ಬೆಂಗಳೂರು (ಆ.26): ಕೊರೊನಾ ವೈರಸ್‌ ಸೋಂಕು ಹರಡುವಿಕೆಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಸೋಂಕು ಪರೀಕ್ಷೆಗಳನ್ನು ಕ್ರಮೇಣ ಒಂದು ದಿನಕ್ಕೆ ಒಂದು ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಆರೋಗ್ಯ ಇಲಾಖೆ ಮತ್ತು ರಾಜೀವ್‌ ಗಾಂಧಿ ವಿಶ್ವವಿದ್ಯಾಲಯದ ತಜ್ಞರ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಜರ್ಮನಿಯಲ್ಲಿ ಪ್ರತಿ ಹತ್ತು ಲಕ್ಷ ಜನರಲ್ಲಿ 1.2 ಲಕ್ಷ ಜನರ ಪರೀಕ್ಷೆ ಮಾಡಲಾಗುತ್ತಿದೆ. ಅಂತೆಯೇ ದಕ್ಷಿಣ ಕೊರಿಯಾ, ನ್ಯೂಜಿಲೆಂಡ್‌ ದೇಶಗಳು ಈಗಾಗಲೇ ಪರೀಕ್ಷೆ ಹೆಚ್ಚು ನಡೆಸಿ ಸೋಂಕು ನಿಯಂತ್ರಣಕ್ಕೆ ತಂದಿವೆ. ಇನ್ನು ದೆಹಲಿಯಲ್ಲಿ ಪ್ರತಿ ಹತ್ತು ಲಕ್ಷ ಜನರಿಗೆ 70,871 ಜನರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಪ್ರತಿ ಹತ್ತು ಲಕ್ಷ ಜನರಲ್ಲಿ 34,659 ಜನರ ಪರೀಕ್ಷೆ ನಡೆಯುತ್ತಿದ್ದು, ಇದನ್ನು ಕ್ರಮೇಣ ಒಂದು ಲಕ್ಷಕ್ಕೆ ಹೆಚ್ಚಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಅಲ್ಲದೆ, ಸೋಂಕಿನಿಂದ ಹೆಚ್ಚು ಅಪಾಯಕ್ಕೆ ಒಳಗಾಗುವ ಮೂರು ವರ್ಗವನ್ನು ಗುರುತಿಸಲಾಗಿದ್ದು, ಇವರಿಗೆ ಮೊದಲ ಆದ್ಯತೆ ನೀಡಿ ಪರೀಕ್ಷೆ ನಡೆಸಬೇಕು. ಜತೆಗೆ ಜನರು ಸೋಂಕು ಪರೀಕ್ಷೆ ಕುರಿತು ಹೊಂದಿರುವ ತಪ್ಪು ಕಲ್ಪನೆಗಳನ್ನು ದೂರಾಗಿಸಲು ಜಾಗೃತಿ ಕಾರ್ಯಕ್ರಮಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

ಲಾಕ್‌ಡೌನ್‌ನಿಂದ ಸಂಕಷ್ಟ: ಮನೆ ಮಾಲೀಕಳನ್ನೇ ಹತ್ಯೆಗೈದು ದರೋಡೆ ಮಾಡಿದ್ದ ದಂಪತಿ!...

ಸೋಂಕು ಪರೀಕ್ಷೆಗಳು ಹೆಚ್ಚಳವಾಗಿ, ಸೋಂಕಿತರನ್ನು ಶೀಘ್ರದಲ್ಲಿ ಪತ್ತೆ ಮಾಡಿದರೆ ಮಾತ್ರ ಸೋಂಕು ಹರಡುವಿಕೆಯನ್ನು ನಿಯಂತ್ರಿಸಬಹುದು.

ಮೂರು ವರ್ಗದವರಿಗೆ ಆದ್ಯತೆ:

ಮೊದಲ ಆದ್ಯತೆ ತೀವ್ರ ಉಸಿರಾಟ ಸಮಸ್ಯೆ ಹೊಂದಿರುವ (ಸಾರಿ) ರೋಗಿಗಳು, ವಿಷಮಶೀತ ಜ್ವರ (ಐಎಲ್‌ಐ) ಸೋಂಕಿನ ಲಕ್ಷಣ ಹೊಂದಿರುವವರು ಮತ್ತು ಅವರ ಸಂಪರ್ಕಿತರು. ಎರಡನೇ ಆದ್ಯತೆಯಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರು, ಕೊರೊನಾ ಹೆಚ್ಚಿರುವ ಪ್ರದೇಶಗಳ ಪ್ರಯಾಣ ಮತ್ತು ಕಂಟೈನ್ಮೆಂಟ್‌ ಝೋನ್‌ ನಿವಾಸಿಗಳು. ಮೂರನೇ ಆದ್ಯತೆಯಲ್ಲಿ ಗರ್ಭಿಣಿಯರು, ಆಸ್ಪತ್ರೆಗಳ ಓಪಿಡಿಗೆ ಆಗಮಿಸುವವರು, ತರಕಾರಿ ಮಾರುಕಟ್ಟೆವ್ಯಾಪಾರಿಗಳು, ಬಸ್‌ ನಿರ್ವಾಹಕರು, ಆಟೋ ಚಾಲಕರು, ಚಿಲ್ಲರೆ ಅಂಗಡಿ, ಬಸ್‌, ರೈಲ್ವೆ ನಿಲ್ದಾಣದ ವ್ಯಾಪಾರಿಗಳು, ಪೌರ ಕಾರ್ಮಿಕರಿಗೆ ಹೆಚ್ಚಿನ ಪರೀಕ್ಷೆ ನಡೆಸಬೇಕು ಎಂದು ಸಮಿತಿ ಸಲಹೆ ನೀಡಿದೆ.