ಬೆಂಗಳೂರು[ನ.29]:  ವಿಶ್ವವಿದ್ಯಾಲಯಗಳು ಹಣ ಪಡೆದು ಅನರ್ಹರಿಗೆ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡುತ್ತಿರುವ ಪ್ರಕರಣಗಳ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸುವಂತೆ ಕೋರಿ ಸಲ್ಲಿಸಿದ ಅರ್ಜಿ ಕುರಿತು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ (ಯುಜಿಸಿ) ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಈ ಕುರಿತು ಮಂಡ್ಯ ಜಿಲ್ಲೆ ಮದ್ದೂರಿನ ಸಿ.ಎಚ್‌.ಸುರೇಶ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಎ.ಎಸ್‌.ಓಕ ಅವರ ನೇತೃತ್ವದ ವಿಭಾಗೀಯಪೀಠ, ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಸಲು ಸೂಚಿಸಿತು.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಅನರ್ಹತೆ ಇಲ್ಲದಿದ್ದರೂ ಅನೇಕರು ಮಾನ್ಯತೆ ಇಲ್ಲದ ಹಾಗೂ ನಕಲಿ ವಿಶ್ವವಿದ್ಯಾಲಯಗಳಿಗೆ ಹಣ ನೀಡಿ ಗೌರವ ಡಾಕ್ಟರೇಟ್‌ ಪದವಿ ಪಡೆದುಕೊಳ್ಳುತ್ತಿದೆ. ಇದೊಂದು ದಂಧೆಯಾಗಿದೆ. ಹಣ ಮಾಡುವ ಏಕೈಕ ಉದ್ದೇಶದಿಂದ ನಕಲಿ ವಿಶ್ವವಿದ್ಯಾಲಯಗಳು ಅಪರಾಧ ಹಿನ್ನೆಲೆಯುಳ್ಳವರು ಮತ್ತು ಅನಕ್ಷರಸ್ಥರಿಗೂ ಡಾಕ್ಟರೇಟ್‌ ಪದವಿ ನೀಡುತ್ತಿವೆ ಎಂದು ದೂರಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಲ್ಲದೆ, ಹಣ ಪಡೆದು ಗೌರವ ಡಾಕ್ಟರೇಟ್‌ ಪದವಿ ನೀಡುತ್ತಿರುವ ವಿಶ್ವವಿದ್ಯಾಲಯಗಳು ಹಾಗೂ ಸಂಸ್ಥೆಗಳ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಬೇಕು. ಗೌರವ ಡಾಕ್ಟರೇಟ್‌ ನೀಡಲು ನಿಗದಿತ ಮಾನದಂಡಗಳನ್ನು ರೂಪಿಸಲು ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.