ಕೊಡಗಿನ ಕುಶಾಲನಗರದಲ್ಲಿ ವ್ಯಾಪಾರೋದ್ಯಮಿ ನಾಗೇಗೌಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೈಸೂರಿಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಸಾವುಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕೊಡಗು (ಜೂ.29): ರಾಜ್ಯಾದ್ಯಂತ ಹೃದಯಾಘಾತದಿಂದ ಸಾವು ಪ್ರಕರಣಗಳು ಹೆಚ್ಚುತ್ತಿರುವುದು ಚಿಂತೆಗೀಡಾಗಿವೆ. ಕಳೆದ ಒಂದು ತಿಂಗಳಲ್ಲಿ ಹಾಸನ ಜಿಲ್ಲೆಯೊಂದರಲ್ಲೇ ಹದಿನೇಳು ಜನರು ಈ ಹೃದಯಾಘಾತದಿಂದ ಮೃತರಾಗಿದ್ದಾರೆ. ಇದೀಗ, ಕೊಡಗಿನ ಕುಶಾಲನಗರದ ಸೋಮೇಶ್ವರ ಬಡಾವಣೆಯ ನಿವಾಸಿ ಮತ್ತು ಜೆಸಿ ಅಲುಮಿನಿ ಕ್ಲಬ್ ವಲಯ ಉಪಾಧ್ಯಕ್ಷರಾಗಿದ್ದ 50 ವರ್ಷದ ವ್ಯಾಪಾರೋದ್ಯಮಿ ನಾಗೇಗೌಡ ಅವರ ಸಾವು ಈ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಇಂದು ಬೆಳಗ್ಗೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ತಪಾಸಣೆ ನಡೆಸಲಾಗಿತ್ತು. ಆದರೆ ಆರಂಭಿಕ ಪರೀಕ್ಷೆಯಲ್ಲಿ ಗಂಭೀರ ಸ್ಥಿತಿ ಗೊತ್ತಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲಿ ನಾಗೇಗೌಡ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆಯಿಂದ ಸಾರ್ವಜನಿಕರಲ್ಲಿ ಆತಂಕ ಮತ್ತು ಆರೋಗ್ಯ ಚಿಂತೆ ಉಲ್ಬಣಗೊಂಡಿದೆ. ವೈದ್ಯಕೀಯ ತಜ್ಞರು ಹೃದಯ ಆರೋಗ್ಯದ ಬಗ್ಗೆ ಅಜಾಗರೂಕತೆ ಮತ್ತು ಆಹಾರ, ಜೀವನ ಶೈಲಿ ಬದಲಾವಣೆಗಳನ್ನು ಕಾರಣವೆಂದು ತಿಳಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಈ ಸಾವುಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ಅಗತ್ಯ ಕ್ರಮಗಳನ್ನು ಜಾರಿಗೆ ತರಲು ಮುಂದಾಗಬೇಕಿದೆ.
ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಏಕಾಏಕಿ ಹೆಚ್ಚಳವಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಈ ಸಂದರ್ಭದಲ್ಲಿ ಆರೋಗ್ಯ ಸಚಿವಾಲಯ ಜನರಲ್ಲಿ ಜಾಗೃತಿ ಮೂಡಿಸಬೇಕು, ಕಾಲಕಾಲಕ್ಕೆ ಹೃದಯ ತಪಾಸಣೆ ಮಾಡಿಸುವ ಮೂಲಕ ಹೃದಯಾಘಾತದಿಂದ ಜೀವ ರಕ್ಷಿಸಿಕೊಳ್ಳಬಹುದಾಗಿದೆ.
