ಭಾರೀ ಮಳೆ ಸಂಭವ, ಉತ್ತರ ಕರ್ನಾಟಕಕ್ಕೆ ರೆಡ್ ಅಲರ್ಟ್!
ಉತ್ತರ ಕರ್ನಾಟಕಕ್ಕೆ ರೆಡ್ ಅಲರ್ಟ್!| ಇಂದು, ನಾಳೆ ಅತಿ ಭಾರೀ ಮಳೆ ಸಂಭವ| ಕರಾವಳಿ, ಮಲೆನಾಡಿನಲ್ಲೂ ಬಿರು ಮಳೆ| ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ
ಬೆಂಗಳೂರು(ಅ.14): ಉತ್ತರ ಆಂಧ್ರಪ್ರದೇಶದ ಕರಾವಳಿಯಲ್ಲಿ ಗಾಳಿಯ ತೀವ್ರತೆ ಹೆಚ್ಚಾಗಿರುವ ಪರಿಣಾಮ ಅ.14 ಮತ್ತು 15ರಂದು ಕರ್ನಾಟಕದ ಉತ್ತರ ಒಳನಾಡಿನಲ್ಲಿ ಗಾಳಿ, ಗುಡುಗು ಸಹಿತ ಅತ್ಯಂತ ಭಾರಿ ಮಳೆ ಸುರಿಯಲಿದೆ. ಹೀಗಾಗಿ ಬಾಗಲಕೊಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ರಾಯಚೂರು, ಯಾದಗಿರಿ, ವಿಜಯಪುರ ಜಿಲ್ಲೆಗಳಿಗೆ ಅ.14 ಮತ್ತು 15ರಂದು ‘ರೆಡ್ ಅಲರ್ಟ್’ ಘೋಷಿಸಲಾಗಿದೆ.
"
ಕರಾವಳಿ ಜಿಲ್ಲೆಗಳು ಹಾಗೂ ಮಲೆನಾಡಿನ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಅ.14 ಮತ್ತು 15ರಂದು ಗುಡುಗು ಸಹಿತ ಭಾರಿ ಮಳೆ ಸುರಿಯುವ ಸಂಭವ ಇರುವ ಹಿನ್ನೆಲೆಯಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಇದೇ ವೇಳೆ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಿನ್ನೆ ರಾಜ್ಯದಲ್ಲಿ ಎಲ್ಲೆಲ್ಲಿ ಮಳೆ :
ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಯಲ್ಲಿ ರಾಜ್ಯದ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಅತಿ ಹೆಚ್ಚು 10 ಸೆಂ.ಮೀ. ಮಳೆ ಸುರಿದಿದೆ. ಉಳಿದಂತೆ ಬಾಗಲಕೋಟೆಯ ಬಾದಾಮಿ 8, ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ, ಕೊಪ್ಪಳದ ಕುಷ್ಟಗಿ, ಆಗುಂಬೆ, ಬಳ್ಳಾರಿಯ ಹಗರಿಬೊಮ್ಮನಹಳ್ಳಿಯಲ್ಲಿ ತಲಾ 7 ಸೆಂ.ಮೀ. ಮಳೆ ದಾಖಲಾಗಿದೆ.
ಯಾವ್ಯಾವ ಜಿಲ್ಲೆಗೆ ರೆಡ್ ಅಲರ್ಟ್?
ಬಾಗಲಕೊಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ರಾಯಚೂರು, ಯಾದಗಿರಿ, ವಿಜಯಪುರ
ಮಳೆ ಜತೆ ಚಳಿಯೂ ಜೋರು:
ರಾಜ್ಯದಲ್ಲಿ ಮಂಗಳವಾರ ತಾಪಮಾನ ಗರಿಷ್ಠ 30.4 ಡಿಗ್ರಿ ಸೆಲ್ಸಿಯಸ್ ಕಲಬುರ್ಗಿಯಲ್ಲಿ ಹಾಗೂ ಕನಿಷ್ಠ 18.6 ಡಿಗ್ರಿ ಸೆಲ್ಸಿಯಸ್ ಬೀದರ್‌ನಲ್ಲಿ ದಾಖಲಾಗಿದೆ. ಉಳಿದಂತೆ ಕೊಡಗು, ಚಾಮರಾಜನಗರ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಅಂದಾಜು ಗರಿಷ್ಠ 24 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್, ವಿಜಯಪುರ, ಉತ್ತರ ಕನ್ನಡ, ತುಮಕೂರು, ಯಾದಗಿರಿ, ಕೊಪ್ಪಳ, ಹಾವೇರಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಅಂದಾಜು ತಾಪಮಾನ ಗರಿಷ್ಠ 30 ಹಾಗೂ ಕನಿಷ್ಠ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಅ.12ರಂದು ಸೋಮವಾರ ಉತ್ತರ ಕನ್ನಡ ಜಿಲ್ಲೆಯ ಶಿರಾಲಿಯಲ್ಲಿ ಗರಿಷ್ಠ 31.2 ಮತ್ತು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಕನಿಷ್ಠ 18.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇನ್ನೆರಡು ದಿನ ರಾಜ್ಯದಲ್ಲಿ ಉಷ್ಣಾಂಶ ಇನ್ನಷ್ಟುಇಳಿಕೆಯಾಗುವ ಸಾಧ್ಯತೆಯಿದೆ.