ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲ ತಾಪದಿಂದ ಇನ್ನೂ ಎರಡು ದಿನ ಉಷ್ಣ ಅಲೆ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಗರಿಷ್ಠ ಉಷ್ಣಾಂಶದಲ್ಲಿ ಹೆಚ್ಚಳವಾಗುತ್ತಿದೆ. 

ಬೆಂಗಳೂರು (ಮಾ.03): ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲ ತಾಪದಿಂದ ಇನ್ನೂ ಎರಡು ದಿನ ಉಷ್ಣ ಅಲೆ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಗರಿಷ್ಠ ಉಷ್ಣಾಂಶದಲ್ಲಿ ಹೆಚ್ಚಳವಾಗುತ್ತಿದೆ. ಅದರಲ್ಲೂ ಕಳೆದ ನಾಲ್ಕೈದು ದಿನಗಳಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಲ್ಲಿ ಉಷ್ಣ ಅಲೆ ಭೀತಿ ಇದ್ದು, ಮುಂದಿನ ಎರಡು ದಿನ ಇದೇ ಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಅತಿ ಹೆಚ್ಚು 38.2 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿದೆ. 

ಇದು ವಾಡಿಕೆ ಪ್ರಮಾಣಕ್ಕಿಂತ 4.8 ಡಿ.ಸೆ. ಹೆಚ್ಚಾಗಿದೆ. ಹೊನ್ನಾವರದಲ್ಲಿಯೂ 36.6 ಡಿ.ಸೆ. ಗರಿಷ್ಠ ಉಷ್ಣಾಂಶ (ವಾಡಿಕೆಗಿಂತ 3.9 ಹೆಚ್ಚು) ದಾಖಲಾಗಿದೆ. ಮಂಗಳೂರಿನಲ್ಲಿ ಗರಿಷ್ಠ 36.3 ಡಿ.ಸೆ.(ವಾಡಿಕೆಗಿಂತ 2.4 ಹೆಚ್ಚು). ಪಣಂಬೂರಿನಲ್ಲಿ 36.7 ಡಿ.ಸೆ. ಗರಿಷ್ಠ ಉಷ್ಣಾಂಶ (3.4 ಡಿ.ಸೆ ಹೆಚ್ಚು) ದಾಖಲಾಗಿದೆ. ತೀವ್ರ ಬಿಸಿಲಿನ ತಾಪದ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ರಿಂದ 3 ಗಂಟೆ ನಡುವೆ ಬಿಸಿಲಿಗೆ ಹೋಗುವುದು ತಪ್ಪಿಸಬೇಕು. ಹಗುರವಾದ, ತಿಳಿ ಬಣ್ಣದ, ಸಡಿಲವಾದ ಹತ್ತಿಯ ಬಟ್ಟೆ ಧರಿಸಿ, ತಲೆ ಮುಚ್ಚಿಕೊಳ್ಳುವಂತೆ ಟೋಪಿ, ಬಟ್ಟೆ, ಛತ್ರಿ ಬಳಕೆ ಮಾಡುವಂತೆ ಸಲಹೆ ನೀಡಿದೆ. ಉಳಿದಂತೆ ರಾಜ್ಯದಲ್ಲಿ ವಾತಾವರಣದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ರಾಜ್ಯಾದ್ಯಂತ ಒಣ ಹವೆ ಇರಲಿದೆ ಎಂದು ಇಲಾಖೆ ತಿಳಿಸಿದೆ.

ಯೆಲ್ಲೋ ಅಲರ್ಟ್‌: ಕಳೆದ ಒಂದು ವಾರದಿಂದ ಕರಾವಳಿಯ ಉಷ್ಣಾಂಶ ದಿಢೀರ್‌ ಏರಿಕೆಯಾಗುತ್ತಿದ್ದು, ಮುಂದಿನ ಎರಡು ದಿನಗಳ ಕಾಲ ಉಷ್ಣಗಾಳಿ ಬೀಸಲಿದೆ ಎಂಬ ಐಎಂಡಿ ಎಚ್ಚರಿಕೆಯ ಹಿನ್ನೆಲೆಯಲ್ಲಿ ಭಾರತದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ಘೋಷಿಸಿದೆ. ದ.ಕ. ಜಿಲ್ಲೆಯಲ್ಲಿ ಗುರುವಾರ ಗರಿಷ್ಠ 38.3 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಇದೇ ವೇಳೆ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ, ಗರಿಷ್ಠ ಪ್ರಮಾಣದ ಬಿಸಿ ವಾತಾವರಣ ಕಂಡುಬಂದಿದೆ.

3 ತಿಂಗಳಲ್ಲಿ ಪಕ್ಷ ಸಂಘಟಿಸದಿದ್ದರೆ ಅಭ್ಯರ್ಥಿ ಬದಲಾವಣೆ: ಡಿ.ಕೆ. ಶಿವಕುಮಾರ್

ಮುನ್ನೆಚ್ಚರಿಕೆ ಸೂಚನೆ: ಭಾರತೀಯ ಹವಾಮಾನ ಇಲಾಖೆಯು ಹೀಟ್‌ ವೇವ್‌ ಪರಿಣಾಮಗಳ ಬಗ್ಗೆ ಎಚ್ಚರಿಕೆಯಿರುವಂತೆ ಸೂಚಿಸಿದ್ದು, ಸಾರ್ವಜನಿಕರಿಗೆ ಹತ್ತು ಹಲವಾರು ಜಾಗೃತಿಗಳನ್ನು ಬಿತ್ತರಿಸಿದೆ. ಹೀಟ್‌ ವೇವ್‌ ಪರಿಣಾಮ ಸೂಕ್ಷ್ಮ ಕಣಗಳು 2.5 ಮೈಕ್ರೋಮೀಟರುಗಳಿಗಿಂತ ಕಡಿಮೆ ವ್ಯಾಸವುಳ್ಳ ಕಣಗಳು ಉಸಿರಿನೊಂದಿಗೆ, ಶ್ವಾಸಕೋಶ ಮತ್ತು ರಕ್ತದ ಹರಿವಿನಲ್ಲಿ ಪ್ರವೇಶಿಸಿ ಗಂಭೀರವಾದ ಆರೋಗ್ಯ ಸಮಸ್ಯೆಯನ್ನು ಉಂಟುಮಾಡಬಹುದು ಈ ಬಗ್ಗೆ ಜಾಗೃತಿ ವಹಿಸುವಂತೆ ಸೂಚಿಸಿದೆ. ಹೀಟ್‌ ವೇವ್‌ ಪರಿಣಾಮದಿಂದ ಕರಾವಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಾರ್ವಜನಿಕರು ಜಾಗೃತವಾಗಿರುವಂತೆ ಭಾರತೀಯ ಹವಾಮಾನ ಇಲಾಖೆ ಸೂಚಿಸಿದೆ.