* 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರೀ ಮಳೆ* ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳ* ಗಾಜನೂರಿನ ತುಂಗಾ ಜಲಾಶಯದಿಂದ 35 ಸಾವಿರ ಕ್ಯುಸೆಕ್ ನೀರು ಬಿಡುಗಡೆ
ಬೆಂಗಳೂರು(ಜೂ.18): ರಾಜ್ಯದ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆ ಗುರುವಾರದಂದೂ ಮುಂದುವರಿದಿದ್ದು ಹಲವೆಡೆ ಭೂಕುಸಿತ ಸಂಭವಿಸಿದೆ. ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಒಟ್ಟಾರೆ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ. ಕಾವೇರಿ, ತುಂಗಾ, ಭದ್ರಾ, ಹೇಮಾವತಿ, ಸೇರಿದಂತೆ ಹೆಚ್ಚಿನ ನದಿ ಕೊಳ್ಳಗಳು ತುಂಬಿ ಹರಿಯುತ್ತಿದ್ದು ಜಲಾಶಯ ಮಟ್ಟದಲ್ಲಿ ವ್ಯಾಪಕ ಏರಿಕೆ ಕಂಡಿದೆ.
ಗಾಳಿಮಳೆಗೆ ಮರಗಳು ಧರೆಗುರುಳಿ ರಸ್ತೆ ಕಡಿತಗೊಳ್ಳುವುದರೊಂದಿಗೆ, ಅಲ್ಲಲ್ಲಿ ವಿದ್ಯುತ್ ಕಂಬಗಳು, ಮರಗಳು ಉರುಳಿಬಿದ್ದು ಗ್ರಾಮಾಂತರ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕರಾವಳಿ ಭಾಗಗಳಲ್ಲಿ ವ್ಯಾಪಕ ಮಳೆ ಮುಂದುವರಿದಿದ್ದು ಉಡುಪಿಯ ಬೈಂದೂರು ಬಳಿ 3 ಮನೆಗಳಿಗೆ ಹಾನಿಯಾಗಿದೆ. ಇನ್ನು ಬಯಲುಸೀಮೆ ಜಿಲ್ಲೆಗಳಾದ ಧಾರವಾಡ, ಹಾವೇರಿ, ಬೆಳಗಾವಿ, ಬಾಗಲಕೋಟೆ, ಚಿತ್ರದುರ್ಗ, ಗದಗ, ಬಳ್ಳಾರಿ, ದಾವಣಗೆರೆಯಲ್ಲೂ ಸಾಧಾರಣ ಮಳೆ ಸುರಿದಿದೆ.
ಬಂಟ್ವಾಳ: ಮಳೆಗೆ ಧರೆಗುರುಳಿದ ಬೃಹತ್ ಗಾತ್ರದ ಮರ, ವಿದ್ಯುತ್ ಸಂಪರ್ಕ ಕಡಿತ!
ಕೊಡಗಿನ ಭಾಗಮಂಡಲ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ 116.4 ಮಿ.ಮೀ.ನಷ್ಟು ಸರಾಸರಿ ಮಳೆಯಾಗಿದೆ. ನಿರಂತರ ಮಳೆ ಮುಂದುವರಿದಲ್ಲಿ ತ್ರಿವೇಣಿ ಸಂಗಮ ಶೀಘ್ರ ಮುಳುಗಡೆಯಾಗುವ ಸಾಧ್ಯತೆ ಇದ್ದು ಸ್ಥಳದಲ್ಲಿ ರಕ್ಷಣಾ ಪಡೆಯನ್ನು ನಿಯೋಜಿಸಲಾಗಿದೆ.
ಚಿಕ್ಕಮಗಳೂರಿನ ಗಾಜನೂರಿನ ತುಂಗಾ ಜಲಾಶಯದಿಂದ 35 ಸಾವಿರ ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ತೋಟ, ಮನೆ, ಗದ್ದೆಗಳಿಗೆ ಸಾಕಷ್ಟು ಹಾನಿ ಸಂಭವಿಸಿದೆ. ಶಿರಸಿ ತಾಲೂಕಿನ ವಾನಳ್ಳಿ ಬಳಿಯ ಜಾಜಿಗುಡ್ಡದಲ್ಲಿ ಬೃಹತ್ ಭೂಕುಸಿತ ಉಂಟಾಗಿದ್ದು, ಸಮೀಪದ ಏಳು ಮನೆಗಳ ನಿವಾಸಿಗಳು ಆತಂಕದಲ್ಲಿದ್ದಾರೆ.
