ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ 6.9 ಅಡಿ ಎತ್ತರದ ಪ್ರತಿಮೆ ಅನಾವರಣ ನಡೆಯುತ್ತಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಗಡಿ ಗ್ರಾಮ ಸಾಮಾಂದಿಪುರ ಗ್ರಾಮದ ಮುಂಭಾಗ ಶಿಂಷಾನದಿ ಪಕ್ಕದಲ್ಲಿ ಪ್ರತಿಮೆ ಸ್ಥಾಪಿಸಲಾಗಿದೆ.
ಚನ್ನಪಟ್ಟಣ : ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ಏಕೈಕ ಕನ್ನಡಿಗ ಎಂಬ ಹಿರಿಮೆಗೆ ಪಾತ್ರವಾಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ 6.9 ಅಡಿ ಎತ್ತರದ ಪ್ರತಿಮೆ ಅನಾವರಣಕ್ಕೆ ಕ್ಷಣಗಣನೆ ಆರಂಭಗೊಂಡಿದೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಗಡಿ ಗ್ರಾಮ ಸಾಮಾಂದಿಪುರ ಗ್ರಾಮದ ಮುಂಭಾಗ ಶಿಂಷಾನದಿ ಪಕ್ಕದಲ್ಲಿ ಪ್ರತಿಮೆ ಸ್ಥಾಪಿಸಲಾಗಿದ್ದು, ಶನಿವಾರ ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಪ್ರತಿಮೆಯನ್ನು ಅನಾವರಣ ಗೊಳಿಸಲಿದ್ದಾರೆ. ದೇವೇಗೌಡರ ಅಭಿಮಾನಿ ಬಳಗದ ವತಿಯಿಂದ .36 ಲಕ್ಷ ವೆಚ್ಚದಲ್ಲಿ ಪ್ರತಿಮೆ ಸ್ಥಾಪನೆ ಮಾಡಲಾಗಿದೆ. ಪ್ರತಿಮೆಯ ಸುತ್ತ ಕಿರು ಉದ್ಯಾನವನ, ಕಾಂಪೌಂಡ್ ನಿರ್ಮಿಸಲಾಗಿದೆ. ಸುಮಾರು 3 ಗುಂಟೆ ಭೂಮಿಯಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದ್ದು, ಇಲ್ಲಿ ಗ್ರಂಥಾಲಯ ಮತ್ತು ದೇವೇಗೌಡರಿಗೆ ಸಂಬಂಧಿಸಿದ ಫೋಟೋ ಗ್ಯಾಲರಿ ನಿರ್ಮಿಸುವ ಉದ್ದೇಶವಿದೆ.
ಪ್ರತಿಮೆಯನ್ನು ಬಿಡದಿಯ ಚಂದ್ರಿಕಾ ಲೋಹ ಶಿಲ್ಪಕಲಾ ಕೇಂದ್ರ ಮತ್ತು ಜಿ.ಎಸ್.ಕ್ರಿಯೇಷನ್ ಸಂಯುಕ್ತಾಶ್ರಯದಲ್ಲಿ ಲೋಹ ಶಿಲ್ಪಿ ಸುನಿಲ್‌ಕುಮಾರ್ ಸಿದ್ಧಪಡಿಸಿದ್ದಾರೆ.
ಇಗ್ಗಲೂರಿನ ದೇವೇಗೌಡ ಬ್ಯಾರೇಜ್‌ನ ಎಡದಂಡೆ ನಾಲೆಯಿಂದ ಅತಿ ಹೆಚ್ಚು ಉಪಯುಕ್ತ ಪಡೆಯುತ್ತಿರುವ ಸಾಮಾಂದಿಪುರ ಗ್ರಾಮವು ಬ್ಯಾರೇಜ್‌ಗೆ 2 ಕಿ.ಮೀ. ದೂರದಲ್ಲಿದೆ.
ನಮ್ಮ ಭಾಗದ ನೀರಾವರಿಗೆ ದೇವೇಗೌಡರು ಅಡಿಗಲ್ಲು ಹಾಕಿದ್ದಾರೆ. ಅವರ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಅಭಿಮಾನಿಗಳು ಒಗ್ಗೂಡಿ ಪ್ರತಿಮೆ ಸ್ಥಾಪಿಸುತ್ತಿದ್ದೇವೆ ಎನ್ನುತ್ತಾರೆ ಪ್ರತಿಮೆ ಸ್ಥಾಪನಾ ಸಮಿತಿ ಸಂಚಾಲಕ ಇ.ತಿ.ಶ್ರೀನಿವಾಸ್ ತಿಳಿಸಿದ್ದಾರೆ.
