ಸರ್ಕಾರಕ್ಕೆ ನಷ್ಟವಾಗುತ್ತಿದೆ. ಯೋಜನೆಗೆ ವಾರ್ಷಿಕ ಅಂದಾಜು 3,200ರಿಂದ 3,400 ಕೋಟಿ ರು. ವೆಚ್ಚವಾಗಲಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು.
ಶಾಲಾ ಮಕ್ಕಳು ಹಿರಿಯ ನಾಗರಿಕರಿಗೆ ಬಸ್ ಹತ್ತಿ-ಇಳಿಯಲು ಸೂಕ್ತ ವ್ಯವಸ್ಥೆ ಮಾಡಬೇಕು. ಶಾಲಾ ಮಕ್ಕಳಿಗೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಬೇಕು. ಟಿಕೆಟ್ ಪಡೆದವರಿಗೆ ಶೇ.50ರಷ್ಟುಸೀಟು ಮೀಸಲಿಡಬೇಕು. ದೂರದ ಊರುಗಳಿಗೆ ತೆರಳುವ ಬಸ್‌ಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಬಸ್‌ಗಳಲ್ಲಿ ಹತ್ತಲು ಮೊದಲು ಅವಕಾಶ ಮಾಡಿಕೊಡಬೇಕು. ದೂರದ ಊರುಗಳಿಗೆ ನಿಂತು ಪ್ರಯಾಣಿಸುವುದನ್ನು ನಿಷೇಧಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
