ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಮಧ್ಯಾಹ್ನ ಸುರಿದ ಭಾರಿ ಗಾಳಿ, ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಿಂದ ಅನೇಕ ತಗ್ಗುಪ್ರದೇಶಗಳು ಜಲಾವೃತಗೊಂಡರೆ, ರಸ್ತೆಗಳು ಅಕ್ಷರಶಃ ನದಿಗಳಾಗಿದ್ದವು. ನಗರದ ಬಹುತೇಕ ಕಡೆ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಮತ್ತು ಸಾರ್ವಜನಿಕರು ಪರದಾಡಿದರು.
ಬೆಂಗಳೂರು (ಮೇ.14): ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಮಧ್ಯಾಹ್ನ ಸುರಿದ ಭಾರಿ ಗಾಳಿ, ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಿಂದ ಅನೇಕ ತಗ್ಗುಪ್ರದೇಶಗಳು ಜಲಾವೃತಗೊಂಡರೆ, ರಸ್ತೆಗಳು ಅಕ್ಷರಶಃ ನದಿಗಳಾಗಿದ್ದವು. ನಗರದ ಬಹುತೇಕ ಕಡೆ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಮತ್ತು ಸಾರ್ವಜನಿಕರು ಪರದಾಡಿದರು.
ಮಂಗಳವಾರ ಬೆಳಗ್ಗೆ ಬಿಸಿಲು ಹೆಚ್ಚಾಗಿ ಬಂದಿತ್ತು. ಮಧ್ಯಾಹ್ನ 3 ಗಂಟೆಯ ಬಳಿಕ ದಟ್ಟವಾದ ಮೋಡ ಕವಿದು, ಮಿಂಚು, ಗುಡುಗಿನೊಂದಿಗೆ ಭಾರೀ ಗಾಳಿ ಬೀಸುವುದರೊಂದಿಗೆ ಮಳೆ ಧಾರಾಕಾರವಾಗಿ ಸುರಿಯಿತು. ಕೆಲಕಾಲ ಬಿರುಗಾಳಿಯೊಂದಿಗೆ ಸುರಿದ ಮಳೆ ಹೆಚ್ಚು ಹೊತ್ತು ನಿಲ್ಲಲಿಲ್ಲ. ಮತ್ತೆ ರಾತ್ರಿ 9.30ರ ಸುಮಾರಿಗೆ ನಗರದ ವಿವಿಧ ಭಾಗದಲ್ಲಿ ಮಳೆ ಸುರಿದ ವರದಿಯಾಗಿದೆ.
ಪ್ರಮುಖವಾಗಿ ಮೆಜೆಸ್ಟಿಕ್, ಗಾಂಧಿ ನಗರ, ಎಂಜಿ ರಸ್ತೆ, ಹಲಸೂರು, ಪ್ಯಾಲೇಸ್ ಗುಟ್ಟಹಳ್ಳಿ, ವಿಧಾನಸೌಧ, ಇಂದಿರಾನಗರ, ರಾಜಾಜಿನಗರ, ಯಶವಂತಪುರ ಬನಶಂಕರಿ, ಜಯನಗರ, ಬಸವನಗುಡಿ, ಜೆಪಿ ನಗರ, ಕನಕಪುರ ರಸ್ತೆ, ಸಾರಕ್ಕಿ, ವಿಜಯನಗರ, ಚಂದ್ರಾಲೇಔಟ್, ಮಾಗಡಿ ರಸ್ತೆ, ದೀಪಾಂಜಲಿ ನಗರ, ಮೈಸೂರು ರಸ್ತೆ, ನಾಗರಬಾವಿ, ಮೂಡಲಪಾಳ್ಯ, ಗೋವಿಂದರಾಜನಗರ, ಕಾಮಾಕ್ಷಿಪಾಳ್ಯ, ರಾಜರಾಜೇಶ್ವರಿನಗರ, ಯಲಹಂಕ, ಕಬ್ಬನ್ ಪಾರ್ಕ್, ಟೌನ್ ಹಾಲ್, ಹೊಸಹಳ್ಳಿ, ಕೆಂಗೇರಿ, ಶಾಂತಿನಗರ, ಹೆಬ್ಬಾಳ, ಸಿಬಿಐ, ಮೇಖ್ರಿ ಸರ್ಕಲ್, ಗಂಗೇನಹಳ್ಳಿ, ನಾಗವಾರ, ಮಾನ್ಯತಾ ಟೆಕ್ ಪಾರ್ಕ್, ಕೋಡಿಗೆಹಳ್ಳಿ ಗೇಟ್, ಕಮಲಾನಗರ ಮಲ್ಲೇಶ್ವರ, ಶಿವಾನಂದ ಸರ್ಕಲ್ ಸೇರಿದಂತೆ ನಗರ ಹಲವೆಡೆ ಮಳೆಯಾಗಿದೆ.
ಇದನ್ನೂ ಓದಿ: ಬೆಂಗಳೂರಿಗರೇ ಮಳೆಗಾಲಕ್ಕೆ ಸಿದ್ಧರಾಗಿ, ಇಂದಿನಿಂದ ಏಳು ದಿನಗಳವರೆಗೆ ವರ್ಷಧಾರೆ!
ರಸ್ತೆ ತುಂಬೆಲ್ಲಾ ಮಳೆ ನೀರು:
ನಾಗವಾರ ಮತ್ತು ಹೆಬ್ಬಾಳ ಮುಖ್ಯ ರಸ್ತೆ, ಮಾರತ್ ಹಳ್ಳಿಯಿಂದ ಕುಂದಲಹಳ್ಳಿ ರಸ್ತೆ, ಅಂಬೇಡ್ಕರ್ ಬೀದಿ ಸೇರಿದಂತೆ ಮೊದಲಾದ ರಸ್ತೆಗಳಲ್ಲಿ ಭಾರಿ ಪ್ರಮಾಣ ನೀರು ಹರಿದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಹೊರಮಾವು ನಿಂದ ರಾಮಮೂರ್ತಿ ನಗರ ಕಡೆಗೆ, ಆಡುಗೋಡಿ ಜಂಕ್ಷನ್‌ನಿಂದ ಆನೆಪಾಳ್ಯದ ಕಡೆಗೆ, ಕೆಆರ್ ಮಾರುಕಟ್ಟೆಯಿಂದ ಟೌನ್‌ಹಾಲ್ ಕಡೆಗೆ ನಿಧಾನಗತಿಯ ಸಂಚಾರ ಇತ್ತು.
ಮತ್ತೆ ಸಾಯಿ ಲೇಔಟ್‌ಗೆ ಜಲಸಂಕಷ್ಟ:
ವರ್ಷಗಳು ಉರುಳಿದರೂ ನಗರದ ಸಾಯಿಲೇಔಟ್‌ನ ಜನರಿಗೆ ಮಾತ್ರ ಮಳೆ ಬಂದಾಗ ಉಂಟಾಗುವ ಸಮಸ್ಯೆ ಮಾತ್ರ ತಪ್ಪಿಲ್ಲ. ಈ ಹಿಂದಿನ ವರ್ಷ ಮಳೆ ಬಂದಾಗಲೂ ಎರಡ್ಮೂರು ದಿನ ನೀರು ನಿಂತುಕೊಂಡಿತ್ತು. ಮಂಗಳವಾರವೂ ರಸ್ತೆಯಲ್ಲಿ ಭಾರಿ ಪ್ರಮಾಣದ ನೀರು ನಿಂತುಕೊಂಡು ಮತ್ತದೇ ಸ್ಥಿತಿ ನಿರ್ಮಾಣವಾಗಿತ್ತು. ರಸ್ತೆಯಲ್ಲಿ ಒಂದು ಅಡಿಗೂ ಅಧಿಕ ನೀರು ನಿಂತುಕೊಂಡಿತ್ತು. ಜೆಸಿಬಿ ಯಂತ್ರ ಬಳಸಿಕೊಂಡು ನೀರು ಹರಿದು ಹೋಗುವುದಕ್ಕೆ ವ್ಯವಸ್ಥೆ ಮಾಡಲಾಯಿತು.
ಆಲಿಕಲ್ಲು ಮಳೆ: ಮಂಗಳವಾರ ನಗರದಲ್ಲಿ ಗುಡುಗು. ಮಿಂಚಿನೊಂದಿಗೆ ಆಲಿಕಲ್ಲು ಮಳೆಯಾಗಿದೆ, ಕಲ್ಯಾಣ ನಗರ ಸೇರಿದಂತೆ ವಿವಿಧ ಭಾಗದಲ್ಲಿ ಆಲಿಕಲ್ಲು ಬಿದ್ದಿದೆ. ಆಲಿಕಲ್ಲು ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.
ಬಿಎಂಟಿಸಿ ಬಸ್ ಒಳಗೆ ನುಗ್ಗಿದ ನೀರು
ನಾಗವಾರ ಹಾಗೂ ಹೆಬ್ಬಾಳ ಮುಖ್ಯ ರಸ್ತೆಯಲ್ಲಿ ಭಾರೀ ಪ್ರಮಾಣ ಮಳೆ ನೀರು ನಿಂತುಕೊಂಡಿತ್ತು. ಬಿಎಂಟಿಸಿ ಬಸ್ ನಿಂತ ನೀರಿನಲ್ಲಿ ಸಂಚಾರ ಮಾಡಿದ ಪರಿಣಾಮ ಬಸ್ ಒಳಗೆ ನೀರು ನುಗ್ಗಿದೆ. ಬಸ್‌ನಲ್ಲಿ ಕುಳಿತುಕೊಂಡು ಪ್ರಯಾಣಿಕರು ತಮ್ಮ ಕಾಲುಗಳನ್ನು ಎತ್ತಿಕೊಂಡು ಪ್ರಮಾಣ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಧರೆಗುರುಳಿದ ಮರಗಳು
ಕುಮಾರ ಸ್ವಾಮಿ ಲೇಔಟ್‌ನಲ್ಲಿ ಕಾರಿನ ಮೇಲೆ ಮರ ಬಿದ್ದಿದೆ. ಯಾವುದೇ ಅಪಾರ ಉಂಟಾಗಿತ್ತು. ಇನ್ನೂ ಇಂದಿರನಗರ ದಲ್ಲಿಯೇ ಏಳು ಮರ ಹಾಗೂ ಮರ ಕೊಂಬೆಗಳು ಧರೆಗುರುಳಿದ ವರದಿಯಾಗಿದೆ. ರೇಸ್ ಕೋರ್ಸ್ ರಸ್ತೆಯ ಮಾಧವ ನಗರದಲ್ಲಿ ಕೇಬಲ್ ಅಳವಡಿಕೆ ಕಾಮಗಾರಿ ನಡೆಸಿದ ಪರಿಣಾಮ ಮರ ಸಂಪೂರ್ಣವಾಗಿ ಬುಡಮೇಲಾಗಿದೆ. ಆರ್ ಆರ್‌ನಗರದ ಭಾರತಿ ನಗರ ಮುಖ್ಯ ರಸ್ತೆ, ಕಲ್ಯಾಣನಗರ, ಬಿನ್ನಿಪೇಟೆ, ಮಲ್ಲೇಶ್ವರ, ಕಾವೇರಿ ಜಂಕ್ಷನ್ ಬಳಿ ಮರ ಬಿದ್ದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು. ಒಟ್ಟಾರೆ ನಗರದಲ್ಲಿ 30ಕ್ಕೂ ಅಧಿಕ ಮರಗಳು ಹಾಗೂ 100ಕ್ಕೂ ಅಧಿಕ ಮರದ ರೆಂಬೆಕೊಂಬೆಗಳು ಧರೆಗುರುಳಿದ ವರದಿಯಾಗಿದೆ.
ಇದನ್ನೂ ಓದಿ: ಯೆಲ್ಲೋ ಅಲರ್ಟ್: ಮುಂದಿನ ಐದು ದಿನ ರಾಜ್ಯದ ಈ 14 ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ
ಎಲ್ಲೆಲ್ಲಿ ಎಷ್ಟು ಮಳೆ?
ನಗರದಲ್ಲಿ ಮಂಗಳವಾರ ರಾತ್ರಿ 10 ಗಂಟೆಯ ವೇಳೆಗೆ ಸರಾಸರಿ 14 ಮಿ.ಮೀ ಮಳೆಯಾಗಿದೆ. ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಅತಿ ಹೆಚ್ಚು 4.7 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಬಾಣಸವಾಡಿಯಲ್ಲಿ 3.8, ಕೊಡಿಗೇಹಳ್ಳಿ 2.9, ಮಾರತ್ ಹಳ್ಳಿ 2.6, ಕಾಟನ್ ಪೇಟೆ 2.5, ಕುಶಾಲ್ ನಗರ 2.4, ಹಂಪಿನಗರ 2.3, ಚಾಮರಾಜಪೇಟೆ ಹಾಗೂ ಹೊರಮಾವಿನಲ್ಲಿ ತಲಾ 2.2, ಚೌಡೇಶ್ವರಿ 1.9, ಸಂಪಂಗಿರಾಮನಗರ, ಪುಲಕೇಶಿನಗರ ಹಾಗೂ ವಿಶ್ವೇಶ್ವರಪುರ 1.7, ವಿಜ್ಞಾನನಗರ 1.5 ಸೆಂ.ಮೀ ಮಳೆಯಾಗಿದೆ. ಇನ್ನೂ ಬುಧವಾರವೂ ನಗರದಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


