ಹವ್ಯಕರು ಎಲ್ಲೇ ಇದ್ದರೂ ನಮ್ಮತನ ಉಳಿಸಿಕೊಳ್ಳಿ: ಕಾಗೇರಿ ಕಿವಿಮಾತು
- ಹವ್ಯಕರು ನಮ್ಮತನ ಕಾಪಿಟ್ಟುಕೊಳ್ಳಿ: ಕಾಗೇರಿ
- ಸಹ್ಯಾದ್ರಿ ಸ್ನೇಹ ಸಮ್ಮಿಲನ
- ಮನೆಯಲ್ಲಿ ಹವ್ಯಕ ಭಾಷೆಯಲ್ಲೇ ಮಾತನಾಡಿ
- ಮಕ್ಕಳಿಗೆ ಸಂಸ್ಕಾರ ಕಲಿಸಿ: ಸಭಾಧ್ಯಕ್ಷ
ಬೆಂಗಳೂರು (ಸೆ.19) : ಹವ್ಯಕರು ಎಲ್ಲೇ ನೆಲೆಸಿದ್ದರೂ ನಮ್ಮತನವನ್ನು ಮರೆಯದೆ ಕಾಪಿಟ್ಟುಕೊಳ್ಳಬೇಕು ಎಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಿವಿಮಾತು ಹೇಳಿದರು. ಮಲ್ಲೇಶ್ವರಂ ಹವ್ಯಕ ಭವನದಲ್ಲಿ ಸಹ್ಯಾದ್ರಿ ಬಳಗ ಏರ್ಪಡಿಸಿದ್ದ ‘ಬೆಂಗಳೂರಿನಲ್ಲಿ ನೆಲೆಸಿರುವ ಶಿರಸಿ-ಸಿದ್ದಾಪುರ ಸುತ್ತಮುತ್ತಲ ಭಾಗದ ಬಂಧುಗಳೊಂದಿಗೆ ‘ಸಹ್ಯಾದ್ರಿ ಸ್ನೇಹ ಸಮ್ಮಿಲನ’ ಕಾರ್ಯಕ್ರಮದಲ್ಲಿ ಅವರು ವಿಶೇಷ ಅಭ್ಯಾಗತರಾಗಿ ಮಾತನಾಡಿದರು.
ಹವ್ಯಕರು ಮನೆಯಲ್ಲಿ ಮಾತೃಭಾಷೆ ಮಾತನಾಡಿ. ಹಬ್ಬಗಳಲ್ಲಿ ಸಾಧ್ಯವಾದಷ್ಟುಊರಿನ ಸಂಪ್ರದಾಯ ಆಚರಿಸಿ. ಮಕ್ಕಳಿಗೆ ನಮ್ಮತನದ ಸಂಸ್ಕಾರ ನೀಡಿ ಬೆಳೆಸಿ. ಉಡುಗೆ ತೊಡುಗೆಯಲ್ಲಿ ಸಭ್ಯತೆ ಕಲಿಸಿ. ಎಲ್ಲಕ್ಕಿಂತ ಮುಖ್ಯವಾಗಿ ಭಾವನಾತ್ಮಕ ಸಂಬಂಧ ಬಲಪಡಿಸಬೇಕು. ಇಲ್ಲದಿದ್ದರೆ ಶಿರಸಿ ಸಿದ್ದಾಪುರದÜಲ್ಲಿ ಇನ್ನೊಂದು ವೃದ್ಧಾಶ್ರಮ, ಅನಾಥಾಶ್ರಮ ಕಟ್ಟಿಸಿ ಎಂಬ ಬೇಡಿಕೆ ಬರುವ ಅಪಾಯ ಹೆಚ್ಚು ಎಂದರು.
ಉಚಿತ ಕೊಡುಗೆ ಸೇರಿ ಸಾಕಷ್ಟುಆರ್ಥಿಕ ಸಮಸ್ಯೆಯ ಸವಾಲು ಇರುವಾಗ ಅಭಿವೃದ್ಧಿಯೊಂದೇ ಉತ್ತಮ ಜನಪ್ರತಿನಿಧಿ ಆಯ್ಕೆಗೆ ಅಳತೆಗೋಲು ಆಗಲಾರದು. ಮೂಲಸೌಕರ್ಯ ಒದಗಿಸುವುದು ಇಂದು ಎಲ್ಲ ಜನಪ್ರತಿನಿಧಿಗೆ ಸವಾಲಿನ ವಿಚಾರ. ಆದರೆ, ನಾವು ಅಭಿವೃದ್ಧಿ ವಿಚಾರದಲ್ಲಿ ರಾಜಿಯಾಗಲ್ಲ. ಜತೆಗೆ ಕ್ಷೇತ್ರದಲ್ಲಿ ಶಾಂತಿ ಸೌಹಾರ್ದತೆ ಮುಂದುವರಿಸಲು ಅಗತ್ಯ ಕ್ರಮ ವಹಿಸಿದ್ದೇವೆ ಎಂದರು.
ಸಹ್ಯಾದ್ರಿ ಸ್ನೇಹ ಬಳಗದ ಮುಖ್ಯಸ್ಥ ಶ್ರೀಕಾಂತ್ ಭಟ್ ಕೆಕ್ಕಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ಯಮಿ ಸೂರ್ಯನಾರಾಯಣ ಹೆಗಡೆ ದಂಪತಿಯನ್ನು ಸನ್ಮಾನಿಸಲಾಯಿತು. ಬಳಿಕ ಸಂವಾದ ಕಾರ್ಯಕ್ರಮ ನಡೆಯಿತು. ನಟ ನೀರ್ನಳ್ಳಿ ರಾಮಕೃಷ್ಣ ಮಾತನಾಡಿದರು.
ಉತ್ತರ ಕನ್ನಡವನ್ನು ಸಾಫ್ಟ್‌ವೇರ್ ಹಬ್ ಮಾಡಿ: ವಿಶ್ವೇಶ್ವರ ಭಟ್
ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, ಉತ್ತರ ಕನ್ನಡದಲ್ಲಿ ಕೈಗಾರಿಕೆ ನಿರ್ಮಾಣ ಅಸಾಧ್ಯ. ಪ್ರವಾಸೋದ್ಯಮವೂ ಪರಿಸರಕ್ಕೆ ಮಾರಕ. ಹೀಗಾಗಿ ಶಿರಸಿಯನ್ನು ಸಾಫ್‌್ಟವೇರ್ ಹಬ್ ಮಾಡಲು ಯೋಜಿಸಬೇಕು. ಸ್ಟಾರ್ಚ್‌ಅಪ್‌ಗೆ ಪೂರಕವಾಗಿ ಕೌಶಲ್ಯ ಕೇಂದ್ರ ಆರಂಭಕ್ಕೆ ಚಿಂತನೆ ಅಗತ್ಯ. ಮುಂದಿನ ಹತ್ತು ವರ್ಷದಲ್ಲಿ ಈ ಕಾರ್ಯವಾದರೆ ಜಿಲ್ಲೆಯ ಚಹರೆ ಬದಲಾಗಲಿದೆ. ಉದ್ಯೋಗಕ್ಕಾಗಿ ವಲಸೆ ಹೋಗುವ ಯುವಜನರನ್ನು ಜಿಲ್ಲೆಯಲ್ಲೆ ಹಿಡಿದಿಡಲು ಇಂಥ ಯೋಚನೆ ಅಗತ್ಯ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ವಾಣಿಜ್ಯ ತೆರಿಗೆ ಆಯುಕ್ತ ಎಸ್.ಎಂ.ಹೆಗಡೆ ಗೌರಿ ಬಣಗಿ, ಅನಿವಾರ್ಯ ಪರಿಸ್ಥಿತಿಯಲ್ಲಿ ನಾವು ಬೇರೆ ಊರಿಗೆ ಬಂದಿದ್ದೇವೆ. ಆದರೆ ತಿರುಗಿ ನಮ್ಮ ಬೇರಿನತ್ತ ನೋಡುವ ಅಗತ್ಯವಿದೆ ಎಂದು ಹೇಳಿದರು.
ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಬದ್ಧ:
ಜಿಲ್ಲೆಯ ಬೇಡಿಕೆಯಂತೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಬದ್ಧ. ಸರ್ಕಾರದ ಇತಿಮಿತಿಗಳನ್ನು ಮೀರಿ ಆಸ್ಪತ್ರೆ ನಿರ್ಮಿಸುವ ಪ್ರಯತ್ನ ಆಗಿದೆ. ಸದನದಲ್ಲೂ ಚರ್ಚೆಯಾಗಿದೆ. ಸಕಾಲದಲ್ಲಿ ಅದರ ಘೋಷಣೆಯನ್ನು ಆರೋಗ್ಯ ಸಚಿವರು ಮಾಡುವರು ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.