Asianet Suvarna News Asianet Suvarna News

ಕರ್ತವ್ಯದ ವೇಳೆ ಹೃದಯಾಘಾತವಾದರೆ ‘ಅಪಘಾತ'!

ಕರ್ತವ್ಯದ ವೇಳೆ ಹೃದಯಾಘಾತವಾದರೆ ‘ಅಪಘಾತ’!| ಅಪಘಾತ ಎನ್ನಲಾಗಲ್ಲ ಎಂಬ ಈಶಾನ್ಯ ಸಾರಿಗೆ ವಾದ ತಿರಸ್ಕಾರ| ಮೃತ ನೌಕರನ ಕುಟುಂಬಕ್ಕೆ ಪರಿಹಾರ ನೀಡಿ| ಸಾರಿಗೆ ಸಂಸ್ಥೆಗೆ ಹೈಕೋರ್ಟ್‌ ಮಹತ್ವದ ಆದೇಶ

Heart attack on duty is injury caused during work Karnataka court pod
Author
Bangalore, First Published Dec 30, 2020, 2:35 PM IST

ಬೆಂಗಳೂರು(ಡಿ.30): ಕರ್ತವ್ಯ ನಿರ್ವಹಣೆ ವೇಳೆ ನೌಕರ ಹೃದಯಘಾತದಿಂದ ಸಾವನ್ನಪ್ಪಿದರೆ, ಅದನ್ನು ಅಪಘಾತವೆಂದೇ ಪರಿಗಣಿಸಬೇಕು ಎಂದು ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ.

ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ನೌಕರನಿಗೆ ಹೃದಯಘಾತವು ಸಂಭವಿಸಿದ್ದನ್ನು ‘ಅಪಘಾತ’ ಎಂಬುದಾಗಿ ವ್ಯಾಖ್ಯಾನಿಸಲಾಗದು ಎಂಬ ಈಶಾನ್ಯ ರಸ್ತೆ ಸಾರಿಗೆ ನಿಗಮದ (ಎನ್‌ಇಕೆಆರ್‌ಟಿಸಿ) ವಾದವನ್ನು ಹೈಕೋರ್ಟ್‌ ಸಾರಾಸಗಟಾಗಿ ತಿರಸ್ಕರಿಸಿದೆ.

‘ಅಪಘಾತ ಎಂದರೆ ಊಹಿಸಲಾಗದ ಹಾಗೂ ಅನಿರೀಕ್ಷಿತ ಘಟನೆಯಾಗಿರುತ್ತದೆ. ಅದನ್ನು ನಿರೀಕ್ಷೆ ಅಥವಾ ಯೋಜಿಸಲಾಗುವುದಿಲ್ಲ. ಅಂತಹ ಸಂದರ್ಭದದಲ್ಲಿ ಕರ್ತವ್ಯ ಮೇಲಿದ್ದಾಗ ನೌಕರನಿಗೆ ಹೃದಯಾಘಾತ ಉಂಟಾದರೆ ಅದು ಹೃದಯಕ್ಕೆ ಆದ ಗಾಯವಾದಂತೆ ಹಾಗಾಗಿ ಹೃದಯಾಘಾತವನ್ನು ಅಪಘಾತವೆಂದೇ ಪರಿಗಣಿಸಬೇಕಾಗುತ್ತದೆ’ ಎಂದು ನ್ಯಾಯಮೂರ್ತಿ ಸುನೀಲ್‌ದತ್‌ ಯಾದವ್‌ ಮತ್ತು ನ್ಯಾಯಮೂರ್ತಿ ಪಿ.ಎನ್‌. ದೇಸಾಯಿ ಅವರಿದ್ದ ಹೈಕೋರ್ಟ್‌ ಕಲಬುರಗಿ ವಿಭಾಗೀಯ ನ್ಯಾಯಪೀಠ ಆದೇಶಿಸಿದೆ.

‘ವಾಹನ ಚಾಲನೆ ಕೆಲಸದ ಸ್ವರೂಪವೇ ಒತ್ತಡದಿಂದ ಕೂಡಿರುತ್ತದೆ. ವಿಜಯ್‌ ಕುಮಾರ್‌ ಹೃದಯಘಾತ ಸಂಭವಿಸಿ ಸಾವನ್ನಪ್ಪಿರುವುದನ್ನು ವೈದ್ಯಕೀಯ ದಾಖಲೆಗಳು, ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತ ಸಂಭವಿಸಿರುವುದನ್ನು ಇತರೆ ದಾಖಲೆಗಳು ಸಾಬೀತುಪಡಿಸುತ್ತದೆ. ಆದ್ದರಿಂದ ಪರಿಹಾರ ಕಲ್ಪಿಸಲು ಕೆಳ ನ್ಯಾಯಾಲಯ ಹೊರಡಿಸಿರುವ ಆದೇಶವು ಸೂಕ್ತವಾಗಿದೆ’ ಎಂದು ಆದೇಶಿಸಿದ ನ್ಯಾಯಪೀಠ ಮೇಲ್ಮನವಿ ವಜಾಗೊಳಿಸಿತು. ಜತೆಗೆ, ಪರಿಹಾರ ಮೊತ್ತವನ್ನು ಠೇವಣಿ ಇಟ್ಟಿದ್ದರೆ, ಅದನ್ನು ಕೂಡಲೇ ಮೃತ ನೌಕರರ ಪತ್ನಿ ಹಾಗೂ ಮಕ್ಕಳಿಗೆ ವಿತರಿಸುವಂತೆಯೂ ಕೆಳ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.

ಎನ್‌ಇಕೆಆರ್‌ಟಿಸಿಯಲ್ಲಿ ಬಸ್‌ ಚಾಲಕರಾರಾಗಿದ್ದ ವಿಜಯ್‌ ಕುಮಾರ್‌ಗೆ, 2012ರ ಸೆ.5ರಂದು ಸಂಜೆ 4.45 ಸಮಯದಲ್ಲಿ ಕಲಬುರಗಿ ವಿವಿ ಆವರಣದ ಬಳಿ ಬಸ್‌ ಚಾಲನೆ ಮಾಡುತ್ತಿದ್ದ ವೇಳೆ ಹೃದಯಘಾತ ಸಂಭವಿಸಿತು. ಆಸ್ಪತ್ರೆಗೆ ಕೊಂಡೊಯುತ್ತಿದ್ದ ವೇಳೆ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದರು.

ಪ್ರಕರಣವೇನು?:

ಎನ್‌ಇಕೆಆರ್‌ಟಿಸಿಯಲ್ಲಿ ಬಸ್‌ ಚಾಲಕರಾರಾಗಿದ್ದ ವಿಜಯ್‌ ಕುಮಾರ್‌ಗೆ, 2012ರ ಸೆ.5ರಂದು ಸಂಜೆ 4.45 ಸಮಯದಲ್ಲಿ ಕಲಬುರಗಿ ವಿವಿ ಆವರಣದ ಬಳಿ ಬಸ್‌ ಚಾಲನೆ ಮಾಡುತ್ತಿದ್ದ ವೇಳೆ ಹೃದಯಘಾತ ಸಂಭವಿಸಿತು. ಆಸ್ಪತ್ರೆಗೆ ಕೊಂಡೊಯುತ್ತಿದ್ದ ವೇಳೆ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದರು. ಇದರಿಂದ ಅವರ ಪತ್ನಿ ಮತ್ತು ಮಕ್ಕಳು ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ಕರ್ತವ್ಯ ಮೇಲಿದ್ದಾಗ ಕಾರ್ಯದೊತ್ತಡ ಮತ್ತು ಆಯಾಸ ಉಂಟಾದ ಪರಿಣಾಮ ವಿಜಯ್‌ ಕುಮಾರ್‌ ಹೃದಯಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ ಎಂದು ವಾದಿಸಿದ್ದರು.

ವಿಚಾರಣೆ ನಡೆಸಿದ್ದ ಕಲಬುರಗಿಯ ನೌಕರರ ಪರಿಹಾರ ಆಯುಕ್ತರಾಗಿರುವ 2ನೇ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶರು, ಮೃತ ನೌಕರನ ಕುಟುಂಬದವರಿಗೆ 2010ರ ಜೂ.8ರಿಂದ ಪರಿಹಾರ ವಿತರಣೆ ಮಾಡುವ ದಿನದವರೆಗೂ ಅನ್ವಯವಾಗುವಂತೆ ವಾರ್ಷಿಕ ಶೇ.12ರಷ್ಟುಬಡ್ಡಿದರದಲ್ಲಿ ಒಟ್ಟು 21,98,090 ರು. ಪರಿಹಾರ ನೀಡುವಂತೆ ಎನ್‌ಇಕೆಆರ್‌ಟಿಸಿಗೆ 2017ರ ಏ.5ರಂದು ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಎನ್‌ಇಕೆಆರ್‌ಟಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಈ ಆದೇಶ ರದ್ದು ಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ಎನ್‌ಇಕೆಆರ್‌ಟಿಸಿ, ನೌಕರರ ಪರಿಹಾರ ಕಾಯ್ದೆ-1923ರ ಸೆಕ್ಷನ್‌ 3ರ ಪ್ರಕಾರ ಹೃದಯಘಾತ ‘ಅಪಘಾತ ಅಥವಾ ವೈಯಕ್ತಿಕ ಗಾಯ’ದ ವ್ಯಾಪ್ತಿಗೆ ಬರುವುದಿಲ್ಲ. ಪರಿಹಾರ ಕಲ್ಪಿಸಬೇಕಾದರೆ ಚಾಲಕ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿ ಅಥವಾ ವೈಯಕ್ತಿಕವಾಗಿ ಗಾಯಗೊಂಡು ಸಾವನ್ನಪ್ಪಿರಬೇಕು. ಪ್ರಕರಣದಲ್ಲಿ ಒತ್ತಡ ಹಾಗೂ ಆಯಾಸದಿಂದ ವಿಜಯ್‌ ಕುಮಾರ್‌ಗೆ ಹೃದಯಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ ಎಂದು ಆತನ ಕುಟುಂಬದವರು ಹೇಳಿದ್ದಾರೆ. ಆದರೆ, ಅದನ್ನು ಸಾಬೀತುಪಡಿಸುವ ದಾಖಲೆ ಒದಗಿಸಿಲ್ಲ ಎಂದು ವಾದಿಸಿತ್ತು.

ಅಲ್ಲದೆ, ಕರ್ತವ್ಯ ನಿರ್ವಹಣೆ ವೇಳೆ ಸಾವು ಸಂಭವಿಸಿದ ಎಂಬ ಮಾತ್ರಕ್ಕೆ ಅದನ್ನು ಅಪಘಾತ ಎನ್ನಲಾಗದು. ವಿಜಯ್‌ಕುಮಾರ್‌ ಅವರದು ಸಹಜ ಸಾವು. ಅವರ ಸಾವಿಗೂ ಮತ್ತು ಮಾಡುತ್ತಿದ್ದ ಕೆಲಸಕ್ಕೂ ಯಾವುದೇ ಸಂಬಂಧವಿಲ್ಲ. ವಿಜಯ್‌ ಕುಮಾರ್‌ ಅಪಘಾತಕ್ಕೆ ಒಳಗಾಗಿಲ್ಲ. ವೈಯಕ್ತಿಕ ಗಾಯಕ್ಕೂ ತುತ್ತಾಗಿಲ್ಲ. ಹೀಗಾಗಿ ಪರಿಹಾರ ಕಲ್ಪಿಸಲಾಗದು ಎಂದು ಸಮರ್ಥಿಸಿಕೊಂಡಿತ್ತು.

ವಾದಕ್ಕೆ ನಕಾರ:

ಎನ್‌ಇಕೆಆರ್‌ಟಿಸಿ ವಾದವನ್ನು ತಿರಸ್ಕರಿಸಿದ ಹೈಕೋರ್ಟ್‌, ಘಟನೆ ಸಂಭವಿಸಿದ ದಿನದಂದು ವಿಜಯ್‌ ಕುಮಾರ್‌ ಬೆಳಗ್ಗೆ 6 ಗಂಟೆಗೆ ಕರ್ತವ್ಯಕ್ಕೆ ಹಾಜರಾಗುತ್ತಾರೆ. ಸಂಜೆ ಐದು ಗಂಟೆಗೆ ಹೃದಯಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ. ಹೃದಯಘಾತವೇ ಒಂದು ಅಪಘಾತ. ಮೃತರು 22 ವರ್ಷ ಕಾಲ ನಿಗಮದ ಭಾರಿ ಗಾತ್ರದ ಬಸ್‌ ಚಾಲನೆ ಮಾಡಿದ್ದಾರೆ. ಅದರಲ್ಲೂ ಜನ ಹಾಗೂ ವಾಹನ ಸಂಚಾರ ಹೆಚ್ಚಿರುವಂತಹ ಕಲಬುರಗಿ ಜಿಲ್ಲಾ ಕೇಂದ್ರದಲ್ಲಿ ಬಸ್‌ ಚಲಾಯಿಸಿದ್ದಾರೆ. ಇದರಿಂದ ಸಹಜವಾಗಿಯೇ ಆಯಾಸ ಮತ್ತು ಒತ್ತಡ ಏರ್ಪಡುತ್ತದೆ ಎಂದು ಅಭಿಪ್ರಾಯಪಟ್ಟಿತು.

Follow Us:
Download App:
  • android
  • ios