ಬೆಂಗಳೂರು (ಅ.20):  ಬೊಂಬೆ ತಯಾರಕರಿಗೆ  ಬಿಐಎಸ್ (ಭಾರತೀಯ ಮಾನಕ ಬ್ಯೂರೋ) ಸಂಸ್ಥೆ ನೀಡುವ ಐಎಸ್‌ಐ ಮಾರ್ಕ್ ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರ ಸಾಂಪ್ರದಾಯಿಕ ಕಲೆ ಅವಲಂಬಿಸಿರುವ ಬೊಂಬೆ ತಯಾರಕರ ಮೇಲೆ ಗದಾಪ್ರಹಾರ ಮಾಡಿದ್ದು, ಈ ನಿರ್ಧಾರವನ್ನು ತಕ್ಷಣ ವಾಪಸ್‌ ಪಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. 

ಬಿಐಎಸ್‌ ಪ್ರಮಾಣಪತ್ರ ಪಡೆಯಲು ಸಾವಿರಾರು ರೂ. ವೆಚ್ಚ ಸಣ್ಣ ಬೊಂಬೆಗಳ ತಯಾರಕರಿಗೆ ದುಬಾರಿ ಆಗಲಿದ್ದು, ದೇಶೀಯ ಬೊಂಬೆ ಉತ್ಪಾದಕರ ಭವಿಷ್ಯಕ್ಕೆ ಮಾರಕವಾಗಲಿದೆ. ಕೇಂದ್ರದ ಈ ನಿರ್ಧಾರ ಗುಡಿ ಕೈಗಾರಿಕೆಗಳಿಗೆ ಮುಳ್ಳಾಗಲಿದೆ ಎಂದು ಟೀಕಿಸಿದ್ದಾರೆ.

ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಘಟಾನುಘಟಿ ನಾಯಕರು ಕಾಂಗ್ರೆಸ್ ಸೇರ್ಪಡೆ...

‘ಮನ್‌ ಕಿ ಬಾತ್‌’ನಲ್ಲಿ ಚನ್ನಪಟ್ಟಣದ ವಿಶ್ವವಿಖ್ಯಾತ ಆಟಿಕೆಗಳ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದ ಪ್ರಧಾನಿ ಮೋದಿ ಅವರು ಸಾಂಪ್ರದಾಯಕ ಬೊಂಬೆ ತಯಾರಕರ ಮೇಲೆ ಕೆಂಗಣ್ಣು ಬೀರಿದ್ದಾರೆ. ಬೊಂಬೆ ತಯಾರಕರಿಗೆ ಬಿಐಎಸ್‌ ಮುದ್ರೆ ಕಡ್ಡಾಯಗೊಳಿಸುವ ಕೇಂದ್ರದ ನಿರ್ಧಾರವನ್ನು ವಾಪಸು ಪಡೆಯುವ ಮೂಲಕ ಗುಡಿ ಕೈಗಾರಿಕೆಗಳ ರಕ್ಷಣೆಗೆ ಮುಂದಾಗಬೇಕು ಎಂದು ಅವರು ಟ್ವೀಟ್‌ ಮೂಲಕ ಒತ್ತಾಯಿಸಿದ್ದಾರೆ.