ಬೆಂಗಳೂರು(ಅ.10):  ಬಂಗಾಳ ಉಪಸಾಗರದ ಅಂಡಮಾನ್‌ ಸಮೀಪ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದ ಕರಾವಳಿ ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಿಗೆ ಭಾರಿ ಮಳೆಯಾಗುವ ಸಂಭವವಿದ್ದು, ‘ಯೆಲ್ಲೋ ಅಲರ್ಟ್‌’ ಎಚ್ಚರಿಕೆ ನಿಡಲಾಗಿದೆ.

ವಾಯುಭಾರ ಕುಸಿತದ ತೀವ್ರತೆ ಅ. 10ರಂದು ಮತ್ತಷ್ಟುಹೆಚ್ಚಾಗಲಿದೆ. ನಂತರ ಗಾಳಿಯು ಪಶ್ಚಿಮ ದಿಕ್ಕಿನ ಕಡೆಗೆ ಅಂದರೆ ಅಂಡಮಾನ್‌ ಭಾಗದಿಂದ ಉತ್ತರ ಆಂಧ್ರಪ್ರದೇಶದ ಕರಾವಳಿಯನ್ನು ಅ. 12ರಂದು ದಾಟುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹವಾಮಾನದಲ್ಲಿ ಬದಲಾವಣೆ ಪರಿಣಾಮ ರಾಜ್ಯದ ಬೀದರ್‌, ಕಲಬುರಗಿ, ಯಾದಗಿರಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಅ. 10ರಿಂದ 12ರವರೆಗೆ ಮೂರು ದಿನ ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ. ನಂತರ ಅ.13ರಂದು ಪುನಃ ಇದೇ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆ ಬೀಳಲಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅ.9 ರಿಂದ 13ರವರೆಗೆ ವ್ಯಾಪಕ ಮಳೆಯಾಗಲಿದೆ. ಅ. 11ರಂದು ಭಾರಿ ಮಳೆಯಾಗುವ ಕಾರಣಕ್ಕೆ ಕರಾವಳಿ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್‌’ ಘೋಷಿಸಲಾಗಿದೆ.

ರಾಯಚೂರು: ಸತತ ಮಳೆಯಿಂದ ಮನೆಗಳು ಕುಸಿತ, ಆತಂಕದಲ್ಲಿ ಜನತೆ

ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಕಡೆಗಳಲ್ಲಿ ಅ. 10ರಂದು ಮಳೆ ಆಗಲಿದೆ. ಅ.11ರಂದು ಬೆಂಗಳೂರು ನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ ಸೇರಿ ಕೆಲವೆಡೆ ಮಳೆ ಪ್ರಮಾಣ ತುಸು ಹೆಚ್ಚಲಿದೆ. ಅಲ್ಲದೆ ಅ.12 ಹಾಗೂ 13 ರಂದು ಅಲ್ಲಲ್ಲಿ ಸಾಧಾರಣ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಎಷ್ಟು ಮಳೆ?:

ಅ.9ರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು 11 ಸೆಂ.ಮೀ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು 7, ದಕ್ಷಿಣ ಕನ್ನಡದ ಸುಬ್ರಮಣ್ಯ ಹಾಗೂ ಮೈಸೂರಿನ ಕೆ.ಆರ್‌.ನಗರ ತಲಾ 5, ಮೈಸೂರಿನ ನಂಜನಗೂಡು, ಶಿವಮೊಗ್ಗದ ಭದ್ರಾವತಿ, ಮಂಡ್ಯದ ಕೃಷ್ಣರಾಜನಗರ ಮತ್ತು ಮಾವಳ್ಳಿಯಲ್ಲಿ ತಲಾ 3 ಸೆಂ.ಮೀ ಮಳೆ ಬಿದ್ದಿದೆ.

ಅ.20ಕ್ಕೆ ಹಿಂಗಾರು ಆರಂಭ

ರಾಜ್ಯದಲ್ಲಿ ಅ.20ರಿಂದ ಹಿಂಗಾರು ಮಳೆ ಆರಂಭವಾಗಲಿದೆ. ರಾಜ್ಯದ ಎಲ್ಲ ಭಾಗಗಳಲ್ಲೂ ಮುಂಗಾರು ವಾಡಿಕೆಯಷ್ಟು ಸುರಿದಿದೆ. ಆದರೆ ಹಿಂಗಾರು ಮಳೆ ಉತ್ತರ ಒಳನಾಡು ಮತ್ತು ಕರಾವಳಿ ಭಾಗಕ್ಕಿಂತ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚು ಬಿರುಸಿನಿಂದ ಕೂಡಿರಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಸಿ.ಎಸ್‌.ಪಾಟೀಲ್‌ ಮಾಹಿತಿ ನೀಡಿದ್ದಾರೆ.