ಅಕ್ರಮ ಸಂಬಂಧದ ಅಪರೂಪದ ಕೇಸ್ : 5 ವರ್ಷದ ಬಳಿಕ ಹೈ ಕೋರ್ಟ್ ಮಹತ್ವದ ತೀರ್ಪು
ಅಪರೂಪದ ಅಕ್ರಮ ಸಂಬಂಧದ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಹೈ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ವರದಿ : ವೆಂಕಟೇಶ್ ಕಲಿಪಿ
ಬೆಂಗಳೂರು (ನ.09): ಅಪರಾಧ ಕೃತ್ಯದಲ್ಲಿ ತಪ್ಪಿತಸ್ಥನಿಗೆ ಜೀವಾವಧಿ ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ಶಿಕ್ಷೆ ಅಮಾನತುಪಡಿಸಲು ಹಾಗೂ ಕ್ಷಮಾದಾನ ನೀಡಲು ರಾಜ್ಯ ಸರ್ಕಾರ ಹೊಂದಿರುವ ಅಧಿಕಾರವನ್ನು ಸೆಷನ್ಸ್ ನ್ಯಾಯಾಲಯ ನಿರ್ಬಂಧಿಸುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸಹೋದರನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಸಾವಿಗೆ ಕಾರಣವಾದ ಹಿನ್ನೆಲೆಯಲ್ಲಿ ಚಂದ್ರಶೇಖರ್ ಎಂಬಾತನಿಗೆ ಸಾಯುವವರೆಗೂ ಜೈಲುವಾಸ ಶಿಕ್ಷೆ ವಿಧಿಸಿ ಶಿವಮೊಗ್ಗದ 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶವನ್ನು ಆಕ್ಷೇಪಿಸಿದ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ. ಅಲ್ಲದೆ, ಜೀವಾವಧಿ ಶಿಕ್ಷೆ ವಿಧಿಸುವ ಬದಲು ಸಾಯುವವರೆಗೂ ಜೈಲುವಾಸ ಶಿಕ್ಷೆ ವಿಧಿಸುವ ಅಧಿಕಾರವೂ ಸೆಷನ್ಸ್ ನ್ಯಾಯಾಲಯಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಶಿಕ್ಷಕನ ಹೆಂಡ್ತಿ ಲವ್ವಿ-ಡವ್ವಿ : ಹೊಳೆದಂಡೇಲಿ ಅವನ ಜೊತೆ ಸಿಕ್ಕಿಬಿದ್ದು ದಾರುಣ ಅಂತ್ಯ ..
ಇದೇ ವೇಳೆ ಚಂದ್ರಶೇಖರ್‌ಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಸಾಯುವವರೆಗೂ ಜೈಲುವಾಸ ಶಿಕ್ಷೆಯನ್ನು ತಿದ್ದುಪಡಿ ಮಾಡಿದ ಹೈಕೋರ್ಟ್, ಐಪಿಸಿ ಸೆಕ್ಷನ್ 304(2) ಅಡಿಯಲ್ಲಿ ಏಳು ವರ್ಷ ಜೈಲು ಶಿಕ್ಷೆ ಮತ್ತು 15 ಸಾವಿರ ರು. ದಂಡ, ಸಾಕ್ಷ್ಯ ನಾಶ ಪ್ರಕರಣದಲ್ಲಿ ಮೂರು ವರ್ಷ ಜೈಲು ಮತ್ತು ಐದು ಸಾವಿರ ರು. ದಂಡ ವಿಧಿಸಿದೆ. ಈ ಎರಡೂ ಜೈಲು ಶಿಕ್ಷೆಯು ಏಕಕಾಲದಲ್ಲಿ ಜಾರಿಯಾಗಬೇಕು ಎಂದು ಸ್ಪಷ್ಟಪಡಿಸಿದೆ. ಚಂದ್ರಶೇಖರ್ ಈಗಾಗಲೇ ಐದು ವರ್ಷ ಜೈಲುವಾಸ ಪೂರೈಸಿದ್ದಾರೆ. ಹೈಕೋರ್ಟ್ ಅದೇಶದಿಂದ ಸಾಯುವವರೆಗೂ ಜೈಲಿನಲ್ಲಿಯೇ ಇರಬೇಕಿದ್ದ ಆತ ಎರಡು ವರ್ಷಗಳ ನಂತರ ಬಿಡುಗಡೆ ಹೊಂದಲಿದ್ದಾನೆ.
5 ವರ್ಷದ ಹಿಂದೆ ನಡೆದಿದ್ದ ಕೊಲೆ : ಶಿವಮೊಗ್ಗದ ಸಾಗರ ತಾಲೂಕಿನ ನಿವಾಸಿಯಾದ ತನ್ನ ಸಹೋದರ ದ್ಯಾವಪ್ಪ ಜೊತೆಗೆ ಅಕ್ರಮ ಸಂಬಂಧ ಹೊಂದಿದ ಕಾರಣಕ್ಕೆ ಸೀತಮ್ಮಳೊಂದಿಗೆ 2015ರ ಸೆಪ್ಟೆಂಬರ್ ಅಂತ್ಯದಲ್ಲಿ ಚಂದ್ರಶೇಖರ್ ಎಂಬಾತ ಜಗಳ ನಡೆಸಿದ್ದ. ಈ ವೇಳೆ ಜೋರಾಗಿ ತಳ್ಳಿದಾಗ ಕಲ್ಲಿನ ಮೇಲೆ ಬಿದ್ದ ಸೀತಮ್ಮ ಸಾವನ್ನಪ್ಪಿದ್ದಳು. ಮೃತದೇಹವನ್ನು ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಸಮಾಧಿ ಮಾಡಲಾಗಿತ್ತು. ಮೃತಳ ತಂದೆ ವೆಂಕಟಪ್ಪ ಮಗಳ ನಾಪತ್ತೆ ಕುರಿತು 2015ರ ಅ.4ರಂದು ನೀಡಿದ ದೂರು ಆಧರಿಸಿ ತನಿಖೆ ನಡೆಸಿದ್ದ ಸಾಗರ ತಾಲೂಕಿನ ಕರಿಗಲ್ ಪೊಲೀಸರು, ಚಂದ್ರಶೇಖರ್‌ನನ್ನು ಬಂಧಿಸಿದ್ದರು. ಘಟನೆ ಕುರಿತು ಆತ ತಪ್ಪೊಪ್ಪಿಕೊಂಡಿದ್ದ.
ಪಕ್ಕದ ಮನೆಯಲ್ಲಿ ಪ್ರೇಮಾಂಕುರ : 14ರ ಬಾಲಕನಿಂದ 12ರ ಬಾಲಕಿ ಗರ್ಭಿಣಿ!
ಶಿವಮೊಗ್ಗದ 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಚಂದ್ರಶೇಖರ್‌ನನ್ನು ದೋಷಿಯನ್ನಾಗಿ ತೀರ್ಮಾನಿಸಿತು. ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರು. ದಂಡ ವಿಧಿಸಿದ್ದ ನ್ಯಾಯಾಲಯ, ಸಾಯುವವರೆಗೂ ಜೈಲುವಾಸ ಮಾಡಬೇಕೆಂದು ಹೇಳಿತ್ತು. ಸಾಕ್ಷ್ಯನಾಶ ಪ್ರಕರಣಕ್ಕೆ 10 ವರ್ಷ ಜೈಲು ಮತ್ತು 10 ಸಾವಿರ ರು. ದಂಡ ವಿಧಿಸಿ 2015ರ ನ.16ರಂದು ಆದೇಶಿಸಿತ್ತು. ಅದೇಶ ರದ್ದತಿಗೆ ಕೋರಿ ಚಂದ್ರಶೇಖರ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಅಪರೂಪದ ಪ್ರಕರಣದಲ್ಲಿ ಸಾಯುವವರೆಗೂ ಜೈಲು!
ಮೇಲ್ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸೀತಮ್ಮ ಸಾವಿಗೆ ಚಂದ್ರಶೇಖರ್ ಕಾರಣ ಎಂಬುದು ಸಾಬೀತಾಗಿದೆ. ಆದರೆ, ಸೀತಮ್ಮಳನ್ನು ಸಾಯಿಸಬೇಕೆಂಬ ಉದ್ದೇಶ ತಪ್ಪಿತಸ್ಥನಿಗೆ ಇರಲಿಲ್ಲ. ಆರೋಪಿಯ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ. ವಿಚಾರಣಾ ನ್ಯಾಯಾಲಯ ಐಪಿಸಿ ಸೆಕ್ಷನ್ 302ರಡಿ ಕೊಲೆ ಎಂಬುದಾಗಿ ಪರಿಗಣಿಸಿ ಸಾಯುವವರೆಗೂ ಜೈಲು ಶಿಕ್ಷೆ ವಿಧಿಸಿದೆ. ಅತಿ ಅಪರೂಪದ ಪ್ರಕರಣದಲ್ಲಿ ಸಾಯುವವರೆಗೂ ಜೈಲು ಮತ್ತು ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ. ಸಾಯುವರೆಗೂ ಜೈಲುವಾಸ ಶಿಕ್ಷೆ ವಿಧಿಸುವ ಅಧಿಕಾರ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಮಾತ್ರ ಹೊಂದಿವೆಯೇ ಹೊರತು ಸೆಷನ್ಸ್ ಕೋರ್ಟ್ ಹೊಂದಿಲ್ಲ ಎಂದು ಆದೇಶಿಸಿದೆ.
ಆರೋಪಿ ಸಾಯುವವರೆಗೂ ಜೈಲು ವಾಸ ಅನುಭವಿಸಬೇಕೆಂದು ವಿಚಾರಣಾ ನ್ಯಾಯಾಲಯ ನೀಡಿರುವ ಆದೇಶ ದೋಷಪೂರಿತವಾಗಿದ್ದು, ಕಾನೂನಿನ ಮಾನ್ಯತೆ ಹೊಂದಿಲ್ಲ. ಇನ್ನು ಸಾಕ್ಷ್ಯ ನಾಶ ಪ್ರಕರಣದಲ್ಲಿ ಗರಿಷ್ಠ ಏಳು ವರ್ಷ ಜೈಲು ವಿಧಿಸಬಹುದು. ಈ ಪ್ರಕರಣದಲ್ಲಿ ಹತ್ತು ವರ್ಷ ಜೈಲು ವಿಧಿಸಲಾಗಿದೆ. ಆದ್ದರಿಂದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆ ಪ್ರಮಾಣವನ್ನು ತಿದ್ದುಪಡಿ ಮಾಡುವ ಹಾಗೂ ಕಡಿತಗೊಳಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.