ಯಾದಗಿರಿ ಎಸ್‌ಐ ವಿರುದ್ಧ ಸಿಎಂಗೆ ದೇವೇಗೌಡ ಪತ್ರ!
ಯಾದಗಿರಿ ಎಸ್‌ಐ ವಿರುದ್ಧ ಸಿಎಂಗೆ ದೇವೇಗೌಡ ಪತ್ರ| ಜೆಡಿಎಸ್ ಕಾರ‍್ಯಕರ್ತನ ಮೇಲೆ ದೌರ್ಜನ್ಯವೆಸಗಿದ್ದಾರೆ| ಕಾರಣ ಸಸ್ಪೆಂಡ್ ಮಾಡಿ: ಮಾಜಿ ಪ್ರಧಾನಿ ಒತ್ತಾಯ
ಬೆಂಗಳೂರು[ಅ.26]: ಪಕ್ಷದ ಯುವ ನಾಯಕರೊಬ್ಬರ ಮೇಲೆ ಯಾದಗಿರಿ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ವಿನಾಕಾರಣ ದೌರ್ಜನ್ಯ ಎಸಗಿದ್ದು, ಅವರನ್ನು ಅಮಾನತುಗೊಳಿಸಬೇಕು ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಒತ್ತಾಯಿಸಿದ್ದಾರೆ. ಈ ಸಂಬಂಧ ಶುಕ್ರವಾರ ದೇವೇಗೌಡರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರವನ್ನೂ ಬರೆದಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ಪ್ರಧಾನಿ, ಕಾನೂನಿಗೆ ಗೌರವ ಮತ್ತು ಅಮಾಯಕ ವ್ಯಕ್ತಿಗಳಿಗೆ ಸಹಜ ನ್ಯಾಯ ಸಿಗುವ ನಿರ್ಧಾರ ಕೈಗೊಳ್ಳಬೇಕು ಎಂಬ ಮನವಿ ಮಾಡುತ್ತಾ ನೋವಿನಿಂದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.
ಅಧಿಕಾರ ಇರಬಹುದು, ಇಲ್ಲದಿರಬಹುದು. ಆದರೆ, ರಾಜಕೀಯ ದುರುದ್ದೇಶದ ಕಾರಣಗಳಿಗಾಗಿ ಯಾವುದೇ ಪಕ್ಷದ ಕಾರ್ಯಕರ್ತರನ್ನು ಪೊಲೀಸರ ಮೂಲಕ ಹಿಂಸಿಸುವುದು ಅಮಾನುಷ ಮತ್ತು ಅಮಾನವೀಯವಾಗಿದೆ. ಮುಂದಿನ ದಿನದಲ್ಲಿ ಮತ್ತೊಂದು ಪಕ್ಷ ಅಧಿಕಾರಕ್ಕೆ ಬಂದಾಗ ಮತ್ತೊಬ್ಬ ಕಾರ್ಯಕರ್ತರಿಗೆ ಇಂತಹ ಪ್ರಸಂಗ ಎದುರಾಗಬಾರದು. ಅಂತಹ ದೊಡ್ಡ ನಡವಳಿಕೆಯನ್ನು ನಾವೆಲ್ಲರೂ ತೋರಬೇಕಾಗಿದೆ.
ಮುಖ್ಯಮಂತ್ರಿಗಳು ಯಾದಗಿರಿಗೆ ಭೇಟಿ ನೀಡಿದ ವೇಳೆ ಕೆಲವು ಯುವಕರು ಕಾರನ್ನು ಅಡ್ಡಗಟ್ಟಲು ಪ್ರಯತ್ನಿಸಿದ ಘಟನೆ ನಡೆದಿದೆ. ಸಾಮಾನ್ಯವಾಗಿ ಸಾರ್ವಜನಿಕ ಬದುಕಿನಲ್ಲಿರುವ ನನಗೂ ಅಧಿಕಾರದಲ್ಲಿದ್ದಾಗ ಇಂತಹ ಅನೇಕ ಅನುಭವಗಳಾಗಿವೆ. ಅಧಿಕಾರದಲ್ಲಿರುವವರಿಗೆ ಇಂತಹ ಘಟನೆಗಳು ಸರ್ವೇಸಾಮಾನ್ಯವಾಗಿ ನಡೆಯುತ್ತವೆ. ಆದರೆ, ಈ ಪ್ರಕರಣವನ್ನು ರಾಜಕೀಯ ಕಾರಣಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ ಎಂದು ಕಿಡಿಕಾರಿದರು.
50 ಸಾರ್ವಜನಿಕ ಜೀವನದಲ್ಲಿ ಇಂಥ ಕ್ರೌರ್ಯ ಕಂಡಿರಲಿಲ್ಲ
ಜೆಡಿಎಸ್‌ನ ಗುರುಮಿಟ್ಕಲ್ ವಿಧಾನಸಭಾ ಕ್ಷೇತ್ರದ ಯುವನಾಯಕ ಮಾರ್ಕಂಡಪ್ಪ ಮಾನೆಗಾರ್‌ನನ್ನು ಸಬ್ ಇನ್ಸ್‌ಪೆಕ್ಟರ್ ಬಾಪುಗೌಡ ಅವರು ಇಬ್ಬರು ಪೊಲೀಸ್ ಕಾನ್ಸ್‌ಟೇಬಲ್ ಜತೆ ಮನೆಗೆ ಹೋಗಿ ಹಿಡಿದು ಪೊಲೀಸ್ ಜೀಪಿನಲ್ಲಿ ಹಾಕಿಕೊಂಡು ಯಾದಗಿರಿಗೆ ಬರುವವರೆಗೂ ಹೊಡೆದಿದ್ದಾರೆ. ಅಲ್ಲದೇ, ಸಿಸಿ ಕ್ಯಾಮೆರಾ ಇಲ್ಲದ ಕೋಣೆಯಲ್ಲಿ ಕೂಡಿ ಹಾಕಿಕೊಂಡು ದೈಹಿಕವಾಗಿ ಹಿಂಸಿಸಿದ್ದಾರೆ. ಮುಖ್ಯಮಂತ್ರಿಗಳು ಯಾದಗಿರಿಗೆ ಬಂದಾಗ ಪ್ರತಿಭಟನೆ ಮಾಡುವಂತೆ ಹೇಳಿದ್ದು ಪಕ್ಷದ ಶಾಸಕರ ಪುತ್ರ ಶರಣಗೌಡ ಕಂದಕೂರು ಎಂಬುದಾಗಿ ಲಿಖಿತವಾಗಿ ಹೇಳಿಕೆ ನೀಡುವಂತೆ ಬೆದರಿಕೆ ಹಾಕಿದ್ದಾರೆ.
ಪೊಲೀಸ್ ಒತ್ತಾಯಕ್ಕೆ ಮಣಿಯದಿದ್ದಾಗ ಪಿಸ್ತೂಲನ್ನು ಬಾಯಿಗಿಟ್ಟು ಎನ್‌ಕೌಂಟರ್ ಮಾಡುವುದಾಗಿ ಹೆದರಿಸಲಾಗಿದೆ. ನನ್ನ 50 ವರ್ಷದ ಸಾರ್ವಜನಿಕ ಬದುಕಿನಲ್ಲಿ ಇಂತಹ ದಬ್ಬಾಳಿಕೆಯನ್ನು ಕಂಡಿಲ್ಲ. ಇಂತಹ ಕ್ರೌರ್ಯ ಕಂಡಿದ್ದು ಇದೇ ಮೊದಲು. ಹೀಗಾಗಿ ಪಕ್ಷದ ನಾಯಕನ ಮೇಲೆ ವಿನಾಕಾರಣ ದೌರ್ಜನ್ಯ ಎಸಗಿರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ರನ್ನು ಅಮಾನತುಗೊಳಿಸಬೇಕು ಎಂದು ದೇವೇಗೌಡರು ಆಗ್ರಹಿಸಿದರು.