* 25 ವರ್ಷ ಬಳಿಕ ತುಮಕೂರು ಕೆರೆ ಭರ್ತಿ* 1600 ಮನೆ ಕುಸಿತ, 2000 ಕೋಳಿ ನೀರು ಪಾಲು* 6 ಜಿಲ್ಲೆಗಳಲ್ಲಿ ಶಾಲಾ, ಕಾಲೇಜಿಗೆ ಇಂದು ರಜೆ

ಬೆಂಗಳೂರು(ನ.20): ಕಳೆದೊಂದು ವಾರದಿಂದ ಸುರಿಯುತ್ತಿರುವ ಅಕಾಲಿಕ ಮಳೆಗೆ (Rain) ಅರ್ಧ ರಾಜ್ಯವೇ ತತ್ತರಿಸಿದ್ದು, ಮಳೆ ಸಂಬಂಧಿ ಕಾರಣಗಳಿಗೆ ಶುಕ್ರವಾರ ಮತ್ತೆ ನಾಲ್ವರು ಬಲಿಯಾಗಿದ್ದಾರೆ. ಫಸಲಿಗೆ ಬಂದ ಭತ್ತ, ಜೋಳ, ಮೆಕ್ಕೆಜೋಳ, ರಾಗಿ, ಕಾಫಿ, ತರಕಾರಿ ಸೇರಿದಂತೆ ಅನೇಕ ಬೆಳೆಗಳು (Crops) ಮಳೆಯಬ್ಬರಕ್ಕೆ ನೆಲಕಚ್ಚಿದ್ದು ರೈತರು (Farmers) ಕಣ್ಣೀರು ಸುರಿಸುವಂತಾಗಿದೆ.

ಜಿಟಿ ಜಿಟಿಯಾಗಿಯೇ ದಿನವಿಡೀ ಸುರಿಯುತ್ತಿರುವ ಮಳೆಯಿಂದಾಗಿ ವಿವಿಧೆಡೆ 1600ಕ್ಕೂ ಅಧಿಕ ಮನೆಗಳು ಕುಸಿದಿವೆ. ಜನ ಮನೆಯಿಂದ ಹೊರಬರಲಾರದೆ ಮನೆಯಲ್ಲೇ ಬಂಧಿಯಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಇದೇ ವೇಳೆ ನದಿ, ತೊರೆ, ಹಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಅಣೆಕಟ್ಟೆಗಳಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು ಕೆರೆಕಟ್ಟೆಗಳು ಭರ್ತಿಯಾಗುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರು (Bengaluru), ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಚಾಮರಾಜನಗರ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಹಾವೇರಿ, ಬಳ್ಳಾರಿ, ಕೊಪ್ಪಳ, ಬೆಳಗಾವಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಉತ್ತಮ ಮಳೆ ಸುರಿಯುತ್ತಿದೆ.

ನಿರಂತರ ಮಳೆ ಸಾವು-ನೋವಿಗೂ ಕಾರಣವಾಗಿದ್ದು ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರತ್ಯೇಕ ಪ್ರಕರಣದಲ್ಲಿ ಮನೆ ಗೋಡೆ ಕುಸಿದು ಹಿರಿಯೂರು ತಾಲೂಕಿನ ತ್ರಿವೇಣಿ(24), ನಾಯಕನಹಟ್ಟಿಯ ಕಂಪ್ಲೇಶಪ್ಪ(50), ಅವರ ಪತ್ನಿ ತಿಪ್ಪಮ್ಮ ಮೃತಪಟ್ಟಿದ್ದಾರೆ. ಇವರ ಪುತ್ರ ಅರುಣ್‌ಕುಮಾರ್‌(20) ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಮುಗಬಾಳ ಗ್ರಾಮದಲ್ಲಿ ಗೋಡೆ, ಚಾವಣಿ ಕುಸಿದು ಮುನಿಯಮ್ಮ(70) ಎಂಬ ವೃದ್ಧೆ ಮೃತಪಟ್ಟಿದ್ದಾರೆ.

ಇದೇ ವೇಳೆ ಎರಡು ದಿನಗಳ ಹಿಂದೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ರಾಯಲ್ಪಡು ಹೋಬಳಿಯಲ್ಲಿ ಸೇತುವೆ ಕುಸಿದ ವೇಳೆ ದ್ವಿಚಕ್ರ ವಾಹನದಿಂದ ಬಿದ್ದು ನೀರುಪಾಲಾಗಿದ್ದ ಕೊತ್ತೂರು ಗ್ರಾಮದ ಅವರಾತಮ್ಮ ಎಂಬ ಮಹಿಳೆಯ ಮೃತದೇಹ ಶುಕ್ರವಾರ ದೊರೆತಿದೆ.

ತುಮಕೂರು, ಕೋಲಾರ ಕೆರೆಗಳು ಭರ್ತಿ:

ತುಮಕೂರು, ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಬಹುತೇಕ ಕೆರೆಕಟ್ಟೆಗಳು ಭರ್ತಿಯಾಗಿರುವುದು ಸಮಾಧಾನಕರ ಸಂಗತಿಯಾಗಿದೆ. ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಇಡೀ ದಿನ ಸುರಿದ ಧಾರಾಕಾರ ಸುರಿದ ಮಳೆಗೆ ತುಮಕೂರು ಜಿಲ್ಲೆಯ ಬಹುತೇಕ ಎಲ್ಲಾ ಕೆರೆ ಕಟ್ಟೆಗಳು ಕೋಡಿ ಬಿದ್ದಿವೆ. 25 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ತುಮಕೂರಿನ ಅಮಾನಿಕೆರೆ ತುಂಬಿ ಕೋಡಿ ಬಿದ್ದಿದೆ. 20 ವರ್ಷಗಳ ಬಳಿಕ ಮಧುಗಿರಿ, ಕೊರಟಗೆರೆ, ಪಾವಗಡ ತಾಲೂಕಿನಲ್ಲಿ ಹರಿಯುವ ಜಯಮಂಗಲಿ ನದಿ ಮೈ ದುಂಬಿ ಹರಿಯುತ್ತಿದೆ.

ಕೋಲಾರ ಜಿಲ್ಲೆಯಲ್ಲಿ ಬೇತಮಂಗಲ ಕೆರೆ ತುಂಬಿದ್ದು ಎಲ್ಲ ಗೇಟ್‌ಗಳನ್ನು ತೆರೆಯಲಾಗಿದೆ. ಜಿಲ್ಲೆಯ ಪ್ರಮುಖ ಕೆರೆಗಳಾದ ಅಮ್ಮೇರಹಳ್ಳಿ, ಮಡೇರಹಳ್ಳಿ ಕೋಲಾರಮ್ಮ, ಅಗ್ರಹಾರ, ಮುದುವಾಡಿ, ನಂಗಲಿಯಂತಹ ದೊಡ್ಡ ಕೆರೆಗಳೂ ತುಂಬಿವೆ. ಕೆಜಿಎಫ್‌ ಗಡಿಯಲ್ಲಿರುವ ರಾಮಸಾಗರ ಕೆರೆಯೂ ಕೋಡಿ ಹರಿಯುತ್ತಿದೆ. ಬಂಗಾರಪೇಟೆ ತಾಲೂಕಿನ ಮುಷ್ಠರಹಳ್ಳಿ ದೊಡ್ಡ ಕೆರೆ, ಮಾಲೂರು ಕೆರೆಯೂ ಕೋಡಿ ಹರಿದಿದೆ. ಇನ್ನು ಚಿತ್ರದುರ್ಗ ಜಿಲ್ಲೆಯ ಒಟ್ಟು 166 ಕೆರೆಗಳಲ್ಲಿ 22 ಕೆರೆಗಳು ತುಂಬಿದ್ದು ಏಳು ಸುತ್ತಿನ ಕೋಟೆಯಲ್ಲಿ ಜಲಪಾತಗಳು ಸೃಷ್ಟಿಯಾಗಿವೆ.

1600ಕ್ಕೂ ಅಧಿಕ ಮನೆಗೆ ಹಾನಿ:

ಸತತವಾಗಿ ಸುರಿಯುತ್ತಿರುವ ಮಳೆಗೆ ರಾಜ್ಯದ ವಿವಿಧೆಡೆ 1600ಕ್ಕೂ ಅಧಿಕ ಮನೆಗಳು ಭಾಗಶಃ ಮತ್ತು ಪೂರ್ಣ ಹಾನಿಗೊಳಗಾಗಿವೆ. ಹಾವೇರಿ ಜಿಲ್ಲೆಯಲ್ಲಿ ಅತ್ಯಧಿಕ 567 ಮನೆಗಳು ಹಾನಿಗೊಳಗಾಗಿದ್ದರೆ, ಚಿಕ್ಕಬಳ್ಳಾಪುರ 360, ಚಾಮರಾಜನಗರ, 349, ಚಿತ್ರದುರ್ಗ 104, ಬಳ್ಳಾರಿ-ವಿಜಯನಗರದಲ್ಲಿ- 85, ದಾವಣಗೆರೆಯಲ್ಲಿ 52 ಮನೆಗಳು ಮಳೆ ವಿಕೋಪಕ್ಕೆ ತುತ್ತಾಗಿವೆ.

ಪಾವಗಡ ತಾಲೂಕಿನ ಶ್ರೀರಂಗಪುರ ತಾಂಡಾದಲ್ಲಿ ರಾತ್ರಿ ಸುರಿದ ಭಾರೀ ಮಳೆಗೆ ಗೋಡೆ ಕುಸಿದು 23 ಕುರಿಗಳು ಮೃತಪಟ್ಟಿವೆ. ಇನ್ನು ತುಮಕೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಕೋಳಿಫಾರಂ ಒಂದು ಜಲಾವೃತವಾಗಿ 2 ಸಾವಿರ ಕೋಳಿಗಳು ನೀರುಪಾಲಾಗಿವೆ. ತುಮಕೂರಿನ ಆಹಾರ ಸಂಸ್ಕರಣಾ ಫ್ಯಾಕ್ಟರಿಯ .70 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ನಾಶವಾಗಿವೆ.

ದಿನವಿಡೀ ಸುರಿದ ಮಳೆಯಿಂದಾಗಿ ತುಮಕೂರು ತಾಲೂಕಿನ ದೇವರಾಯನದುರ್ಗ ಬೆಟ್ಟಕ್ಕೆ ಹತ್ತುವ ಮೆಟ್ಟಿಲುಗಳ ಬಳಿ ಗುಡ್ಡ ಕುಸಿದಿದೆ. ಮಳೆಯಿಂದಾಗಿ ಮತ್ತಷ್ಟುಗುಡ್ಡ ಕುಸಿಯುವ ಆತಂಕ ಮನೆ ಮಾಡಿದೆ. ಕೊರಟಗೆರೆ ತಾಲೂಕಿನ ಮಲ್ಲಪ್ಪನಹಳ್ಳಿಯಲ್ಲಿ ರಸ್ತೆ ಮೇಲೆ ಹರಿಯುತ್ತಿದ್ದ ನೀರಿನ ರಭಸಕ್ಕೆ ಬೈಕ್‌ ಒಂದು ಕೊಚ್ಚಿ ಹೋಗಿದ್ದು ಸವಾರನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಉತ್ತರ ಭಾಗದ ಕೋಟೆಯಲ್ಲಿನ ಒಂದು ವೃತ್ತಾಕಾರದ ಕೊತ್ತಲ(ಬುರುಜು) ಶುಕ್ರವಾರ ಬೆಳಗಿನ ಜಾವ ಸಂಪೂರ್ಣವಾಗಿ ನೆಲಕ್ಕೆ ಉರುಳಿದ ಘಟನೆ ನಡೆದಿದೆ. ಕೋಲಾರದಲ್ಲಿ ನರಸಾಪುರ ಕೈಗಾರಿಕಾ ಪ್ರದೇಶ ಜಲಾವೃತವಾಗಿದ್ದರೆ, ರಾಮನಗರದ ಮಂಚನಬೆಲೆಯಲ್ಲಿ ಗದಗಯ್ಯದೊಡ್ಡಿ ಗ್ರಾಮದ ಸೇತುವೆ ಕುಸಿತಗೊಂಡಿದೆ.

ತುಂಗಭದ್ರಾ (Tungabhadra) ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿದ್ದರಿಂದ ನದಿಗೂ ಹೆಚ್ಚು ನೀರು ಬಿಟ್ಟಿದ್ದು ಕೊಪ್ಪಳ ಜಿಲ್ಲೆಯ ಶಿವಪುರ ಬಳಿ ತುಂಗಭದ್ರಾ ನಡುಗಡ್ಡೆಯಲ್ಲಿ ಜನ ಜಾನುವಾರು ಸಿಕ್ಕಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಜನರನ್ನು ರಕ್ಷಿಸಿದ್ದಾರೆ. ಅಲ್ಲಿದ್ದ ನಾಗೇಶ್ವರ ರಾವ್‌ ಕುಟುಂಬ ಹಾಗೂ ದನಗಾಹಿಯನ್ನು ರಕ್ಷಿಸಿದ್ದರೆ, ಜಾನುವಾರುಗಳ ರಕ್ಷಣೆ ಸಾಧ್ಯವಾಗಿರಲಿಲ್ಲ. ಇನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಜಿಟಿಜಿಟಿ ಮಳೆಗೆ ರಸ್ತೆ ಕುಸಿದು ಸಾರಿಗೆ ಬಸ್‌ ಒಂದು ಹೂತುಹೋದ ಘಟನೆ ನಡೆದಿದೆ. ಅದೃಷ್ಟವಶಾತ್‌ ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ.