Asianet Suvarna News Asianet Suvarna News

ಕರಾವಳಿ, ದಕ್ಷಿಣ ಜಿಲ್ಲೆಗಳಲ್ಲಿ 2 ದಿನ ಭಾರಿ ಮಳೆ ಸಾಧ್ಯತೆ!

ಕರಾವಳಿ, ದಕ್ಷಿಣ ಜಿಲ್ಲೆಗಳಲ್ಲಿ 2 ದಿನ ಭಾರಿ ಮಳೆ ಸಾಧ್ಯತೆ| ಅರಬ್ಬಿ ಸಮುದ್ರದಲ್ಲಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಗಾಳಿ

Heavy Rain To Lash In Coastal Area And Southern Districts Of Karnataka
Author
Bangalore, First Published Dec 2, 2019, 9:32 AM IST

 ಬೆಂಗಳೂರು[ಡಿ.02]: ಅರಬ್ಬಿ ಸಮುದ್ರದ ಆಗ್ನೇಯ ದಿಕ್ಕಿನಲ್ಲಿ ಗಾಳಿಯ ವೇಗ ಹೆಚ್ಚಾಗಿರುವುದರಿಂದ ಎರಡು ದಿನ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಸಮುದ್ರದಲ್ಲಿ ಗಾಳಿಯ ವೇಗ ಹೆಚ್ಚಿರುವುದರಿಂದ ಮೀನುಗಾರರು ಎಚ್ಚರ ವಹಿಸುವಂತೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಸಿದೆ.

ಅರಬ್ಬಿ ಸಮುದ್ರದಲ್ಲಿ ಭಾನುವಾರ ಗಂಟೆಗೆ 40 ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಇನ್ನೆರಡು ದಿನ ಕರ್ನಾಟಕ ಕರಾವಳಿಯಲ್ಲಿ ಗಾಳಿಯ ವೇಗ ಗಂಟೆಗೆ 60ರಿಂದ 70 ಕಿ.ಮೀ. ತಲುಪುವ ಸಾಧ್ಯತೆಯಿದೆ. ಇದರಿಂದ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆ ಹಾಗೂ ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ಹಾಗೂ ತುಮಕೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.

ರಾಜ್ಯದ ವಿವಿಧೆಡೆ ತುಂತುರು ಮಳೆ

ಮಹಾಸಾಗರ ಹಾಗೂ ಅದಕ್ಕೆ ಹೊಂದಿಕೊಂಡ ನೈಋುತ್ಯ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಸಂಭವಿಸಿದ್ದು, ಇದರಿಂದ ಬೆಂಗಳೂರು ಸೇರಿದಂತೆ ಗದಗ, ಬಳ್ಳಾರಿ, ಕೊಡಗು, ಉಡುಪಿ, ಚಿಕ್ಕಮಗಳೂರು, ಶೃಂಗೇರಿಯ ವಿವಿಧೆಡೆ ತುಂತುರು ಮಳೆಯಾಗಿದೆ. ಶನಿವಾರದಿಂದಲೇ ಮೋಡಕವಿದ ವಾತಾವರಣವಿತ್ತು. ಭಾನುವಾರ ಬೆಳಗ್ಗೆಯಿಂದ ಹಲವೆಡೆ ತುಂತುರು ಮಳೆ ದಾಖಲಾಗಿದೆ.

ಗದಗ, ಬೆಟಗೇರಿ, ಶಿರಹಟ್ಟಿಹಾಗೂ ಗಜೇಂದ್ರಗಡ ತಾಲೂಕು ವ್ಯಾಪ್ತಿಯಲ್ಲಿಯೂ ಜಿಟಿಜಿಟಿ ಮಳೆ ಸುರಿದಿದೆ. ಇದರಿಂದ ಈರುಳ್ಳಿ ಹಾಗೂ ಕಬ್ಬು, ಶೇಂಗಾ ಬೆಳೆ ಕಟಾವು ನಡೆಯುತ್ತಿದ್ದು, ಬೆಳೆಗಾರರು ಫಸಲು ರಕ್ಷಣೆ ಮಾಡಲು ಹರಸಾಹಸ ಪಡುತ್ತಿದ್ದಾರೆ. ಇನ್ನು ಬಳ್ಳಾರಿ ಜಿಲ್ಲೆಯ ಹಲವೆಡೆ ಎರಡು ಗಂಟೆ ತುಂತುರು ಮಳೆಯಾಗಿದೆ.

ಕೊಡಗು ಜಿಲ್ಲೆಯ ಮಡಿಕೇರಿ ಸೇರಿದಂತೆ ವಿರಾಜಪೇಟೆ, ಸುಂಟಿಕೊಪ್ಪ ಸುತ್ತಮುತ್ತ ಮಳೆಯಾಗಿದೆ. ಉಡುಪಿ ಜಿಲ್ಲೆಯ ಸುತ್ತಮುತ್ತಲೂ ಮಳೆ ಸುರಿದಿದೆ. ಚಿಕ್ಕಮಗಳೂರು ಜಿಲ್ಲೆ, ಬಯಲುಸೀಮೆ ಸೇರಿದಂತೆ ಮಲೆನಾಡಿನ ಹಲವೆಡೆ ತುಂತುರು ಮಳೆಬಂದಿದೆ. ಶೃಂಗೇರಿ ತಾಲೂಕಿನ ವಿವಿಧೆಡೆಯೂ ಭಾನುವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಸಂಜೆ ವೇಳೆ ಜಿಟಿಜಿಟಿ ಮಳೆ ಸುರಿದಿದೆ.

Follow Us:
Download App:
  • android
  • ios