ಬದಲಾದ ಜೀವನಶೈಲಿ, ಕಡಿಮೆ ಗುಣಮಟ್ಟದ ಆಹಾರ ಸೇವನೆ, ವ್ಯಾಯಾಮ ರಹಿತ ಬದುಕು, ಉದ್ಯೋಗದ ಒತ್ತಡದಿಂದಾಗಿ ಅಸಾಂಕ್ರಾಮಿಕ ರೋಗಗಳಿಗೆ ಜನರು ಹೆಚ್ಚಾಗಿ ತುತ್ತಾಗುತ್ತಿದ್ದಾರೆ. ಜನರ ಜೀವಿತಾವಧಿ ಹೆಚ್ಚುತ್ತಿದೆ. 

ಬೆಂಗಳೂರು (ಏ. 07): ‘ಆರೋಗ್ಯ ನಿಜವಾದ ಸಂಪತ್ತೇ ಹೊರತು, ಚಿನ್ನ, ಬೆಳ್ಳಿಯ ತುಂಡುಗಳಲ್ಲ’ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಹೇಳಿದ್ದರು. ಕೋವಿಡ್‌-19 ಸಾಂಕ್ರಾಮಿಕ ಆರಂಭದ ಬಳಿಕ ಈ ಮಾತಿಗೆ ಹೆಚ್ಚಿನ ಮಹತ್ವ ದೊರೆತಿದೆಯೇನೋ ಎಂದು ಅನಿಸುವುದು ಸುಳ್ಳಲ್ಲ. ಆರೋಗ್ಯದ ಬಗ್ಗೆ ಮಾತನಾಡುವಾಗಲೆಲ್ಲಾ ಅನೇಕರು ಹಿಂದಿನ ಕಾಲದ ಉದಾಹರಣೆಯನ್ನು ಹೇಳಿ ಹೋಲಿಕೆ ಮಾಡಿಕೊಳ್ಳುತ್ತಾರೆ. ನಮ್ಮ ಮುತ್ತಜ್ಜನಿಗೆ ಮಧುಮೇಹವೇ ಇರಲಿಲ್ಲ. ನಮ್ಮ ಹಿರಿಯರಿಗೆ ಹೃದಯರೋಗ ಎಂದರೆ ಗೊತ್ತೇ ಇರಲಿಲ್ಲ... ಹೀಗೆ ಆರೋಗ್ಯದ ಸ್ಥಿತಿಯನ್ನುಹಿಂದಿನ ಕಾಲಕ್ಕೆ ಹೋಲಿಸಿಕೊಳ್ಳುವುದು ಸಹಜ.

ರೋಗಗಳು ಆಗಲೂ ಇದ್ದವು, ಈಗಲೂ ಇವೆ. ಆದರೆ ಕಾಲ ಕಳೆದಂತೆ ಆರೋಗ್ಯ ವ್ಯವಸ್ಥೆಯನ್ನು ನಾವೆಷ್ಟುಬಲಪಡಿಸಿದ್ದೇವೆ ಹಾಗೂ ಎಷ್ಟರ ಮಟ್ಟಿಗೆ ಆರೋಗ್ಯದಾಯಕ ಬದುಕು ನಡೆಸುತ್ತಿದ್ದೇವೆ ಎಂಬ ಪ್ರಶ್ನೆ ಕೇಳಿಕೊಳ್ಳುವುದು ಮುಖ್ಯ. ಇದೇ ವಿಶ್ವ ಆರೋಗ್ಯ ದಿನದಂದು ಕೇಳಿಕೊಳ್ಳಬೇಕಾದ ಪ್ರಶ್ನೆ ಹಾಗೂ ಚಿಂತಿಸಬೇಕಾದ ವಿಚಾರ.

ವಿಶ್ವ ಆರೋಗ್ಯ ಸಂಸ್ಥೆ ಉದಯ

1948ರ ಏಪ್ರಿಲ್‌ 7ರಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಜನ್ಮತಾಳಿತು. ಈ ಸುಸಂದರ್ಭವನ್ನೇ ವಿಶ್ವ ಆರೋಗ್ಯ ದಿನವಾಗಿ ಆಚರಿಸಲಾಗುತ್ತಿದೆ. ಆದರೆ ಆರೋಗ್ಯದ ನಿಜವಾದ ಅರ್ಥ, ಕಾಳಜಿ ಹಾಗೂ ಸಮುದಾಯದ ಆರೋಗ್ಯ ಕಾಪಾಡಲು ವ್ಯಕ್ತಿ ಮಾಡಬೇಕಾದ ಕರ್ತವ್ಯದ ಬಗ್ಗೆ ಅರಿವು ಮೂಡಿದಾಗ ಮಾತ್ರ ಈ ದಿನಾಚರಣೆ ಸಾರ್ಥಕವಾಗಲು ಸಾಧ್ಯ.

ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿ, ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಜನರು ಜೀವಿಸುವ ಸರಾಸರಿ ವರ್ಷ ಹೆಚ್ಚತೊಡಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, 1955ರಲ್ಲಿ ನಿರೀಕ್ಷಿತ ಜೀವಿತಾವಧಿ 48 ವರ್ಷಗಳು. 1995ರಲ್ಲಿ ಇದು 65ಕ್ಕೆ ತಲುಪಿತ್ತು. 2025ರ ವೇಳೆಗೆ ಈ ಸಂಖ್ಯೆ 73ಕ್ಕೆ ತಲುಪಲಿದೆ ಎಂದು ಅಂದಾಜಿಸಲಾಗಿದೆ.

2025ಕ್ಕೆ ಯಾವುದೇ ದೇಶಗಳು 50 ವರ್ಷಕ್ಕಿಂತ ಕಡಿಮೆ ನಿರೀಕ್ಷಿತ ಜೀವಿತಾವಧಿ ಹೊಂದಿರುವುದಿಲ್ಲ ಎಂದು ಕೂಡ ಅಂದಾಜು ಮಾಡಲಾಗಿದೆ. ಹೀಗಾಗಿ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟುಬಲಪಡಿಸಿ ದೀರ್ಘಕಾಲ ಉತ್ತಮ ಆರೋಗ್ಯದ ಬದುಕು ನಡೆಸುವ ಕಡೆ ಗಮನಹರಿಸಬೇಕಿದೆ.

ಅಸಾಂಕ್ರಾಮಿಕ ರೋಗಗಳ ತಡೆ

ಶ್ರೀಮಂತರ ಕಾಯಿಲೆ ಎಂದು ಕರೆಯಲ್ಪಡುತ್ತಿದ್ದ ಮಧುಮೇಹಕ್ಕೆ ಈಗ ಯಾವುದೇ ಭೇದವಿಲ್ಲ. ಜಗತ್ತಿನ 6 ಮಧುಮೇಹಿಗಳಲ್ಲಿ ಒಬ್ಬರು ಭಾರತೀಯರು ಎಂಬುದು ಅಧ್ಯಯನವೊಂದರಿಂದ ಹೊರಬಿದ್ದ ಫಲಿತಾಂಶ. ಅಂದರೆ ನಮ್ಮ ದೇಶ ಮಧುಮೇಹದಿಂದ ಬಳಲುತ್ತಿರುವವರನ್ನು ಹೆಚ್ಚಾಗಿ ಹೊಂದಿರುವ ದೇಶ.

10 ವರ್ಷದ ಮಕ್ಕಳಲ್ಲೂ ಕಂಡುಬರುವ ಮಧುಮೇಹ ಮುಂದಿನ ಜೀವಿತಾವಧಿಯಲ್ಲಿ ಮತ್ತಷ್ಟುಅನಾರೋಗ್ಯಕರ ಸ್ಥಿತಿಗಳನ್ನು ಸೃಷ್ಟಿಸುತ್ತದೆ. ರಕ್ತದೊತ್ತಡ, ಹೃದಯಾಘಾತ, ಮೂತ್ರಪಿಂಡದ ಸಮಸ್ಯೆಗಳೆಲ್ಲವೂ ಒಂದಕ್ಕೊಂದು ಕೊಂಡಿ ಹೊಂದಿರುವಂತೆ ದಾಳಿ ಮಾಡುತ್ತವೆ. ಬದಲಾದ ಜೀವನಶೈಲಿ, ಕಡಿಮೆ ಗುಣಮಟ್ಟದ ಆಹಾರ ಸೇವನೆ, ವ್ಯಾಯಾಮರಹಿತ ಬದುಕು, ಉದ್ಯೋಗದ ಒತ್ತಡದಿಂದಾಗಿ ಅಸಾಂಕ್ರಾಮಿಕ ರೋಗಗಳಿಗೆ ಜನರು ಹೆಚ್ಚಾಗಿ ತುತ್ತಾಗುತ್ತಿದ್ದಾರೆ.

ಇದರ ನಿಯಂತ್ರಣಕ್ಕಾಗಿ ಮೊದಲು ಜೀವನಶೈಲಿಯ ಬದಲಾವಣೆ, ನಿಯಮಿತ ವ್ಯಾಯಾಮ, ಉತ್ತಮ ಆಹಾರ ಸೇವನೆಯ ಕಡೆ ಗಮನಹರಿಸಬೇಕಿದೆ. ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಂದ ಜನರನ್ನು ದೂರವಿಸುವ ಪ್ರಯತ್ನ ಮಾಡಬೇಕಿದೆ. 40 ವರ್ಷ ವಯಸ್ಸಿನ ಬಳಿಕ ಪ್ರತಿಯೊಬ್ಬರೂ ಆಸ್ಪತ್ರೆಗೆ ತೆರಳಿ ದೇಹಾರೋಗ್ಯ ತಪಾಸಣೆ ಮಾಡಿಸುವ ಅರಿವು ಇಲ್ಲಿ ಬೇಕಿದೆ.

ಸ್ವಚ್ಛತೆ ಮರೆತಿದ್ದೇಕೆ?

ಕೋವಿಡ್‌ ನಿಯಂತ್ರಣದ ಈ ಸಮಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬೇಡಿ ಎಂಬ ಸಂದೇಶ ನೀಡಲಾಗುತ್ತಿದೆ. ಹಾಗಾದರೆ ಇಷ್ಟುದಿನ ನಮಗೆ ಈ ಸಂದೇಶ ಅರಿವಿರಲಿಲ್ಲವೇ? ಇಲ್ಲಿ ಬರುವುದೇ ಸ್ವಚ್ಛತೆಯ ವಿಚಾರ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ನೆಮ್ಮದಿಯ ಸ್ಥಿತಿಯೇ ಆರೋಗ್ಯ. ಅಂದರೆ, ಕೇವಲ ದೈಹಿಕವಾಗಿ ಚೆನ್ನಾಗಿದ್ದು, ಮಾನಸಿಕ ಖಿನ್ನತೆಗೆ ಒಳಗಾದವರು ಸಂಪೂರ್ಣ ಆರೋಗ್ಯವಂತರಲ್ಲ. ಅಥವಾ ಸಾಮಾಜಿಕವಾಗಿ ನೆಮ್ಮದಿಯಿಂದ ಬಾಳದಿದ್ದರೂ ಅವರು ಆರೋಗ್ಯವಂತರಲ್ಲ.

ನಾವು ಜೀವಿಸುವ ವಾತಾವರಣ, ಗಾಳಿ, ಬೆಳಕು, ನೀರು, ಆಹಾರ ಎಲ್ಲವೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗೆಂದೇ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛತಾ ಅಭಿಯಾನಕ್ಕೆ ಹೊಸ ರೂಪ ನೀಡಿದರು. ನಮ್ಮ ಮನೆಯ ಸುತ್ತಲಿನ ವಾತಾವರಣ ಸ್ವಚ್ಛವಾಗಿದ್ದರೆ ಯಾವುದೇ ರೋಗಗಳು ಬರುವುದಿಲ್ಲ. ರೋಗ ಬಾರದಿದ್ದರೆ ಜನರ ಜೀವನ ಗುಣಮಟ್ಟಏರಿಕೆಯಾಗುತ್ತದೆ ಎಂಬುದು ಅಭಿಯಾನದ ಮೂಲೋದ್ದೇಶ.

ಕೇಂದ್ರದ ಅನುದಾನ ಹೆಚ್ಚಳ

ಈ ಬಾರಿ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಕಳೆದ ಬಾರಿಗಿಂತ ಶೇ.137ರಷ್ಟು(2,23,846 ಕೋಟಿ ರು.) ಹೆಚ್ಚು ಅನುದಾನ ಮೀಸಲಿಟ್ಟಿದೆ. ರೋಗ ಬರುವ ಮುನ್ನವೇ ತಡೆಯುವುದು (ಪ್ರಿವೆಂಟಿವ್‌), ಚಿಕಿತ್ಸೆ ನೀಡುವುದು (ಕ್ಯುರೇಟಿವ್‌) ಹಾಗೂ ಸ್ವಾಸ್ಥ್ಯ (ವೆಲ್‌ ಬೀಯಿಂಗ್‌) ಎಂಬ ಅಂಶಗಳ ಕಡೆ ಈ ಬಜೆಟ್‌ ಗಮನ ಕೇಂದ್ರೀಕರಿಸಿದೆ.

ಈ ಪೈಕಿ ಸಾಂಕ್ರಾಮಿಕ ರೋಗಗಳ ತಡೆಗೆ ಲಸಿಕೆ ಎಂಬುದು ಬಹುದೊಡ್ಡ ಪ್ರಿವೆಂಟಿವ್‌ ಕ್ರಮ. ಪೊಲಿಯೋ ರೋಗವನ್ನು ಭಾರತದಿಂದ ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಾಗಿದ್ದೇ ಈ ರೋಗ ಪೂರ್ವ ಕ್ರಮ. ಇದೇ ರೀತಿ ಕೋವಿಡ್‌ ಲಸಿಕೆ, ಇಂದ್ರ ಧನುಷ್‌ ಸೇರಿದಂತೆ ನಾನಾ ಲಸಿಕಾ ಅಭಿಯಾನಕ್ಕೆ ಜನತೆಯ ಸಂಪೂರ್ಣ ಸಹಕಾರ ಸಿಕ್ಕರೆ, ಆರೋಗ್ಯವಂತ ಸಮಾಜ ನಿರ್ಮಿಸಿ, ವಿಶ್ವ ಆರೋಗ್ಯ ದಿನದ ಆಚರಣೆಗೆ ನಿಜ ಅರ್ಥ ನೀಡಬಹುದು.

- ಡಾ. ಕೆ.ಸುಧಾಕರ್‌, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ