ಬೆಂಗಳೂರು (ಫೆ.22):   ರಾಜ್ಯದ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಫೆ.23ರವರೆಗೆ ಗುಡುಗು ಸಹಿತ ಧಾರಾಕಾರ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

ದಕ್ಷಿಣ ಒಳನಾಡು ಭಾಗದಲ್ಲಿ ಕಳೆದ ಮೂರು ದಿನದಿಂದಲೂ ಮಳೆ ಸುರಿದಿದೆ. ಇದೀಗ ಮತ್ತದೇ ಭಾಗದ ಎಲ್ಲ ಜಿಲ್ಲೆಗಳಲ್ಲಿ ಫೆ.22 ಮತ್ತು 23ರಂದು ಗುಡುಗು ಸಹಿತ ಮಳೆ ಸುರಿಯಲಿದೆ. ನಂತರ ಮಳೆಯ ಪ್ರಮಾಣ ತುಸು ತಗ್ಗಲಿದ್ದು, ಫೆ.24ರಂದು ಅಲ್ಲಲ್ಲಿ ಹಗುರ ಮಳೆಯ ಸಿಂಚನವಾಗಬಹುದು. ಅದೇ ರೀತಿ ಉತ್ತರ ಒಳನಾಡು ಭಾಗದ ಬಹುತೇಕ ಜಿಲ್ಲೆಗಳಲ್ಲಿ ಮತ್ತು ಕರಾವಳಿ ಭಾಗದಲ್ಲಿ ಫೆ.22ರಂದು ಧಾರಾಕಾರ ಮಳೆ ಸುರಿಯಲಿದ್ದು, ಮರುದಿನ ಆಯಾ ಪ್ರದೇಶಗಳಲ್ಲಿ ಮಳೆ ಆರ್ಭಟ ಕ್ಷೀಣಿಸಲಿದೆ.

ಈ ಮಳೆ ನಿರೀಕ್ಷಿತ ಪ್ರದೇಶಗಳಲ್ಲಿ ಮುಂದಿನ ಎರಡು ದಿನ ಆಗಾಗ ಬಿಸಿಲು, ಮೋಡ ಕವಿದ ವಾತಾವರಣ ಕಂಡುಬರಲಿದೆ. ತಾಪಮಾನ ಕನಿಷ್ಠ 17ರಿಂದ 19 ಹಾಗೂ ಗರಿಷ್ಠ 27ರಿಂದ 30 ಡಿಗ್ರಿ ಸೆಲ್ಸಿಯಸ್‌ ದಾಖಲಾಗಬಹುದು ಎಂದು ವರದಿಯಾಗಿದೆ.

ಕೊಡಗಿನಲ್ಲಿ ಸುರಿದ ಆಲಿಕಲ್ಲು ಮಳೆ: ದಕ್ಷಿಣ ಕಾಶ್ಮೀರದಲ್ಲಿ ಸ್ನೋ ಫಾಲ್ ರೀತಿ ...

ಫೆ.21ರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ 3 ಸೆಂ.ಮೀ., ಚಿಕ್ಕಮಗಳೂರಿನ ತರಿಕೆರೆ, ಕೋಲಾರ ಜಿಲ್ಲೆಯ ಮಾಲೂರು, ಬೆಂಗಳೂರು ನಗರ ಜಿಲ್ಲೆಯ ಜಿಕೆವಿಕೆಯಲ್ಲಿ ತಲಾ 2 ಸೆಂ.ಮೀ.ಮಳೆ ಬಿದ್ದಿದೆ. ಉಳಿದಂತೆ ಶಿವಮೊಗ್ಗ, ಶೃಂಗೇರಿ, ಮಂಡ್ಯ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ಕೆಲವು ಪ್ರದೇಶಗಳಲ್ಲಿ ತುಂತುರು ಮಳೆ ಬಿದ್ದಿದೆ.

ರಾಜ್ಯದಲ್ಲಿ ಗರಿಷ್ಠ ತಾಪಮಾನ ಪಣಂಬೂರಿನಲ್ಲಿ 35.5 ಹಾಗೂ ಕನಿಷ್ಠ ತಾಪಮಾನ ಹಾಸನ 10.6 ಮತ್ತು ಬೀದರ್‌ನಲ್ಲಿ 12.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.