ಪಿಎಸ್‌ಐ ಮರು ಪರೀಕ್ಷೆಗೆ ಹೈಕೋರ್ಟ್ ಮಧ್ಯಂತರ ತಡೆ
ಪಿಎಸ್‌ಐ ಹುದ್ದೆಗಳಿಗೆ ಹೊಸದಾಗಿ ಲಿಖಿತ ಪರೀಕ್ಷೆ ನಡೆಸಲು ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ
ಬೆಂಗಳೂರು(ಸೆ.29): ಪಿಎಸ್‌ಐ ನೇಮಕಾತಿ ಅಕ್ರಮದ ಹಿನ್ನೆಲೆಯಲ್ಲಿ 545 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಹುದ್ದೆಗಳಿಗೆ ಹೊಸದಾಗಿ ಲಿಖಿತ ಪರೀಕ್ಷೆ ನಡೆಸಲು ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸರ್ಕಾರದ ಆದೇಶ ರದ್ದು ಕೋರಿ ಆಯ್ಕೆಯಾಗಿದ್ದ ಹಲವು ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೇಂದರ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ಜತೆಗೆ, ನ್ಯಾಯಾಲಯದ ಮುಂದಿನ ಆದೇಶದವರೆಗೆ ಮರು ಪರೀಕ್ಷೆಗೆ ದಿನಾಂಕ ಪ್ರಕಟಿಸಬಾರದು ಎಂದು ಸರ್ಕಾರಕ್ಕೆ ಸೂಚಿಸಿ ಮಧ್ಯಂತರ ಆದೇಶ ಮಾಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪಿಎಸ್‌ಐ ನೇಮಕ ಅಕ್ರಮದ ಕುರಿತ ತನಿಖೆ ಈಗಾಗಲೇ ಪೂರ್ಣಗೊಂಡಿದೆ. 32 ಮಂದಿ ಅಭ್ಯರ್ಥಿಗಳು ಕಳಂಕಿತರು ಎಂದು ಗುರುತಿಸಿರುವ ತನಿಖಾಧಿಕಾರಿಗಳು, ಅವರ ವಿರುದ್ಧ ದೋಷಾರೋಪ ಪಟ್ಟಿಸಹ ದಾಖಲಿಸಿದ್ದಾರೆ. ಹಾಗಾಗಿ, ಕಳಂಕಿತ ಮತ್ತು ಕಳಂಕಿತರಲ್ಲದ ಅಭ್ಯರ್ಥಿಗಳನ್ನು ಪ್ರತ್ಯೇಕಿಸಲು ಅವಕಾಶವಿದೆ. ಇದರಿಂದ ಮರು ಪರೀಕ್ಷೆ ನಡೆಸುವ ಅವಶ್ಯಕತೆ ಇಲ್ಲ ಎಂದು ವಾದಿಸಿದರು. ಮರು ಪರೀಕ್ಷೆ ನಡೆಸಿದರೆ ಈಗಾಗಲೇ ಆಯ್ಕೆಯಾಗಿರುವ ನೂರಾರು ಅಭ್ಯರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಲಿದೆ. ಹಲವು ಅಭ್ಯರ್ಥಿಗಳಿಗೆ ವಯೋಮಿತಿ ಮೀರುತ್ತಿದೆ. ಅವರು ಉದ್ಯೋಗವಕಾಶದಿಂದ ವಂಚಿತರಾಗಲಿದ್ದಾರೆ ಎಂದು ಹೇಳಿದರು.
PSI Scam: ಎಡಿಜಿಪಿ ಅಮೃತ್ ಪೌಲ್ ವಿರುದ್ದ ಚಾರ್ಜ್ ಶೀಟ್!
ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆರ್.ಸುಬ್ರಹ್ಮಣ್ಯ ಹಾಜರಾಗಿ, ಪ್ರಕರಣದಲ್ಲಿ ಹಲವು ಅಧಿಕಾರಿಗಳು, ಅಭ್ಯರ್ಥಿಗಳು ಹಾಗೂ ಮಧ್ಯವರ್ತಿಗಳು ಭಾಗಿಯಾಗಿದ್ದಾರೆ. ಲಿಖಿತ ಪರೀಕ್ಷೆಯಲ್ಲೇ ಅಕ್ರಮವಾಗಿದೆ. ಅದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಎಲ್ಲ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಮರುಪರೀಕ್ಷೆ ನಡೆಸಲು ನಿರ್ಧರಿಸಿದೆ ಎಂದು ತಿಳಿಸಿದರು. ಅರ್ಜಿದಾರರ ಪರ ವಾದಕ್ಕೆ ಮನ್ನಣೆ ನೀಡಿದ ನ್ಯಾಯಾಲಯ ಹೊಸ ಪರೀಕ್ಷೆ ನಡೆಸಲು ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿತು.
ಪ್ರಕರಣವೇನು?:
ನೇಮಕಾತಿ ಅಕ್ರಮ ಹಿನ್ನೆಲೆಯಲ್ಲಿ ಪಿಎಸ್‌ಐ ನೇಮಕಾತಿಗೆ ನಡೆಸಲಾಗಿದ್ದ ಲಿಖಿತ ಪರೀಕ್ಷೆ ರದ್ದುಪಡಿಸಿದ್ದ ಸರ್ಕಾರ, ಮರುಪರೀಕ್ಷೆ ನಡೆಸುವುದಾಗಿ 2022ರ ಏ.29ರಂದು ಆದೇಶಿಸಿತ್ತು. ಈ ಆದೇಶ ರದ್ದುಪಡಿಸುವಂತೆ ಕೋರಿ ಆಯ್ಕೆಯಾಗಿದ್ದ ಕೆಲ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ (ಕೆಎಟಿ) ಅರ್ಜಿ ಸಲ್ಲಿಸಿದ್ದರು. ಅದನ್ನು ವಜಾಗೊಳಿಸಿ 2022ರ ಜು.19ರಂದು ಕೆಎಟಿ ವಜಾಗೊಳಿಸಿತ್ತು. ಇದರಿಂದ ಅಭ್ಯರ್ಥಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಕೋರ್ಟಲ್ಲಿ ಆಗಿದ್ದೇನು?
- ಈ ಹಿಂದೆ 545 ಎಸ್‌ಐ ಹುದ್ದೆಗೆ ಹೊಸ ಲಿಖಿತ ಪರೀಕ್ಷೆಗೆ ಸರ್ಕಾರ ಆದೇಶಿಸಿತ್ತು
- ಆ ಆದೇಶ ಪ್ರಶ್ನಿಸಿ ಹಿಂದೆ ಆಯ್ಕೆಯಾಗಿದ್ದ ಅಭ್ಯರ್ಥಿಗಳಿಂದ ಕೋರ್ಟ್‌ನಲ್ಲಿ ದಾವೆ
- 32 ಮಂದಿ ಮಾತ್ರ ಅಕ್ರಮ ಎಸಗಿದ್ದಾರೆ, ನಮಗೇಕೆ ಶಿಕ್ಷೆ ಎಂದು ಕೋರ್ಟಲ್ಲಿ ವಾದ
- ಕಳಂಕಿತರಿಂದ ನಮ್ಮನ್ನು ಪ್ರತ್ಯೇಕಿಸಲು ಸಾಧ್ಯವಿದೆ, ಮರು ಪರೀಕ್ಷೆ ಬೇಕಿಲ್ಲ: ಮನವಿ
- ಲಿಖಿತ ಪರೀಕ್ಷೆಯಲ್ಲೇ ಅಕ್ರಮವಾಗಿದೆ, ಮರು ಪರೀಕ್ಷೆ ಬೇಕು: ಸರ್ಕಾರದ ವಾದ
- ಅರ್ಜಿದಾರರ ವಾದಕ್ಕೆ ಮನ್ನಣೆ ನೀಡಿದ ಕೋರ್ಟ್‌ನಿಂದ ಮರುಪರೀಕ್ಷೆಗೆ ತಡೆ