ರಾಜಧಾನಿ ಬೆಂಗಳೂರಿನಲ್ಲಿ ಇಡೀ ದಿನ ಆಗಾಗ ಮಳೆಯಾಗಿದ್ದು, ಸಂಜೆ ನಗರದಾದ್ಯಂತ ಮಳೆ ಸುರಿಯಿತು. ಸಂಜೆ 5.30ರ ಸುಮಾರಿಗೆ ಆರಂಭಗೊಂಡ ಮಳೆಯು ರಾತ್ರಿ 7.30 ವರೆಗೆ ಸುರಿಯಿತು. ಸ್ವಲ್ಪ ಸಮಯ ಧಾರಾಕಾರವಾಗಿ ಸುರಿದರೆ, ಮತ್ತಷ್ಟುಸಮಯ ಜಿಟಿಜಿಟಿ ಮಳೆಯಾಯಿತು.

ಬೆಂಗಳೂರು (ಜು.14) :  ರಾಜಧಾನಿ ಬೆಂಗಳೂರಿನಲ್ಲಿ ಇಡೀ ದಿನ ಆಗಾಗ ಮಳೆಯಾಗಿದ್ದು, ಸಂಜೆ ನಗರದಾದ್ಯಂತ ಮಳೆ ಸುರಿಯಿತು. ಸಂಜೆ 5.30ರ ಸುಮಾರಿಗೆ ಆರಂಭಗೊಂಡ ಮಳೆಯು ರಾತ್ರಿ 7.30 ವರೆಗೆ ಸುರಿಯಿತು. ಸ್ವಲ್ಪ ಸಮಯ ಧಾರಾಕಾರವಾಗಿ ಸುರಿದರೆ, ಮತ್ತಷ್ಟುಸಮಯ ಜಿಟಿಜಿಟಿ ಮಳೆಯಾಯಿತು.

ಕೆಲಸ ಮುಗಿಸಿ ಮನೆಗೆ ಹೊರಟವರು ರಸ್ತೆ ಮಧ್ಯೆದಲ್ಲಿ ಮಳೆಗೆ ಸಿಲುಕಿ ನಲುಗಿದರು. ಶೇಷಾದ್ರಿ ರಸ್ತೆ, ಮಲ್ಲೇಶ್ವರ ಸಂಪಿಗೆ ರಸ್ತೆ, ಸ್ಯಾಂಕಿ ಕೆರೆ ರಸ್ತೆ, ನೃಪತುಂಗ ರಸ್ತೆ, ಕೆ.ಆರ್‌.ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಭಾರೀ ಪ್ರಮಾಣ ನೀರು ಹರಿದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಶೇಷಾದ್ರಿ ರಸ್ತೆ, ಶಿವಾನಂದ ಸರ್ಕಲ್‌, ಕೆ.ಆರ್‌.ಸರ್ಕಲ್‌, ಆನಂದರಾವ್‌ ಜಂಕ್ಷನ್‌, ಮೆಜೆಸ್ಟಿಕ್‌, ಸಂಪಿಗೆ ರಸ್ತೆ, ಬಳ್ಳಾರಿ ರಸ್ತೆ ಸೇರಿದಂತೆ ಹೆಚ್ಚಿನ ವಾಹನ ದಟ್ಟಣೆ ಇರುವ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಮಳೆ ಟ್ರಾಫಿಕ್‌ ಜಾಮ್‌ ಬಿಸಿ ತಟ್ಟಿತ್ತು.

Bengaluru rain: ಮಳೆ ಅನಾಹುತ ನಿರ್ವಹಣೆಗೆ ಪಾಲಿಕೆ ಸಿದ್ಧ

ನಗರದ ಪ್ರಮುಖ ಅಂಡರ್‌ ಪಾಸ್‌ಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂದ್‌ ಮಾಡಿ ವಾಹನ ಸಂಚಾರ ನಿಷೇಧಿಸಲಾಗಿತ್ತು.

ಶುಕ್ರವಾರವೂ ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಒಂದರೆಡು ಬಾರಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಭಾರೀ ಗಾಳಿ ಬೀಸುವ ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಗುರುವಾರ ರಾತ್ರಿ 9.30 ಗಂಟೆಯ ವರದಿ ಪ್ರಕಾರ ನಗರದಲ್ಲಿ ಸರಾಸರಿ 14 ಸೆಂ.ಮೀ ಮಳೆಯಾಗಿದೆ. ಕೆಂಗೇರಿಯಲ್ಲಿ ಅತಿ ಹೆಚ್ಚು 5.5 ಸೆಂ.ಮೀ ಮಳೆಯಾಗಿದೆ. ಉಳಿದಂತೆ, ಆರ್‌ಆರ್‌ನಗರದಲ್ಲಿ 3.1, ವಿದ್ಯಾಪೀಠ 3, ಹಂಪಿನಗರ 2.5, ಮಾರುತಿ ಮಂದಿರ ವಾರ್ಡ್‌ 2.2, ಕಾಟನ್‌ಪೇಟೆ, ಕೊಟ್ಟಿಗೆ ಪಾಳ್ಯ, ಪಟ್ಟಾಭಿರಾಮನಗರ ಹಾಗೂ ಗಾಳಿ ಆಂಜನೇಯ ದೇವಸ್ಥಾನ ವಾರ್ಡ್‌ನಲ್ಲಿ ತಲಾ 1.9,ಸಂಪಗಿರಾಮನಗರ, ಎಚ್‌ಎಎಲ್‌ ಹಾಗೂ ವನ್ನಾರ್‌ ಪೇಟೆಯಲ್ಲಿ ತಲಾ 1.8, ಆಗ್ರಹಾರ ದಾಸರಹಳ್ಳಿ 1.7, ಕೋರಮಂಗಲ, ರಾಜಮಹಲ್‌ ಗುಟ್ಟಹಳ್ಳಿ, ಮಾರತ್‌ ಹಳ್ಳಿ, ವಿದ್ಯಾರಣ್ಯಪುರ, ಹೊರಮಾವು, ಉತ್ತರಹಳ್ಳಿ ಹಾಗೂ ವಿಶ್ವೇಶ್ವರಪುರದಲ್ಲಿ ತಲಾ 1.6 ಸೆಂ.ಮೀ ಮಳೆಯಾದ ವರದಿಯಾಗಿದೆ.

ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಮಳೆಯ ಆರ್ಭಟ: ಸಾರ್ವಜನಿಕರ ಪರದಾಟ