Asianet Suvarna News Asianet Suvarna News

2 ವಾರ ಬಳಿಕ ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ: ಗುಡುಗು ಸಹಿತ ಮಳೆಯಾರ್ಭಟ

ಎರಡು ವಾರದ ಬಳಿಕ ಬೆಂಗಳೂರಿನಲ್ಲಿ ಗುರುವಾರ ರಾತ್ರಿ ವಿವಿಧ ಭಾಗದಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಬಿಸಿಲ ಬೇಗೆಯಿಂದ ಬೆಂದ ಬೆಂಗಳೂರಿಗರಿಗೆ ತಂಪೆರದಿದೆ. ಗುರುವಾರ ಬೆಳಗ್ಗೆಯಿಂದ ನಗರದಲ್ಲಿ ಬಿಸಿಲ ವಾತಾವರಣವಿತ್ತು. 

heavy rain lashes parts of bengaluru gvd
Author
First Published Sep 1, 2023, 4:00 AM IST

ಬೆಂಗಳೂರು (ಸೆ.01): ಎರಡು ವಾರದ ಬಳಿಕ ಬೆಂಗಳೂರಿನಲ್ಲಿ ಗುರುವಾರ ರಾತ್ರಿ ವಿವಿಧ ಭಾಗದಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಬಿಸಿಲ ಬೇಗೆಯಿಂದ ಬೆಂದ ಬೆಂಗಳೂರಿಗರಿಗೆ ತಂಪೆರದಿದೆ. ಗುರುವಾರ ಬೆಳಗ್ಗೆಯಿಂದ ನಗರದಲ್ಲಿ ಬಿಸಿಲ ವಾತಾವರಣವಿತ್ತು. ಆದರೆ, ಸಂಜೆ ಆಗುತ್ತಿದಂತೆ ಮಳೆಯ ವಾತಾವರಣ ಸೃಷ್ಟಿಯಾಗಿ ರಾತ್ರಿ ನಗರದ ವಿವಿಧ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ. ರಾತ್ರಿ 9.30ರ ವೇಳೆ ಗಂಟೆಯ ಸುಮಾರಿಗೆ ಆರಂಭಗೊಂಡ ಮಳೆಯು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿ ಮಳೆಯಾಯಿತು. 

ಮೆಜಸ್ಟಿಕ್‌, ಯಶವಂತಪುರ, ಶೇಷಾದ್ರಿಪುರ, ಮಲ್ಲೇಶ್ವರ, ಬಸವನಗುಡಿ, ಜಯನಗರ, ಕೋರಮಂಗಲ, ವಿಲ್ಸನ್‌ ಗಾರ್ಡನ್‌, ಹೊಂಬೇಗೌಡ ನಗರ, ಶಾಂತಿನಗರ, ಗಂಗೇನಹಳ್ಳಿ, ಡಬ್ಬಲ್‌ ರಸ್ತೆ, ಎಂಜಿ ರಸ್ತೆ, ಕಾಪೋರೇಷನ್‌ ವೃತ್ತ, ಅಟ್ಟೂರು, ಸಂಪಂಗಿರಾಮನಗರ, ಶಿವಾಜಿನಗರ, ನಂದಿನಿ ಲೇಔಟ್‌, ನಾಗಪುರ, ರಾಜಾಜಿನಗರ, ಬೆಳ್ಳಂದೂರು, ಕೊಟ್ಟಿಗೆಹಾರ, ವಿಜಯನಗರ, ಆರ್‌ಆರ್‌ನಗರ, ಬಿಟಿಎಂ ಲೇಔಟ್‌, ವಿದ್ಯಾಪೀಠ, ಚಾಮರಾಜಪೇಟೆ ಸೇರಿದಂತೆ ಮೊದಲಾದ ಕಡೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಮಳೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ಉಕ್ಕಿ ಹರಿದ ಪರಿಣಾಮ ವಾಹನ ಸವಾರರಿಗೆ ತೊಂದರೆ ಉಂಟಾಯಿತು. ಬೈಕ್‌ ಸವಾರರು ನಗರದ ಫ್ಲೈಓವರ್‌ ಮತ್ತು ಅಂಡರ್‌ ಪಾಸ್‌ಗಳಲ್ಲಿ ಆಶ್ರಯ ಪಡೆದರು. ಕೆಲವು ಕಡೆ ಟ್ರಾಫಿಕ್‌ ಜಾಮ್‌ ಸಹ ಉಂಟಾಯಿತು.

ದತ್ತಪೀಠವನ್ನ ಬೇಲಿ ರಹಿತ ಮಾಡುವುದೇ ನಮ್ಮ ಸಂಕಲ್ಪ: ಶೋಭಾ ಕರಂದ್ಲಾಜೆ

ಅಂಡರ್‌ ಪಾಸ್‌ಗಳಲ್ಲಿ ನೀರು: ನಗರದ ಪ್ರಮುಖ ಅಂಡರ್‌ ಪಾಸ್‌ಗಳಾದ ಶಿವಾನಂದ ರೈಲ್ವೆ ಅಂಡರ್‌ ಪಾಸ್‌, ಕೆ.ಆರ್‌.ಸರ್ಕಲ್‌ ಅಂಡರ್‌ ಪಾಸ್‌, ಕಾವೇರಿ ಜಂಕ್ಷನ್‌, ಓಕಳಿಪುರ ಅಂಡರ್‌ ಅಂಡರ್‌ ಪಾಸ್‌ ಸೇರಿದಂತೆ ವಿವಿಧ ಅಂಡರ್‌ ಪಾಸ್‌ಗಳಲ್ಲಿ ಭಾರೀ ಪ್ರಮಾಣದ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಏಕಾಏಕಿ ಧಾರಾಕಾರವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಬಿದ್ದ ಕಸ ನೀರಿನಲ್ಲಿ ಹರಿದು ಬಂದು ಚರಂಡಿಯಲ್ಲಿ ಕಟ್ಟಿಕೊಂಡ ಪರಿಣಾಮ ನೀರು ರಸ್ತೆಯಲ್ಲಿ ಹರಿಯಿತು. ಜಲಮಂಡಳಿ ಒಳಚರಂಡಿಗೆ ಮಳೆ ನೀರು ನುಗ್ಗಿದ ಪರಿಣಾಮ ನಗರದ ವಿವಿಧ ರಸ್ತೆಗಳಲ್ಲಿ ಮ್ಯಾನ್‌ಗಳಿಂದ ಉಕ್ಕಿ ನೀರು ಹೊರ ಹರಿಯುತ್ತಿತ್ತು.

ದೇವಸ್ಥಾನಕ್ಕೆ ನುಗ್ಗಿದ ನೀರು: ಗುಡುಗು ಸಹಿತ ಸುರಿದ ಧಾರಾಕಾರ ಮಳೆಯಿಂದ ಮಲ್ಲೇಶ್ವರದ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನಕ್ಕೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಹಾಗೆಯೇ ನಗರದ ತಗ್ಗು ಪ್ರದೇಶದಲ್ಲಿರುವ ಕೆಲವು ಮನೆಗಳಿಗೆ ನೀರು ನುಗ್ಗಿ ಸಮಸ್ಯೆಯಾಗಿದೆ.

ಶಿವಮೊಗ್ಗಕ್ಕೆ ಮೊದಲ ಇಂಡಿಗೋ ಪ್ರಯಾಣ: ವಿಮಾನ ಹತ್ತಿ ಸಂತಸಪಟ್ಟ ಬಿಎಸ್​ವೈ, ಪಾಟೀಲ್​, ಈಶ್ವರಪ್ಪ

ರಾಜಮಹಲ್‌ನಲ್ಲಿ 4 ಸೆಂ.ಮೀ. ಮಳೆ: ಗುರುವಾರ ರಾತ್ರಿ 10.30ರ ಮಾಹಿತಿ ಪ್ರಕಾರ ನಗರದಲ್ಲಿ ಸರಾಸರಿ 1 ಸೆಂಟಿ ಮೀಟರ್‌ ಮಳೆಯಾಗಿದೆ. ಬೆಂಗಳೂರಿನ ರಾಜಮಹಲ್‌ ಗುಟ್ಟಹಳ್ಳಿಯಲ್ಲಿ ಅತಿ ಹೆಚ್ಚು 9.1 ಸೆಂ.ಮೀ. ಮಳೆಯಾಗಿದೆ. ವಿದ್ಯಾರಣ್ಯಪುರ 8.5, ಕೊಡಿಗೆಹಳ್ಳಿ 6.5, ಅಟ್ಟೂರು ಹಾಗೂ ವಿಶ್ವನಾಥ ನಾಗೇನಹಳ್ಳಿಯಲ್ಲಿ ತಲಾ 5.8, ಚೌಡೇಶ್ವರಿ ವಾರ್ಡ್‌ 4.7, ಎಚ್‌ಎಎಲ್‌ ವಿಮಾನ ನಿಲ್ದಾಣ 4.2, ಸಂಪಂಗಿರಾಮನಗರ 4.0, ನಾಗಪುರ ಹಾಗೂ ನಂದಿನಿ ಲೇಔಟ್‌ನಲ್ಲಿ ತಲಾ 3.5, ಮಾರತಹಳ್ಳಿ 3.3, ಗಾಳಿ ಆಂಜನೇಯ ದೇವಸ್ಥಾನ 2.5, ವರ್ತೂರು 2.3 ಹಾಗೂ ಬೆಳ್ಳಂದೂರಿನಲ್ಲಿ 2.1 ಸೆಂ.ಮೀ. ಮಳೆಯಾದ ವರದಿಯಾಗಿದೆ.

Follow Us:
Download App:
  • android
  • ios