* ಎಲ್ಲ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ* ಅಲ್ಲಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದೆ * ಶ್ರೀಲಂಕಾದ ಕರಾವಳಿ ಭಾಗದಲ್ಲಿ ತೀವ್ರಗೊಂಡ ಸಮುದ್ರದ ಮೇಲ್ಮೈನಲ್ಲಿ ಸುಳಿಗಾಳಿ
ಬೆಂಗಳೂರು(ಆ.23): ಹವಾಮಾನ ಏರಿಳಿತ ಪರಿಣಾಮ ರಾಜ್ಯದಲ್ಲಿ ಮುಂಗಾರು ಆ.26ರವರೆಗೆ ಚುರುಕಾಗಿರಲಿದೆ. ಎಲ್ಲ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆ ಬೀಳುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಶ್ರೀಲಂಕಾದ ಕರಾವಳಿ ಭಾಗದಲ್ಲಿ ಸಮುದ್ರದ ಮೇಲ್ಮೈನಲ್ಲಿ ಸುಳಿಗಾಳಿ ತೀವ್ರಗೊಂಡಿದೆ. ಈ ಕಾರಣದಿಂದ ರಾಜ್ಯದಲ್ಲಿ ಸದ್ಯ ಸುರಿಯುತ್ತಿರುವ ಗುಡುಗು ಸಹಿತ ಮಳೆ ಆ.26ರವರೆಗೆ ಮುಂದುವರಿಯಲಿದೆ. ಕಳೆದ 2-3ದಿನಗಳಿಂದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಸಾಕಷ್ಟು ಕಡೆಗಳಲ್ಲಿ ಸುರಿಯುತ್ತಿರುವ ಮಳೆ ಇನ್ನಷ್ಟುದಿನ ಮುಂದುವರೆಯಲಿದೆ.
ಹೊಸದಾಗಿ ಮತ್ತೆ 22 ಪ್ರವಾಹ ಪೀಡಿತ ತಾಲೂಕುಗಳ ಘೋಷಣೆ: ಕುಮಾರಸ್ವಾಮಿಗೆ ಜಯ
ಬೆಳಗಾವಿ, ಧಾರವಾಡ, ಗದಗ, ಹಾವೇರಿ, ವಿಜಯಪುರ ಸೇರಿದಂತೆ ಉತ್ತರ ಒಳನಾಡು ಹಾಗೂ ಚಾಮರಾಜನಗರ, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಗುಡುಗು ಸಹಿತ ಮಳೆ ಆಗಲಿದೆ. ಆಗಾಗ ಬಿಸಿಲಿನ ವಾತಾವರಣ ಉಂಟಾದರೂ ಕೂಡ ಅಲ್ಲಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಆ.22ರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಯಲ್ಲಿ ಕಲಬುರಗಿ 10ಸೆಂ.ಮೀ, ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ 9ಸೆಂ.ಮೀ, ಕಲಬುರಗಿಯ ಚಿಂಚೊಳ್ಳಿಯಲ್ಲಿ 5 ಸೆಂ.ಮೀ ಮಳೆ ದಾಖಲಾಗಿದೆ ಎಂದು ಇಲಾಖೆ ವರದಿ ತಿಳಿಸಿದೆ.
