ಮಳೆನಾಡಾದ ಮಲೆನಾಡು: ಜಡಿಮಳೆಗೆ ವಿವಿಧೆಡೆ ಭೂಕುಸಿತ!

* ಮಳೆನಾಡಾದ ಮಲೆನಾಡು: ಜಡಿಮಳೆಗೆ ವಿವಿಧೆಡೆ ಭೂಕುಸಿತ

* ಚಿಕ್ಕಮಗಳೂರು, ಶಿವಮೊಗ್ಗ, ಕೊಡಗಲ್ಲಿ ಮಳೆಯಬ್ಬರ

* ಕಾವೇರಿ, ತುಂಗಾ, ಭದ್ರಾ, ಹೇಮೆಗೆ ಭಾರಿ ನೀರು

Heavy rain disrupts life in Shivamogga Kodagu and Chikkamagaluru

ಬೆಂಗಳೂರು(ಜೂ.17): ರಾಜ್ಯದ ಕರಾವಳಿ, ಮಲೆನಾಡಿನ ಬಹುತೇಕ ಭಾಗಗಳಲ್ಲಿ ಬುಧವಾರವೂ ಮುಂಗಾರು ಪ್ರಭಾವದಿಂದ ಉತ್ತಮ ಮಳೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಚಿಕ್ಕಮಗಳೂರು, ಕೊಡಗು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಕೆಲವೆಡೆ ಗುಡ್ಡದ ಮಣ್ಣು ರಸ್ತೆಗೆ ಜರಿದಿದ್ದು ಕಳೆದ ವರ್ಷದಂತೆ ಮತ್ತೆ ಭೂಕುಸಿತದ ಭೀತಿಯುಂಟಾಗಿದೆ.

ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳ ಕೆಲಭಾಗಗಳಲ್ಲೂ ಉತ್ತಮ ಮಳೆ ಸುರಿದಿದ್ದು, ನದಿ- ಹಳ್ಳಗಳು ತುಂಬಿ ಹರಿಯುತ್ತಿವೆ. ಇನ್ನುಳಿದಂತೆ ರಾಯಚೂರು, ಹಾವೇರಿ, ಬೆಳಗಾವಿ, ಧಾರವಾಡ, ಬಳ್ಳಾರಿ, ಕೊಪ್ಪಳ, ಜಿಲ್ಲೆಗಳಲ್ಲೂ ಸಾಧಾರಣ ಮಳೆ ಸುರಿದಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕೊಟ್ಟಿಗೆಹಾರ, ಕಳಸ ಸೇರಿದಂತೆ ಸುತ್ತಮುತ್ತ ನಿರಂತರವಾಗಿ ಜಡಿಮಳೆ ಸುರಿಯುತ್ತಿದ್ದು ತುಂಗಾ, ಭದ್ರಾ, ಹೇಮಾವತಿ ನದಿಗಳು ತುಂಬಿ ಹರಿಯುತ್ತಿವೆ. ಮೂಡಿಗೆರೆ ತಾಲೂಕಿನಾದ್ಯಂತ ಗಾಳಿ ಸಮೇತ ಧಾರಾಕಾರ ಮಳೆಯಾಗುತ್ತಿದ್ದು ಇಲ್ಲಿನ ಬಿನ್ನಡಿ ಬಳಿ ರಸ್ತೆಗೆ ಗುಡ್ಡ ಕುಸಿದಿದ್ದರಿಂದ ಈ ಭಾಗದಲ್ಲಿ ಓಡಾಡುವ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ.

ನೆರೆಯ ಹಾಸನ ಜಿಲ್ಲೆಯ ಮಲೆನಾಡು ಪ್ರದೇಶವಾಗಿರುವ ಸಕಲೇಶಪುರ ತಾಲೂಕಿನಲ್ಲೂ ಗಾಳಿಯಿಂದ ಕೂಡಿದ ಭಾರಿ ಮಳೆಯಾಗುತ್ತಿದ್ದು, ಅಲ್ಲಲ್ಲಿ ಬರೆ ಕುಸಿತ ಹಾಗೂ ರಸ್ತೆಗೆ ಅಡ್ಡಲಾಗಿ ಮರಗಳು ಮುರಿದುಬಿದ್ದಿರುವ ಘಟನೆಗಳಾಗಿವೆ. ಜತೆಗೆ ಗಾಳಿ ಕೂಡ ಹೆಚ್ಚುತ್ತಿರುವುದರಿಂದ ವಿದ್ಯುತ್‌ ಕಂಬಗಳಿಗೆ ಹಾನಿಯಾಗಿ ವಿದ್ಯುತ್‌ ವ್ಯತ್ಯಯವಾಗುತ್ತಿದೆ. ಇನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ತಾಲೂಕುಗಳಲ್ಲಿ ಜಡಿಮಳೆಗೆ ನದಿ, ಹಳ್ಳಗಳು ತುಂಬಿ ಹರಿಯುತ್ತಿವೆ. ತುಂಗಾ ನದಿಯಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಮುಂದುವರಿದಿದ್ದು, ತುಂಗಾ ಜಲಾಶಯದಿಂದ 18500 ಕ್ಯುಸೆಕ್‌ ನೀರನ್ನು ಹೊರ ಬಿಡಲಾಗಿದೆ.

ಇದೇ ವೇಳೆ ಕಳೆದ 2-3 ವರ್ಷಗಳಿಂದ ವಿಪರೀತ ಪ್ರಕೃತಿ ವಿಕೋಪಕ್ಕೆ ಸಾಕ್ಷಿಯಾಗಿರುವ ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಬುಧವಾರ ಗಾಳಿ, ಮಂಜುಸಹಿತ ಧಾರಾಕಾರ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಸೋಮವಾರಪೇಟೆ, ವಿರಾಜಪೇಟೆ, ಗೋಣಿಕೊಪ್ಪ, ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಮರಗಳು ಧರೆಗುರುಳಿರುವ ಪರಿಣಾಮ ವಿದ್ಯುತ್‌ ಕಂಬಕ್ಕೆ ಹಾನಿಯಾಗಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮದಲ್ಲಿ ಮನೆಯೊಂದು ನೆಲಸಮವಾಗಿದೆ. ಅದೃಷ್ಟವಶಾತ್‌ ಮನೆಯಲ್ಲಿ ಯಾರೂ ವಾಸವಿಲ್ಲದ ಕಾರಣ ಪ್ರಾಣಹಾನಿ ಸಂಭವಿಸಿಲ್ಲ.

ಉಡುಪಿ ಜಿಲ್ಲೆಯಲ್ಲಿ 5ನೇ ದಿನವೂ ಮಳೆ ಮುಂದುವರಿದಿದ್ದು ಹಲವೆಡೆ ಮರಗಳು ಉರುಳಿವೆ. ರಾ.ಹೆ.66ರ ಒತ್ತಿನೆಣೆಯಲ್ಲಿ ಮಂಗಳವಾರ ರಾತ್ರಿ ಭೂ ಕುಸಿತ ಸಂಭವಿಸಿದೆ. ಇದರಿಂದ ಭಾರಿ ಪ್ರಮಾಣದಲ್ಲಿ ಮಣ್ಣು ಹೆದ್ದಾರಿ ಮೇಲೆ ಬಿದ್ದು ಬುಧವಾರ ಬೆಳಗ್ಗೆ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿದ್ದು ಬೆಳ್ತಂಗಡಿ ತಾಲೂಕಿನ ಕೆಲವೆಡೆ ಭಾರಿ ಮಳೆಗೆ ವಿದ್ಯುತ್‌ ಕಂಬಗಳು ಧರಾಶಾಹಿಯಾಗಿವೆ.

ಇನ್ನು ಉತ್ತರ ಕನ್ನಡದ ಭಟ್ಕಳ, ಹೊನ್ನಾವರ, ಕುಮಟಾ, ಕಾರವಾರ, ಶಿರಸಿ, ಸಿದ್ದಾಪುರ, ಯಲ್ಲಾಪುರ ಸೇರಿ ಎಲ್ಲ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ಅಘನಾಶಿನಿ, ಗಂಗಾವಳಿ ನದಿಯಲ್ಲಿ ನೀರಿನ ಮಟ್ಟಹೆಚ್ಚಾಗಿದೆ. ಹಲವೆಡೆ ಗಾಳಿಯಿಂದ ವಿದ್ಯುತ್‌ ಕಂಬಗಳು ಧರೆಗುರುಳಿವೆ. ಕದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚುತ್ತಿರುವುದರಿಂದ ನೀರನ್ನು ಹೊರಬಿಡುವ ಸಾಧ್ಯತೆ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ.

Latest Videos
Follow Us:
Download App:
  • android
  • ios