ಬೆಂಗಳೂರು(ಮಾ.20):  ಮಾಜಿ ಸಚಿವರ ಸಿಡಿ ಬಹಿರಂಗ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಶ್ರವಣ್‌ ಕುಮಾರ್‌ನ ಸಹೋದರ ಚೇತನ್‌ನನ್ನು ಇಂದು(ಶನಿವಾರ) ಬೆಳಗ್ಗೆ 10.30ಕ್ಕೆ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಹೈಕೋರ್ಟ್‌ ನಿರ್ದೇಶಿಸಿದೆ.

ಎಸ್‌ಐಟಿ ಪೊಲೀಸರು ತಮ್ಮ ಮಗ ಚೇತನ್‌ ಅನ್ನು ಅಕ್ರಮ ಬಂಧನದಲ್ಲಿ ಇರಿಸಿದ್ದಾರೆ ಎಂದು ಆರೋಪಿಸಿ ಪಿ.ಸೂರ್ಯಕುಮಾರ್‌ ಸಲ್ಲಿಸಿರುವ ಹೇಬಿಯಸ್‌ ಕಾರ್ಪಸ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿತು.

ಆಪರೇಷನ್‌ ಗೌರಿ ರೀತಿ ಸೀಡಿ ಗ್ಯಾಂಗ್‌ ತನಿಖೆ!

ವಿಚಾರಣೆ ವೇಳೆ ಅರ್ಜಿದಾರ ಪರ ಹಿರಿಯ ವಕೀಲ ಎ.ಎಸ್‌.ಪೊನ್ನಣ್ಣ, ವಿಚಾರಣೆ ಹಾಜರಾಗಲು ತಿಳಿಸಿ ಎಸ್‌ಐಟಿ ಪೊಲೀಸರು ಚೇತನ್‌ಗೆ ನೋಟಿಸ್‌ ನೀಡಿದ್ದರು. ಅದರಂತೆ ಚೇತನ್‌ ವಿಚಾರಣೆಗೆ ಹಾಜರಾಗಲು ಮಾ.16ರಂದು ಮನೆಯಿಂದ ತೆರಳಿದ್ದು, ಬಳಿಕ ವಾಪಸ್‌ ಆಗಿಲ್ಲ. ಕುಟುಂಬ ಸದಸ್ಯರನ್ನೂ ಸಂಪರ್ಕಿಸಿಲ್ಲ. ಆತನನ್ನು ಎಸ್‌ಐಟಿ ಪೊಲೀಸರು ಅಕ್ರಮ ಬಂಧನದಲ್ಲಿ ಇರಿಸಿರುವ ಸಾಧ್ಯತೆಯಿದೆ ಎಂದು ತಿಳಿಸಿದರು.

ಚೇತನ್‌ ಮತ್ತು ಅಂಬುಜಾಕ್ಷಿ ಅವರು ಎಲ್ಲಿದ್ದರೂ ಪತ್ತೆ ಹಚ್ಚಿ ಶನಿವಾರ ಬೆಳಗ್ಗೆ 10.30ಕ್ಕೆ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರುಪಡಿಸಬೇಕು ಎಂದು ಎಸ್‌ಐಟಿಗೆ ನ್ಯಾಯಪೀಠ ತಾಕೀತು ಮಾಡಿತು. ಪೊಲೀಸರು ಬಂಧಿಸದೆ ಹೋದರೆ ಚೇತನ್‌ ಮತ್ತು ಅಂಬುಜಾಕ್ಷಿಯೇ ಕೋರ್ಟ್‌ಗೆ ಹಾಜರಾಗಿ, ತಮ್ಮನ್ನು ಪೊಲೀಸರು ಬಂಧಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ತಿಳಿಸಿ ವಿಚಾರಣೆ ಮುಂದೂಡಿತು.