ಬೆಂಗಳೂರು (ಸೆ.13) : ವಿವಾಹಿತ ಮುಸ್ಲಿಂ ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಎರಡನೇ ಮದುವೆಯಾಗುವ ಆಕೆಯ ಗಂಡನ ನಡೆ ಕ್ರೌರ್ಯ ಎಂದು ವ್ಯಾಖ್ಯಾನಿಸಿರುವ ಹೈಕೋರ್ಟ್‌, ಇಂತಹ ಕ್ರೌರ್ಯಕ್ಕೆ ಒಳಗಾದ ಮೊದಲ ಪತ್ನಿ ವಿಚ್ಛೇದನ ಪಡೆಯಲು ಅರ್ಹಳು ಎಂದು ಆದೇಶಿಸಿದೆ.

ಮೊದಲನೇ ಪತ್ನಿಯ ಜೊತೆಗಿನ ವಿವಾಹವನ್ನು ರದ್ದುಪಡಿಸಿದ ವಿಜಯಪುರ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಯೂಸುಫ್‌ ಪಟೇಲ್‌ ಎಂಬಾತ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಹಾಗೂ ನ್ಯಾಯಮೂರ್ತಿ ಪಿ.ಕೃಷ್ಣ ಭಟ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.

ಮುಸ್ಲಿಂ ಕಾನೂನಿನ ಪ್ರಕಾರ ಎರಡನೇ ಮದುವೆ ಕಾನೂನುಬದ್ಧವಾಗಿದ್ದರೂ, ವಿವಾಹಿತ ಮುಸ್ಲಿಂ ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಎರಡನೇ ಮದುವೆಯಾಗುವ ಆಕೆಯ ಗಂಡನ ನಡೆ ಕ್ರೌರ್ಯವೇ ಆಗಿರುತ್ತದೆ. ಗಂಡ ಮೊದಲ ಹೆಂಡತಿಯ ಸಮ್ಮತಿಯಿಲ್ಲದೆ ಎರಡನೇ ಮದುವೆ ಮಾಡಿಕೊಂಡರೆ ಅದರ ಆಧಾರದ ಮೇಲೆ ಆಕೆ ಸುಲಭವಾಗಿ ವಿಚ್ಛೇದನ ಪಡೆಯಬಹುದು. ಇದಕ್ಕೆ ಗಂಡನ ಆಕ್ಷೇಪವನ್ನು ಒಪ್ಪಲಾಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಗಂಡ ಹೆಂಡತಿಯ ಮೇಲೆ ನಡೆಸುವ ದೌರ್ಜನ್ಯವನ್ನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌, ಯಹೂದಿ ಎಂಬ ಧಾರ್ಮಿಕ ತಳಹದಿಯಲ್ಲಿ ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಯಾವುದೇ ಮತಪಂಥಕ್ಕೆ ಸೇರಿದ ಮಹಿಳೆ ಕ್ರೌರ್ಯಕ್ಕೆ ಒಳಗಾಗಿದ್ದಾಳೆ ಎಂದರೆ ಅದು ಕ್ರೌರ್ಯ ಮಾತ್ರವೇ ಆಗಿರುತ್ತದೆ ಹೊರತು ಬೇರೇನೂ ಅಲ್ಲ. ವೈವಾಹಿಕ ಜೀವನದಲ್ಲಿ ಕೌಟುಂಬಿಕ ದೌರ್ಜನ್ಯದ ಪರಿಭಾಷೆ ವ್ಯಾಖ್ಯಾನಕ್ಕೆ ಅತೀತವಾದದ್ದು ಎಂದು ನ್ಯಾಯಪೀಠ ವಿಶ್ಲೇಷಿಸಿ ಯೂಸುಫ್‌ ಪಟೇಲ್‌ ಮೇಲ್ಮನವಿಯನ್ನು ವಜಾಗೊಳಿಸಿತು.

ವಿಚ್ಛೇದನ ಮಂಜೂರು ಮಾಡಿದ್ದ ಸ್ಥಳೀಯ ಕೋರ್ಟ್

ವಿಜಯಪುರದ ಸಂಗೊಳ್ಳಿ ರಾಯಣ್ಣ ಕಾಲೋನಿಯ ಯೂಸುಫ್‌ ಪಟೇಲ್‌ ಅದೇ ನಗರದ ರಮ್ಜಾನ್‌ಬಿ ಎಂಬುವರನ್ನು 2014ರ ಜೂನ್‌ 17ರಂದು ಷರಿಯತ್‌ ಕಾನೂನಿನ ಅನುಸಾರ ಮದುವೆಯಾಗಿದ್ದರು. ವಿವಾಹವಾಗಿ ಸಾಕಷ್ಟುವರ್ಷ ಕಳೆದರೂ ದಂಪತಿಗೆ ಮಕ್ಕಳಾಗಿರಲಿಲ್ಲ. ಈ ಸಮಯದಲ್ಲೇ ಯೂಸುಫ್‌ ಪಟೇಲ್‌ ಎರಡನೇ ಮದುವೆಯಾಗಿದ್ದರು. ಗಂಡನ ಮನೆಯವರು ಕಿರುಕುಳ ನೀಡುತ್ತಿರುವುದರಿಂದ ವಿಚ್ಛೇದನ ನೀಡಲು ಆದೇಶಿಸಬೇಕು ಎಂದು ಕೋರಿ ರಮ್ಜಾನ್‌ಬಿ ಸಲ್ಲಿಸಿದ್ದ ಅರ್ಜಿಯನ್ನು ವಿಜಯಪುರ ಕೌಟುಂಬಿಕ ನ್ಯಾಯಾಲಯ 2018ರ ಏಪ್ರಿಲ್‌ 2ರಂದು ಪುರಸ್ಕರಿಸಿ ವಿಚ್ಛೇದನ ಆದೇಶ ಹೊರಡಿಸಿತ್ತು.

ಈ ಆದೇಶ ರದ್ದುಗೊಳಿಸುವಂತೆ ಕೋರಿದ್ದ ಯೂಸುಫ್‌ ಪಟೇಲ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.