ಬೆಂಗಳೂರು :  ಬಡ ಕ್ಯಾನ್ಸರ್‌ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಕಿದ್ವಾಯಿ ಕ್ಯಾನ್ಸರ್‌ ಸಂಸ್ಥೆಯಲ್ಲಿ ಸ್ಥಾಪನೆಯಾಗುತ್ತಿರುವ ದೇಶದ ಅತ್ಯಂತ ಬೃಹತ್‌ ‘ಅಸ್ಥಿಮಜ್ಜೆ ಕಸಿ ಚಿಕಿತ್ಸಾ ಘಟಕ’ದ ಕಟ್ಟಡ ನಿರ್ಮಾಣಕ್ಕೆ ಶುಕ್ರವಾರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಶಂಕು ಸ್ಥಾಪನೆ ನೆರವೇರಿಸಿದರು.

ಘಟಕ ಸ್ಥಾಪನೆ ಪೂರ್ಣಗೊಂಡ ಬಳಿಕ ಖಾಸಗಿ ಆಸ್ಪತ್ರೆಗಳಲ್ಲಿ .35 ಲಕ್ಷದವರೆಗೆ ವೆಚ್ಚವಾಗುವ ದುಬಾರಿ ಅಸ್ಥಿಮಜ್ಜೆ ಕಸಿ ಚಿಕಿತ್ಸೆಯು ಕಿದ್ವಾಯಿಯಲ್ಲಿ ಬಿಪಿಎಲ್‌ ಕಾರ್ಡುದಾರರಿಗೆ ಉಚಿತವಾಗಿ ಹಾಗೂ ಇತರ ನಾಗರಿಕರಿಗೆ ಖಾಸಗಿ ಆಸ್ಪತ್ರೆಗಳ ದರದ ಶೇಕಡ  50ರಷ್ಟು ಕಡಿಮೆ ದರದಲ್ಲಿ ದೊರೆಯಲಿದೆ.

ಕಿದ್ವಾಯಿ ಆಸ್ಪತ್ರೆಯ ಜಿಂದಾಲ್‌ ಕೇಂದ್ರದ ನಾಲ್ಕನೇ ಅಂತಸ್ತಿನ ಸುಮಾರು 15 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಬೋನ್‌ ಮ್ಯಾರೋ ಟ್ರಾನ್ಸ್‌ಪ್ಲೆಂಟೇಷನ್‌ ಘಟಕ ನಿರ್ಮಾಣವಾಗುತ್ತಿದ್ದು, ಇದಕ್ಕಾಗಿ 12 ಕೋಟಿ ವೆಚ್ಚ ಮಾಡಲಾಗುತ್ತಿದೆ. ಘಟಕದಲ್ಲಿ ಮೂರು ಕೋಟಿ ರು. ಮೌಲ್ಯದ ಯಂತ್ರೋಪಕರಣ ಅಳವಡಿಕೆ ಮಾಡಲಾಗುತ್ತದೆ. ಅಸ್ಥಿಮಜ್ಜೆ ಕಸಿ ಘಟಕದ ಕಟ್ಟಡದಲ್ಲಿ 20 ಪ್ರತ್ಯೇಕ ಹಾಗೂ ಸುಸಜ್ಜಿತ ಕೊಠಡಿ, ಮೂರು ಕಿರು ಶಸ್ತ್ರಚಿಕಿತ್ಸಾ ಘಟಕ, ವೈದ್ಯರ ವಿಶ್ರಾಂತಿ ಕೊಠಡಿ ಹೊಂದಿರುತ್ತದೆ. ಸಂಪೂರ್ಣ ಸೋಂಕು ರಹಿತವಾದ ಈ ಕೊಠಡಿಗಳಲ್ಲೇ ರೋಗಿಗೆ ಅಸ್ಥಿಮಜ್ಜೆ ಕಸಿ ಚಿಕಿತ್ಸೆ ನಡೆಸಲಾಗುತ್ತದೆ.

ಸರ್ಕಾರಿ ಆಸ್ಪತ್ರೆಗಳು ಮೇಲ್ದರ್ಜೆಗೆ:  ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು, ಮುಂದಿನ ಬಜೆಟ್‌ನಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಿನ ಅನುದಾನ ನೀಡಿ ಮೇಲ್ದರ್ಜೆಗೇರಿಸಲಾಗುವುದು. ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿರುವವರಿಗೆ ಖಾಸಗಿಯಲ್ಲಿ ದುಬಾರಿ ಹಣ ನೀಡಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಮಕ್ಕಳ ಚಿಕಿತ್ಸೆಗಾಗಿ ನೆರವು ಕೋರಿ ಬಹಳಷ್ಟುಮಂದಿ ತಮ್ಮ ಬಳಿ ಬರುತ್ತಾರೆ. ಇದೆಲ್ಲವನ್ನು ಗಮನಿಸಿ ಬಡ ಜನರಿಗೆ ಉಚಿತವಾಗಿ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಇ.ತುಕಾರಾಂ, ಬಿಬಿಎಂಪಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌, ಶ್ರೀ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌, ಕಿದ್ವಾಯಿ ಸಂಸ್ಥೆ ನಿರ್ದೇಶಕ ಡಾ.ಸಿ.ರಾಮಚಂದ್ರ, ಡಾ.ಕೆ.ಬಿ.ಲಿಂಗೇಗೌಡ ಮೊದಲಾದವರು ಉಪಸ್ಥಿತರಿದ್ದರು.

ಸಿದ್ಧಗಂಗಾ ಶ್ರೀಗಳು ಇಚ್ಛಾ ಮರಣಿ : ಎಚ್‌ಡಿಕೆ

ಸಿದ್ಧಗಂಗಾ ಮಠದ ಶಿವಕುಮಾರಸ್ವಾಮಿಜಿ ಅವರನ್ನು ನುರಿತ ತಜ್ಞರ ತಂಡ ಪರೀಕ್ಷೆ ನಡೆಸಿದೆ. ದೇವರ ಕೃಪೆಯಿಂದ ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಸ್ಥಳೀಯ ವೈದ್ಯರೇ ಚಿಕಿತ್ಸೆ ನೀಡುತ್ತಿದ್ದಾರೆ. ಶಿವಭಕ್ತರಾದ ಶ್ರೀಗಳಿಗೆ ಇಚ್ಚಾಮರಣ ಹೊಂದುವ ಶಕ್ತಿ ಇದೆ. ಅವರು ಪವಾಡ ಪುರುಷರು. ಅವರ ಆರೋಗ್ಯ ಚೇತರಿಕೆಗಾಗಿ ಭಗವಂತನಲ್ಲಿ ಬೇಡಿಕೊಳ್ಳುವೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.