ಬೆಂಗಳೂರು, (ಮೇ. 08): ಗರ್ಭಿಣಿಯೊಬ್ಬರಿಗೆ ಕೊರೊನಾ ಸೋಂಕು ಪಾಸಿಟಿವ್ ಬಂದ ಕಾರಣ ವಾಣಿವಿಲಾಸ ಆಸ್ಪತ್ರೆಯ ಸಿಬ್ಬಂದಿಯಲ್ಲಿ ತೀವ್ರ ಆತಂಕ ಮನೆ ಮಾಡಿದೆ.

ಈ  ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಶ್ರೀರಾಮುಲು, ಯಾರೂ ಗಾಬರಿಪಡಬೇಡಿ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದಾಗಿ  ಸ್ಪಷ್ಟಪಡಿಸಿದರು. 

ಅವಳಿ ಮಕ್ಕಳಿಗೆ ಜನ್ಮ ನೀಡಿದ ಪಾದರಾಯನಪುರದ ಕೊರೋನಾ ಸೋಂಕಿತ ಮಹಿಳೆ

ಗರ್ಭಿಣಿಯೊಬ್ಬರಿಗೆ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ವಾಣಿವಿಲಾಸ ಆಸ್ಪತ್ರೆಯ ಸಿಬ್ಬಂದಿ ಆತಂಕಗೊಂಡು ತಮಗೆ ಸುರಕ್ಷತಾ ವ್ಯವಸ್ಥೆ ಕೈಗೊಳ್ಳುವಂತೆ ಒತ್ತಾಯಿಸಿದ್ದರಲ್ಲದೇ, ಪ್ರತಿಭಟನೆಗೆ ಇಳಿದಿದ್ದರು. 

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಶ್ರೀರಾಮುಲು ವಾಣಿ ವಿಲಾಸ ನಾನ್ ಕೋವಿಡ್ ಆಸ್ಪತ್ರೆ ಆಗಿದ್ದರಿಂದ ಪಿಪಿಇ ಕಿಟ್ ಇರಲಿಲ್ಲ ಎಂಬುದು ಸತ್ಯ. ಇದರಿಂದಾಗಿ ಆತಂಕ ಮನೆಮಾಡಿತ್ತು. ಈಗ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಿದ್ದೇವೆ ಎಂದು ಹೇಳಿದರು.

ಪಾಸಿಟಿವ್ ಬಂದ ಗರ್ಭಿಣಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಯಾರೂ ಗಾಬರಿಯಾಗುವ ಅವಶ್ಯಕತೆ ಇಲ್ಲ.  ಕೋವಿಡ್ ಆಸ್ಪತ್ರೆಗಳಿಗೂ ಪಿಪಿಇ ಕಿಟ್ ಗಳನ್ನು ಒದಗಿಸುತ್ತೇವೆ. ಈ ಬಗ್ಗೆ ಟಾಸ್ಕ್ ಪೋರ್ಸ್ ಸಭೆಯಲ್ಲಿಯೂ ಚರ್ಚೆ ಮಾಡಿದ್ದೇವೆ. ವೈದ್ಯರು, ನರ್ಸ್​ಗಳು, ವೈದ್ಯ ವಿದ್ಯಾರ್ಥಿಗಳು ಯಾರೂ ಗಾಬರಿ ಪಡಬೇಕಿಲ್ಲ. ಸರ್ಕಾರ ಅಗತ್ಯ ಕ್ರಮಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ಆಡಳಿತ ಮಂಡಳಿ ತಮಗೆ ಅಗತ್ಯ ಸೌಕರ್ಯ ಒದಗಿಸುತ್ತಿಲ್ಲ ಎಂದು ಆರೋಪಿಸಿ ನಗರದ ವಾಣಿ ವಿಲಾಸ್ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಶನಿವಾರ ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಮಾಸ್ಕ್ ಮತ್ತು ಪಿಪಿಇ ಕಿಟ್‌ಗಳೂ ಸೇರಿ ಇನ್ನಿತರ ಅಗತ್ಯ ಸೌಲಭ್ಯ ಒ‌ದಗಿಸುತ್ತಿಲ್ಲ ಎಂದು ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ದೂರಿದ್ದಾರೆ. ಇನ್ನು, ನಗರದ ಪಾದರಾಯನಪುರದಲ್ಲಿ ಕೊರೊನಾ ಸೋಂಕು‌ ಅಧಿಕವಾಗಿದ್ದು, ಅಲ್ಲಿಯ ಗರ್ಭಿಣಿಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ‌  ಆಕೆಯ ಸಂಬಂಧಿಕರು ಆಸ್ಪತ್ರೆಯಲ್ಲಿ ಓಡಾಡಿದ್ದು, ಹೀಗಾಗಿ ವೈದ್ಯಕೀಯ ಸಿಬ್ಬಂದಿ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.