ಉಕ್ರೇನಿನಲ್ಲಿ ಮೃತಪಟ್ಟ ಕನ್ನಡಿಗ ನವೀನ್ ಮೃತದೇಹ ಪತ್ತೆ, ಸಿಎಂ ಬೊಮ್ಮಾಯಿ ಮಾಹಿತಿ
* ಉಕ್ರೇನಿನಲ್ಲಿ ಮೃತಪಟ್ಟ ಕನ್ನಡಿಗ ನವೀನ್ ಮೃತದೇಹ ಸಿಕ್ಕಿದೆ
* ಮಾಧ್ಯಮಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ
* ಮೃತದೇಹ ತರುವ ಬಗ್ಗೆ ಮಾತುಕತೆ ನಡೆಸ್ತಿದ್ದೇವೆ ಎಂದ ಸಿಎಂ
ಬೆಂಗಳೂರು, (ಮಾ.08): ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಲ್ಲಿ (Russia Ukraine War) ಸಾವನ್ನಪ್ಪಿದ ನವೀನ್ (Naveen) ಮೃತದೇಹ ಸಿಕ್ಕಿದೆ ಎಂದು ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಬೊಮ್ಮಾಯಿ, ನವೀನ್ ಮೃತದೇಹ(Naveen Dead Body ) ಸಿಕ್ಕಿದೆ. ಉಕ್ರೇನಿನ (Ukraine) ಶವಾಗಾರದಲ್ಲಿ ಮೃತ ದೇಹ ಇಡಲಾಗಿದೆ. ಯುದ್ಧ ಇನ್ನೂ ನಡೀತಿದೆ ಎಂದು ಹೇಳಿದರು.
ಉಕ್ರೇನ್‌ನಲ್ಲಿ ಮೃತಪಟ್ಟ ನವೀನ್ ಕುಟುಂಬಕ್ಕೆ 25 ಲಕ್ಷ ಪರಿಹಾರ ವಿತರಿಸಿದ ಬೊಮ್ಮಾಯಿ
ರಾಯಭಾರಿ ಕಚೇರಿ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದೇವೆ. ಮೃತದೇಹ ತರುವ ಬಗ್ಗೆ ಮಾತುಕತೆ ನಡೆಸ್ತಿದ್ದೇವೆ ಎಂದು ಹೇಳಿದ್ದಾರೆ. ನವೀನ್ ಮೃತದೇಹ ತರುವ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿದೆ ಎಂದು ತಿಳಿಸಿದರು.
ಸಿಎಂ ಬೊಮ್ಮಾಯಿ ಮಾತ್ರವಲ್ಲದೆ, ವಿವಿಧ ರಾಜಕೀಯ ನಾಯಕರು ನವೀನ್ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ನವೀನ್ ಕುಟುಂಬಸ್ಥರು ಮಾತ್ರ ನವೀನ್ ಮೃತದೇಹವಾದರೂ ಭಾರತಕ್ಕೆ ಮರಳಬೇಕು ಎಂಬ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ, ಅದು ಸಾಧ್ಯವೇ ಇಲ್ಲವೇ ಎಂಬ ಬಗ್ಗೆ ಹಲವು ರಾಜಕಾರಣಿಗಳು ಹೇಳಿಕೆ ನೀಡುತ್ತಿದ್ದರು. ಸರ್ಕಾರ ತನ್ನ ಪ್ರಯತ್ನ ತಾನು ಮಾಡುತ್ತಿದೆ ಎಂದು ಹೇಳುತ್ತಲೇ ಬಂದಿತ್ತು.
25 ಲಕ್ಷ ರೂ ಪರಿಹಾರ
ಉಕ್ರೇನ್‌ನಲ್ಲಿ ಮೃತಪಟ್ಟ ಹಾವೇರಿ ಮೂಲದ ನವೀನ್ ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದರು. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ನಿವಾಸಕ್ಕೆ ಭೇಟಿ ನೀಡಿದ ಸಿಎಂ, ನವೀನ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ಜತೆಗೆ ನವೀನ್ ತಂದೆಗೆ 25 ಲಕ್ಷ ರೂ. ಪರಿಹಾರ ಚೆಕ್ ನೀಡಿದ್ದರು.
ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧದಲ್ಲಿ ಮೃತರಾದ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಗ್ಯಾನಗೌಡ್ರ ನಿವಾಸಕ್ಕೆ ಸಿರಿಗೆರೆ ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಭೇಟಿ ನೀಡಿ ನವೀನ್ ಭಾವ ಚಿತ್ರಕ್ಕೆ ಪುಷ್ಪ ಸಮರ್ಪಿಸಿ, ಕುಟುಂಬದವರಿಗೆ ಸಾಂತ್ವನ ಮತ್ತು ಧೈರ್ಯ ತುಂಬಿದ್ದಾರೆ.
ಉಕ್ರೇನ್ ದೇಶದ ಕಾರ್ಕಿವ್‌ನಲ್ಲಿ 4ನೇ ವರ್ಷದ ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದ ನವೀನ್ ಗ್ಯಾನಗೌಡ್ರು, ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ತರಲು ಹೋಗಿದ್ದ ಸಂದರ್ಭದಲ್ಲಿ ರಷ್ಯಾ ಸೇನೆಯ ಶೆಲ್ ದಾಳಿಗೆ ಬಲಿಯಾಗಿದ್ದರು.
ನವೀನ್ ತಾಯಿಯ ಕಣ್ಣೀರು
ನನಗೆ ಮಗನನ್ನು ಕೊನೆಯ ಬಾರಿ ನೋಡಲು ಆಗಲಿಲ್ಲ, ಅವನ ದೇಹ ನೋಡುವ ಬಗ್ಗೆಯೂ ಖಾತ್ರಿಯಿಲ್ಲ. ಅಲ್ಲಿ (ಉಕ್ರೇನಲ್ಲಿ) ಇನ್ನೂ ಮಕ್ಕಳು ಉಳಿದಿದ್ದಾರಲ್ಲ, ಅವರೂ ನನ್ನ ಮಕ್ಕಳೇ, ಅವರನ್ನಾದರೂ ಸುರಕ್ಷಿತವಾಗಿ ಕರೆತನ್ನಿ,’ ಎಂದು ನವೀನ್ ತಾಯಿ ಹೇಳಿದ್ದರು.
ಜಾತಿ ಮೀಸಲಾತಿ ವ್ಯವಸ್ಥೆ ಕಾರಣಕ್ಕೆ ನನ್ನ ಮಗ ನವೀನ್‌ಗೆ ಕರ್ನಾಟಕದಲ್ಲಿ ವೈದ್ಯಕೀಯ ಸೀಟು ಸಿಗಲಿಲ್ಲ. ಕೋಟಿ ಕೋಟಿ ಖರ್ಚು ಮಾಡಿ ಓದಿಸಲು ನಮ್ಮಿಂದ ಸಾಧ್ಯವಾಗದ ಕಾರಣ, ಆತನನ್ನು ಉಕ್ರೇನ್‌ಗೆ ಕಳುಹಿಸಿದ್ದೇವು. ಈಗ ಆತನೇ ಇಲ್ಲ ಎಂದು ನವೀನ್ ತಾಯಿ ವಿಜಯಲಕ್ಷ್ಮೀ ಕಣ್ಣೀರಿಟ್ಟಿದ್ದರು.
ನಮ್ಮ ಬಳಿ ಆಸ್ತಿ ಇಲ್ಲ. ಇರುವ ಇಬ್ಬರು ಮಕ್ಕಳೇ ನಮಗೆ ಆಸ್ತಿ. ಆದರೆ ಎರಡು ಕಣ್ಣುಗಳ ಪೈಕಿ ಈಗ ಒಂದು ಕಣ್ಣು ಕಳೆದುಕೊಂಡಿದ್ದೇನೆ ಎಂದು ತಾಯಿ ವಿಜಯಲಕ್ಷ್ಮೀ ಕಣ್ಣೀರಿಟ್ಟರು.ಆದಷ್ಟು ಬೇಗ ಮಗನ ಪಾರ್ಥಿವ ಶರೀರನ್ನು ಕರೆತನ್ನಿ. ಕೊನೆಯ ಬಾರಿ ಮಗನ ಮುಖ ನೋಡುವ ಅವಕಾಶ ಮಾಡಿ ಕೊಡಿ ಎಂದು ವಿಜಯಲಕ್ಷ್ಮೀ ಮನವಿ ಮಾಡಿದ್ದರು.