ಮನೆ ಕೆಲಸದಾಕೆ ಮೇಲಿನ ಬಲಾತ್ಕಾರ ಪ್ರಕರಣದಲ್ಲಿ ಇತರೆ ಆರೋಪಿಗಳ ಮೇಲಿನ ವಿಚಾರಣೆಗೆ ತಡೆ ನೀಡಲಾಗಿದೆ ಎಂಬ ಆಧಾರದಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಜಾಮೀನು ಕೋರಲಾಗದು ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. 

ಬೆಂಗಳೂರು (ಏ.08): ಮನೆ ಕೆಲಸದಾಕೆ ಮೇಲಿನ ಬಲಾತ್ಕಾರ ಪ್ರಕರಣದಲ್ಲಿ ಇತರೆ ಆರೋಪಿಗಳ ಮೇಲಿನ ವಿಚಾರಣೆಗೆ ತಡೆ ನೀಡಲಾಗಿದೆ ಎಂಬ ಆಧಾರದಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಜಾಮೀನು ಕೋರಲಾಗದು ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಮೌಖಿಕವಾಗಿ ಮನೆ ಕೆಲಸದಾಕೆ ಮೇಲಿನ ಬಲಾತ್ಕಾರ ಪ್ರಕರಣದಲ್ಲಿ (ಮೊದಲನೇ ಬಲಾತ್ಕಾರ ಕೇಸ್) ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಎರಡನೇ ಬಾರಿಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಆರೋಪಿಸಿರುವ ಬಲಾತ್ಕಾರ ಘಟನೆ 2021 ರಲ್ಲಿ ನಡೆದಿದೆ. ಆದಾದ ನಾಲ್ಕೂವರೆ ವರ್ಷಗಳ ನಂತರ ದೂರು ವಿವರಣೆ ನೀಡಿಲ್ಲ. 

ಹೀಗಿದ್ದರೂ ಅರ್ಜಿದಾರರು ಜೈಲಿನಲ್ಲಿ ಮುಂದುವರಿಯುವುದು ಹೇಗೆ? ಆದ್ದರಿಂದ ಪ್ರಜ್ವಲ್‌ಗೆ ಜಾಮೀನು ನೀಡಬೇಕು ಎಂದು ಕೋರಿದರು. ರಾಜ್ಯ ಸರ್ಕಾರದ ಅಭಿಯೋಜಕರು, ಪ್ರಜ್ವಲ್ ಅವರ ಜಾಮೀನು ಅರ್ಜಿ ಸುಪ್ರೀಂ ಕೋರ್ಟ್‌ನಲ್ಲೂ ತಿರಸ್ಕೃತ ವಾಗಿತ್ತು. ಆ ನಂತರ ಯಾವುದೇ ಬದಲಾವಣೆ ಯಾಗಿಲ್ಲ. ಇತರೆ ಆರೋಪಿಗಳ ವಿರುದ್ಧದ ಪ್ರಕರಣ ತಡೆಯಾಜ್ಞೆಯಾಗಿದೆ. ಪ್ರಜ್ವಲ್ ವಿರುದ್ದ ನಾಲ್ಕು ಬಲಾತ್ಕಾರ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರಕರಣದ ಇತರೆ ಆರೋಪಿಗಳ ವಿರುದ್ದ ತಡೆಯಾಜ್ಞೆ ಇದ್ದರೂ ಪ್ರಜ್ವಲ್ ರೇವಣ್ಣ ವಿರುದ್ಧ ನಂಬಲರ್ಹ ಸಾಕ್ಷಿಗಳಿವೆ. ಇತರೆ ಆರೋಪಿಗಳ ಮೇಲಿನ ವಿಚಾರಣೆಗೆ ತಡೆ ನೀಡಲಾಗಿದೆ ಎಂಬ ಆಧಾರದಲ್ಲಿ ಪ್ರಮುಖ ಆರೋಪಿ ಜಾಮೀನು ಕೋರಲಾಗದು ಎಂದು ಹೇಳಿ ವಿಚಾರಣೆಯನ್ನು ಏ.15ಕ್ಕೆ ಮುಂದೂಡಿತು.

ಭವಾನಿಗೆ ಹೈಕೋರ್ಟ್‌ ಅವಕಾಶ: ಮಾಜಿ ಸಂಸದ ಪ್ರಜ್ವಲ್ ರೇವಣ್ಣರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಸಂತ್ರಸ್ತೆಯನ್ನು ಅಪಹರಿಸಿದ ಆರೋಪದಲ್ಲಿ ನಿರೀಕ್ಷಣಾ ಜಾಮೀನು ನೀಡುವಾಗ ಮೈಸೂರು ಮತ್ತು ಹಾಸನ ಜಿಲ್ಲೆ ಪ್ರವೇಶಿಸಬಾರದು ಎಂದು ನಿರ್ದೇಶಿಸಿ ಭವಾನಿ ರೇವಣ್ಣಗೆ ವಿಧಿಸಲಾಗಿದ್ದ ಷರತ್ತನ್ನು ಹೈಕೋರ್ಟ್ ಶುಕ್ರವಾರ ಸಡಿಲಿಸಿದೆ. ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರ ಪೀಠ ಈ ಆದೇಶ ನೀಡಿದೆ. ಇದರಿಂದ ಸುಮಾರು 11 ತಿಂಗಳಿಂದ ಇದ್ದ ನಿರ್ಬಂಧ ತೆರವಾಗಿದೆ. ಹಾಸನಾಂಬ ದೇವಸ್ಥಾನಕ್ಕೆ ಭೇಟಿ ನೀಡಲು ಮತ್ತು ಹಿರಿಯರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲು 10 ದಿನಗಳ ಕಾಲ ಹಾಸನ ಮತ್ತು ಮೈಸೂರು ಜಿಲ್ಲೆಗೆ ಹೋಗಲು ಭವಾನಿ ಅವರಿಗೆ ಅನುಮತಿಸಿ 2024ರ ಅ.28ರಂದು ಹೈಕೋರ್ಟ್‌ ಆದೇಶಿಸಿತ್ತು. 

ಬಲಾತ್ಕಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ಜೈಲುವಾಸಕ್ಕೆ 300 ದಿನ!

ನಂತರ ಹಾಸನ ಮತ್ತು ಮೈಸೂರು ಜಿಲ್ಲೆ ಪ್ರವೇಶಿಸದಂತೆ ವಿಧಿಸಿರುವ ಷರತ್ತು ಸಡಿಲಿಸಲು ಕೋರಿ 2025ರ ಮಾ.17ರಂದು ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಭವಾನಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ 2024ರ ಜೂ.7ರಂದು ಹೈಕೋರ್ಟ್‌ ಆದೇಶಿಸಿತ್ತು. ಈ ವೇಳೆ ಹಾಸನ ಮತ್ತು ಮೈಸೂರು ಜಿಲ್ಲೆ ಪ್ರವೇಶಿಸದಂತೆ ಷರತ್ತು ವಿಧಿಸಿತ್ತು. 2024ರ ಅ.28ರವರೆಗೆ ಹಾಸನ ಮತ್ತು ಮೈಸೂರಿಗೆ ತೆರಳಲು ಭವಾನಿ ಅವರಿಗೆ ಸಾಧ್ಯವಾಗಿರಲಿಲ್ಲ. ಆದರೆ, ಈ ಅರ್ಜಿಯನ್ನು ಹೈಕೋರ್ಟ್‌ ಶುಕ್ರವಾರ ಪುರಸ್ಕರಿಸಿದೆ.