ಸಿದ್ಧಗಂಗಾ ಶ್ರೀಗಳ ಆರೋಗ್ಯ ಮತ್ತೆ ಗಂಭೀರ: ತುಮಕೂರಿಗೆ ತೆರಳುವ ಮಾರ್ಗಗಳು ಬದಲು!
ಸಿದ್ದಗಂಗಾ ಶ್ರೀಗಳ ಆರೋಗ್ಯ ದಿನೆ ದಿನೇ ಸುಧಾರಿಸುತ್ತಿತ್ತು ಎನ್ನಲಾಗಿತ್ತು, ಆದರೆ ಇಂದು ದಿಢೀರ್ ಸ್ವಾಮೀಜಿಯವರ ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನಲಾಗುತ್ತಿದೆ.
ತುಮಕೂರು[ಜ.21]: ನಡೆದಾಡುವ ದೇವರು ಸಿದ್ಧದಗಂಗಾ ಶ್ರೀಗಳ ಆರೋಗ್ಯ ಕಳೆದೆರಡು ದಿನಗಳಿಂದ ಸುಧಾರಿಸುತ್ತಿದ್ದು, ಚೇತರಿಕೆಯಾಗುತ್ತಿದ್ದಾರೆನ್ನಲಾಗಿತ್ತು. ಆದರೆ ಇಂದು ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ.
ಶ್ರೀಗಳ ಉಸಿರಾಟದಲ್ಲಿ ಮತ್ತೆ ಏರುಪೇರಾಗಿದ್ದು, ಹಳೇ ಮಠದಲ್ಲಿಯೇ ಎಲ್ಲಾ ವ್ಯವಸ್ಥೆಗಳೊಂದಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಭಾನುವಾರ ವೆಂಟಿಲೇಟರ್ ಇಲ್ಲದೇ ಶ್ರೀಗಳು 2 ಗಂಟೆಗಳ ಕಾಲ ಸ್ವತಃ ಉಸಿರಾಡಿದ್ದರು. ಶ್ರೀಗಳಿಗೆ ಅಗಾಗ ವೆಂಟಿಲೇಟರ್ ಬಳಕೆ ಮಾಡಲಾಗುತ್ತಿದೆ ಎಂದು ಶ್ರೀಗಳ ಆಪ್ತ ವೈದ್ಯ ಡಾ. ಪರಮೇಶ್ ಹೇಳಿದ್ದಾರೆ.
ಈ ಹಿಂದೆ ಸಿದ್ಧಗಂಗಾ ಮಠದ ಸುತ್ತಮುತ್ತ ಒದಗಿಸಲಾದ ಪೊಲೀಸ್ ಭಿಗಿಭದ್ರೆಯನ್ನು ಇದ್ದಕ್ಕಿದ್ದಂತೆ ಹೆಚ್ಚಿಸಲಾಗಿದ್ದು, ಭಾರಿ ಸಂಖ್ಯೆಯಲ್ಲಿ ಬ್ಯಾರಿಕೇಡ್ ಗಳನ್ನೂ ಅಳವಡಿಸಲಾಗಿದೆ. ತುಮಕೂರು ನಗರದಾದ್ಯಂತ 20 ಸಾವಿರ ಪೊಲೀಸರ ನಿಯೋಜಿಸಿದ್ದಲ್ಲದೇ, ಬೇರೆ ಜಿಲ್ಲೆಗಳಿಂದ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಸಿದ್ದಗಂಗಾ ಮಠಕ್ಕೆ ಎಸ್ ಪಿ ಕಾರ್ತಿಕ್ ರೆಡ್ಡಿ ನೇತೃತ್ವದಲ್ಲಿ 10 ಪಿಎಸ್‌ಐ, 150 ಸಿವಿಲ್ ಪೇದೆಗಳು, 4 ಡಿಆರ್ ತುಕಡಿಯನ್ನು ಬಂದೊಬಸ್ತ್‌ಗಾಗಿ ನಿಯೋಜಿಸಲಾಗಿದೆ.
ತುಮಕೂರು, ಬೆಂಗಳೂರು ಗ್ರಾಮಾಂತರ, ದೊಡ್ಡ ಬಳ್ಳಾಪುರ, ರಾಮನಗರ, ಚಿತ್ರದುರ್ಗ ಜಿಲ್ಲೆಗಳ ಮಾರ್ಗಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಇದು ಭಕ್ತರಲ್ಲಿ ಆತಂಕ ಮೂಡುವಂತೆ ಮಾಡಿದೆ.
ಮಾರ್ಗ ಬದಲಾವಣೆ:
ಇದಲ್ಲದೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಬದಲು ಮಾಡಿದ್ದು, ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಬೆಂಗಳೂರು, ದಾವಣಗೆರೆ, ಚಿತ್ರದುರ್ಗದಿಂದ ಬರುವ ವಾಹನ ಮಾರ್ಗ ಬದಲಾಯಿಸಲಾಗಿದ್ದು, ಶಿರಾ, ಮಧುಗಿರಿ, ಕೊರಟಗೆರೆ, ದಾಬಸ್ಪೇಟೆ ಮಾರ್ಗದಲ್ಲಿ ಸಂಚಾರ ಕಲ್ಪಿಸಲಾಗಿದೆ.