ಬೆಂಗಳೂರು[ಅ.18]: ಅರಬ್ಬಿ ಸಮುದ್ರ ಹಾಗೂ ಶ್ರೀಲಂಕಾದ ಉತ್ತರ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಮುಂದಿನ 48 ಗಂಟೆಗಳಲ್ಲಿ ಕರಾವಳಿ ಸೇರಿದಂತೆ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಮುಂಗಾರು ಮುಕ್ತಾಯಗೊಂಡು ಹಿಂಗಾರು ಆರಂಭವಾಗಿರುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಬುಧವಾರ ಅಧಿಕೃತವಾಗಿ ಮಾಹಿತಿ ನೀಡಿದೆ. ಹಿಂಗಾರು ಆರಂಭವಾಗುವುದರ ಜತೆಗೆ ಅರಬ್ಬಿ ಸಮುದ್ರ ಮತ್ತು ಉತ್ತರ ಶ್ರೀಲಂಕಾ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಹಿಂಗಾರು ಚುರುಕಾಗಿದ್ದು, ರಾಜ್ಯ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಮುಂದಿನ ಮೂರ್ನಾಲ್ಕು ದಿನ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ.

ಭಾರಿ ಗಾಳಿ ಮಳೆ: 500ಕ್ಕೂ ಅಧಿಕ ಅಡಕೆ ಮರ ಧ್ವಂಸ

ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ಮೂರು ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ 115 ರಿಂದ 205 ಮಿ.ಮೀ. ವರೆಗೆ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಮೂರು ಜಿಲ್ಲೆಗಳಿಗೆ ‘ಆರೆಂಜ್‌ ಅಲರ್ಟ್‌’ ಘೋಷಿಸಲಾಗಿದೆ. ಇನ್ನು ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ 65 ರಿಂದ 115 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಈ ಜಿಲ್ಲೆಗಳಿಗೆ ಇಲಾಖೆ ‘ಯೆಲ್ಲೋ ಅಲರ್ಟ್‌’ ಎಚ್ಚರಿಕೆ ನೀಡಿದೆ.