ರಾಜ್ಯದ 5 ಜಿಲ್ಲೇಲಿ ಭಾರೀ ಮಳೆ: ಸಿಡಿಲು ಬಡಿದು ಮಹಿಳೆ ಸಾವು

*  ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತ
*  ಹುಬ್ಬಳ್ಳಿಯಲ್ಲಿ ಅಬ್ಬರಿಸಿದ ವರುಣ
*  ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆ 

Heavy Rain in Five District of Karnataka on Oct 01st grg

ಬೆಂಗಳೂರು(ಅ.02): ಉತ್ತರ ಕರ್ನಾಟಕದ(North Karnataka) ಕೆಲ ಭಾಗ ಮತ್ತು ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಉತ್ತಮ ಮಳೆ ಸುರಿದಿದ್ದು, ಗದಗ ಜಿಲ್ಲೆ ರೋಣ ತಾಲೂಕಿನಲ್ಲಿ ಸಿಡಿಲು ಬಡಿದು ಮಹಿಳೆಯೊಬ್ಬಳು ಮೃತಳಾಗಿದ್ದಾಳೆ. ರೋಣ ತಾಲೂಕಿನ ನೈನಾಪುರ ಗ್ರಾಮದಲ್ಲಿ ಕೃಷಿ ಕೆಲಸಕ್ಕಾಗಿ ಹೊಲಕ್ಕೆ ತೆರಳಿದ್ದ ರೇಖಾ ಭೀಮಪ್ಪ ನಂದಿಕೇಶ್ವರ (20) ಸಿಡಿಲು ಬಡಿದು ಮೃತಪಟ್ಟವರು.

ಕಲಬುರಗಿ ಜಿಲ್ಲೆಯಲ್ಲಿ ಎರಡು ದಿನಗಳಿಂದ ಕಡಿಮೆಯಾಗಿದ್ದ ಮುಂಗಾರು ಶುಕ್ರವಾರ ಮತ್ತೆ ಪ್ರಬಲವಾಗಿದೆ. ಕಲಬುರಗಿ, ಸೇಡಂ, ಜೇವರ್ಗಿ, ಚಿತ್ತಾಪುರ, ಅಫಜಲಪೂರಗಳಲ್ಲಿ ನಿರಂತರ ಒಂದೂವರೆ ಗಂಟೆ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ(Rain). ಇದರಿಂದ ನಗರ ಪ್ರದೇಶಗಳಲ್ಲಿರುವ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಇನ್ನು ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಧಾರವಾಡ, ಕಲಘಟಗಿ, ಹಾವೇರಿ ಜಿಲ್ಲೆಯ ಹಾವೇರಿ, ಹಾನಗಲ್‌, ಹಿರೇಕೆರೂರು, ಶಿಗ್ಗಾಂವಿ, ಸವಣೂರು, ಗದಗ ಜಿಲ್ಲೆಯ ಗದಗ, ರೋಣ, ಗಜೇಂದ್ಗಡ, ಶಿರಹಟ್ಟಿ, ಲಕ್ಷ್ಮೇಶ್ವರದಲ್ಲೂ ಗುಡುಗು ಸಹಿತ ಮಳೆ ಸುರಿದಿದೆ. ಕೊಡಗಿನ ಕೇಂದ್ರ ಮಡಿಕೇರಿ ಸೇರಿದಂತೆ ಸೋಮವಾರಪೇಟೆ, ಸುಂಟಿಕೊಪ್ಪ, ಕುಶಾಲನಗರ, ಚೆಟ್ಟಳ್ಳಿ, ಮಾದಾಪುರ, ಕಗ್ಗೋಡ್ಲು, ಮರಗೋಡು ಸೇರಿದಂತೆ ಹಲವು ಕಡೆಗಳಲ್ಲಿ ಮಳೆ ಸುರಿಯಿತು.

ಶಹೀನ್ ಅಬ್ಬರ... ಕರ್ನಾಟಕ ಸೇರಿ 7 ರಾಜ್ಯಗಳಲ್ಲಿ ಭಾರೀ ಮಳೆ ಅಲರ್ಟ್ 

ಹುಬ್ಬಳ್ಳಿಯಲ್ಲಿ ಅಬ್ಬರಿಸಿದ ವರುಣ

ನಗರದಲ್ಲಿ ಶುಕ್ರವಾರ ಸಂಜೆ ವೇಳೆಗೆ ಭರ್ಜರಿ ಮಳೆಯಾಗಿದೆ. ಅರ್ಧ ಗಂಟೆಗಳ ಕಾಲ ಸುರಿದ ವರ್ಷಧಾರೆಗೆ ಕೆಲಹೊತ್ತು ಜನಜೀವನ ಅಸ್ತವ್ಯವಸ್ತವಾಯಿತು. ಹಳೆ ಹುಬ್ಬಳ್ಳಿಯ ಕೆಲವೆಡೆ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡಿದರು.

ಸಂಜೆ 4.30ರ ಸುಮಾರಿಗೆ ಶುರುವಾದ ಮಳೆ 5.15ರವರೆಗೂ ಸುರಿಯಿತು. ಬೆಳಗ್ಗೆಯಿಂದ ಬಿಸಿಲ ವಾತಾವರಣವಿದ್ದರೂ ಮಧ್ಯಾಹ್ನದ ಬಳಿಕ ಏಕಾಏಕಿ ಮೋಡ ಕವಿದು ಭಾರಿ ಮಳೆ ಆಯಿತು. ಬಮ್ಮಾಪುರ ಸಝಾದ ಕೆಬಿ ನಗರದಲ್ಲಿ ಸುಮಾರು 15ಕ್ಕೂ ಹೆಚ್ಚಿನ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಸನಿಹ ನಡೆಯುತ್ತಿರುವ ಚರಂಡಿ ಕಾಮಗಾರಿಯಿಂದಾಗಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ನೀರು ಮನೆಗೆ ಬಂದಿದೆ. ಅಲ್ಲದೆ, ತೆಗ್ಗು ಪ್ರದೇಶಗಳಲ್ಲಿನ ಮನೆಗಳ ಆವರಣಕ್ಕೆ ನೀರು ನುಗ್ಗಿ ತೊಂದರೆ ಅನುಭವಿಸಿದರು. ಸ್ಥಳಕ್ಕೆ ತಹಸೀಲ್ದಾರ್‌ ಶಶಿಧರ ಮಾಡ್ಯಾಳ ಅವರು ಭೇಟಿ ನೀಡಿ ಪರಿಶೀಲನೆ ಕೈಗೊಂಡರು.

ಹಲವೆಡೆ ಒಳಚರಂಡಿ ತುಂಬಿ ರಸ್ತೆ ಮೇಲೆ ಕೊಳಚೆ ನೀರು ಹರಿದಿದೆ. ಬಿಆರ್‌ಟಿಎಸ್‌ ರಸ್ತೆಯುದ್ದಕ್ಕೂ ಮಳೆ ನೀರು ನಿಂತಿತ್ತು. ಮಳೆಯಿಂದಾಗಿ ಜನಸಂಚಾರ ಅಸ್ತವ್ಯಸ್ತಗೊಂಡಿತು. ಮಳೆ ಬಳಿಕ ನಗರದೆಲ್ಲೆಡೆ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಕುಂದಗೋಳ ಹಾಗೂ ನವಲಗುಂದ ತಾಲೂಕಿನಲ್ಲೂ ಮಧ್ಯಾಹ್ನದ ಬಳಿಕ ಕೆಲಕಾಲ ಮಳೆಯಾಗಿದೆ.
 

Latest Videos
Follow Us:
Download App:
  • android
  • ios