ಹಿಂದುತ್ವ ಸಿದ್ಧಾಂತಕ್ಕೆ ಕೈಜೋಡಿಸಲು ಚರ್ಚೆ; ಬಿವೈ ವಿಜಯೇಂದ್ರ ಜತೆ ಎಚ್‌ಡಿಕೆ ದತ್ತಮಾಲೆ ಧಾರಣೆ?
ಬಿಜೆಪಿ ಜತೆ ಮೈತ್ರಿ ನಿರ್ಧಾರ ಕೈಗೊಂಡಿರುವ ಜೆಡಿಎಸ್ ಪಕ್ಷವು ಇದೀಗ ಹಿಂದುತ್ವವನ್ನು ಅಪ್ಪಿಕೊಳ್ಳುವ ಮೂಲಕ ತನ್ನ ಇಮೇಜ್ ಬದಲಾಯಿಸಿಕೊಳ್ಳಲು ಮುಂದಾಗಿದೆ. ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಅಧಿವೇಶನ ಮುಗಿದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ಸೇರಿ ದತ್ತಮಾಲೆ ಧಾರಣೆ ಮಾಡುವ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು (ನ.21) : ಬಿಜೆಪಿ ಜತೆ ಮೈತ್ರಿ ನಿರ್ಧಾರ ಕೈಗೊಂಡಿರುವ ಜೆಡಿಎಸ್ ಪಕ್ಷವು ಇದೀಗ ಹಿಂದುತ್ವವನ್ನು ಅಪ್ಪಿಕೊಳ್ಳುವ ಮೂಲಕ ತನ್ನ ಇಮೇಜ್ ಬದಲಾಯಿಸಿಕೊಳ್ಳಲು ಮುಂದಾಗಿದೆ.
ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಅಧಿವೇಶನ ಮುಗಿದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ಸೇರಿ ದತ್ತಮಾಲೆ ಧಾರಣೆ ಮಾಡುವ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸಮಯ ಬಂದ್ರೆ ದತ್ತಮಾಲೆ ಹಾಕುತ್ತೇನೆ; ಎಚ್‌ಡಿಕೆ ಹೇಳಿಕೆಗೆ ಬಜರಂಗದಳ ವಿಶ್ವಹಿಂದು ಪರಿಷತ್ ಸ್ವಾಗತ!
ಈ ಬಗ್ಗೆ ಉಭಯ ಪಕ್ಷಗಳ ನಾಯಕರ ನಡುವೆ ಅನೌಪಚಾರಿಕ ಮಾತುಕತೆ ನಡೆದಿದ್ದು, ಬೆಳಗಾವಿ ಅಧಿವೇಶನ ವೇಳೆ ಸ್ಪಷ್ಟ ಚಿತ್ರಣ ಹೊರಬೀಳುವ ನಿರೀಕ್ಷೆಯಿದೆ.
ಚಿಕ್ಕಮಗಳೂರಿನ ದತ್ತಮಾಲೆ ಅಭಿಯಾನ ರಾಜ್ಯದಲ್ಲಿ ಬಿಜೆಪಿಗೆ ಸಾಕಷ್ಟು ಮೈಲೇಜ್ ತಂದುಕೊಟ್ಟಿದ್ದು ಜಗಜ್ಜಾಹೀರಾಗಿರುವ ಸಂಗತಿ. ಇದೀಗ ಜೆಡಿಎಸ್ ನಾಯಕರು ಕೂಡ ಬಿಜೆಪಿಯ ಹಿಂದುತ್ವದ ಸಿದ್ಧಾಂತಗಳೊಂದಿಗೆ ಕೈಜೋಡಿಸಿ ಹೆಜ್ಜೆ ಹಾಕುವ ಬಗ್ಗೆ ಚರ್ಚೆ ಆರಂಭಿಸಿದ್ದಾರೆ.
ಭಾನುವಾರ ಚಿಕ್ಕಮಗಳೂರಿನಲ್ಲಿ ದತ್ತಮಾಲೆ ಪರವಾಗಿ ಮಾತನಾಡಿದ್ದ ಕುಮಾರಸ್ವಾಮಿ ಅವರು ಸೋಮವಾರ ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ಅದನ್ನೇ ಪುನರುಚ್ಚರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಮತ ಗಳಿಸಬೇಕು ಎಂಬ ಉದ್ದೇಶದಿಂದ ರಾಜ್ಯದಲ್ಲಿ ಜಾತಿ ಜಾತಿ ನಡುವೆ ಒಂದು ರೀತಿಯ ಬಿರುಕು ಮೂಡಿಸುವ ಪ್ರಯತ್ನ ಆರಂಭವಾಗಿದೆ. ಮೂರು ದಿನಗಳ ಹಿಂದೆ ರಾಜ್ಯದ ಸಚಿವರೊಬ್ಬರು (ಜಮೀರ್ ಅಹಮದ್) ತೆಲಂಗಾಣ ರಾಜ್ಯ ವಿಧಾನಸಭೆಯ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ವೇಳೆ ಮುಸ್ಲಿಂ ಸಮುದಾಯದ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಬಿಜೆಪಿಯವರೂ ಸೇರಿ ಎಲ್ಲರೂ ಕೈಮುಗಿಯುತ್ತಾರೆ ಎಂದಿದ್ದರು. ಖಾದರ್ ಅವರು ಮುಸ್ಲಿಂ ಸಮುದಾಯದವರು ಎಂಬ ಕಾರಣಕ್ಕೆ ಕೈಮುಗಿಯುವುದಿಲ್ಲ. ಅವರು ಸ್ಪೀಕರ್ ಎಂಬ ಕಾರಣಕ್ಕೆ ಗೌರವ ಸಲ್ಲಿಸುತ್ತೇವೆ. ಸರ್ಕಾರದಲ್ಲಿ ಮಂತ್ರಿಗಳಾಗಿರುವ ಇಂಥ ವ್ಯಕ್ತಿಗಳನ್ನು ಕಟ್ಟಿಕೊಂಡು ಸಮಾಜ ಒಗ್ಗೂಡಿಸಲು ಸಾಧ್ಯವೇ? ಮುಖ್ಯಮಂತ್ರಿಗಳು ಇಂಥ ಮಂತ್ರಿಗಳನ್ನು ಇಟ್ಟುಕೊಂಡು ನಾಡು ಕಟ್ಟುತ್ತಾರಾ? ಇಷ್ಟು ಹೊತ್ತಿಗೆ ಮಂತ್ರಿಯ ಮಾತಿಗೆ ಕ್ಷಮೆ ಕೇಳಬೇಕಾಗಿತ್ತು. ಆದರೆ, ಆ ಬಗ್ಗೆ ನಿರ್ದೇಶನ ನೀಡಲಿಲ್ಲ ಎಂದು ಹರಿಹಾಯ್ದರು.
ನನ್ನನ್ನು ಸುಮ್ನೆ ಕೆಣಕಬೇಡಿ : ಸಿಎಂ ಸಿದ್ದುಗೆ ಎಚ್‌ಡಿಕೆ ವಾರ್ನಿಂಗ್!
ಅವರಿಗೆ ಅಂಥ ದುರಭಿಮಾನ ಇದ್ದಾಗ ನಮಗೆ ಅಭಿಮಾನ ಇರಬಾರದೆ? ನಾವು ಹಿಂದೂ ಸಂಸ್ಕೃತಿಯಲ್ಲಿ ಹುಟ್ಟಿದ್ದೇವೆ. ನಾವು ನಮ್ಮ ಧರ್ಮ ಕಾಪಾಡಬೇಕಲ್ಲವೇ? ನಮ್ಮ ಧರ್ಮ ಹಾಳು ಮಾಡಿಕೊಂಡು ಅವರ ಧರ್ಮ ಎತ್ತಿಹಿಡಿಯುವುದಕ್ಕೆ ಆಗುತ್ತದೆಯೇ? ಅಂಥ ಅನಿವಾರ್ಯತೆ ಬಂದರೆ ದತ್ತಮಾಲೆ ಹಾಕುತ್ತೇನೆ. ಹಿಂದೆ ಮುಂದೆ ನೋಡುವುದಿಲ್ಲ. ಸಂಕೋಚ ಏನಿದೆ? ನಾನು ಕಾನೂನು ಬಾಹಿರ ತೀರ್ಮಾನ ಮಾಡುವುದಿಲ್ಲ. ಕಾನೂನು ವ್ಯಾಪ್ತಿಯಲ್ಲಿ ನಮ್ಮ ಧರ್ಮ ರಕ್ಷಣೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.