ಶಾಲೆಗಳ ನಿರ್ವಹಣೆಯಲ್ಲಿನ ನಿರ್ಲಕ್ಷ್ಯ, ಶಿಕ್ಷಕರ ಕೊರತೆ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಬಿಬಿಎಂಪಿ ಶಾಲೆಗಳನ್ನು ಶಿಕ್ಷಣ ಇಲಾಖೆಗೆ ವಹಿಸಿಕೊಳ್ಳುವ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಶುಕ್ರವಾರ ಸಭೆ ನಡೆಸಲಾಗುತ್ತಿದೆ.
ಬೆಂಗಳೂರು (ಡಿ.22): ಶಾಲೆಗಳ ನಿರ್ವಹಣೆಯಲ್ಲಿನ ನಿರ್ಲಕ್ಷ್ಯ, ಶಿಕ್ಷಕರ ಕೊರತೆ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಬಿಬಿಎಂಪಿ ಶಾಲೆಗಳನ್ನು ಶಿಕ್ಷಣ ಇಲಾಖೆಗೆ ವಹಿಸಿಕೊಳ್ಳುವ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಶುಕ್ರವಾರ ಸಭೆ ನಡೆಸಲಾಗುತ್ತಿದೆ. ಬಿಬಿಎಂಪಿ ನಿರ್ವಹಣೆಯಲ್ಲಿ 142 ನರ್ಸರಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು, 17 ಪಿಯು ಕಾಲೇಜುಗಳಿವೆ. ಅವುಗಳಲ್ಲಿ 23 ಸಾವಿರಕ್ಕೂ ಹೆಚ್ಚಿನ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಶಿಕ್ಷಕರಿಲ್ಲ ಹಾಗೂ ಪ್ರತಿವರ್ಷ ಫಲಿತಾಂಶದಲ್ಲಿ ಬಿಬಿಎಂಪಿ ಶಾಲೆಗಳು ಹಿಂದೆ ಬೀಳುತ್ತಿವೆ.
ಹಾಗೆಯೇ, ಶಾಲೆಗಳ ನಿರ್ವಹಣೆಗೆ ಬಿಬಿಎಂಪಿಗೆ ಸಾಕಷ್ಟು ಕಷ್ಟವಾಗುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಬಿಬಿಎಂಪಿ ನಿರ್ವಹಣೆಯಲ್ಲಿನ ಶಾಲೆಗಳನ್ನು ಶಿಕ್ಷಣ ಇಲಾಖೆಗೆ ವಹಿಸುವ ಸಂಬಂಧ ಹಲವು ದಿನಗಳಿಂದ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಸಲಾಗುತ್ತಿತ್ತು. ಇದೀಗ ಖುದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಶಾಲೆಗಳ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಶಾಲೆಗಳನ್ನು ಶಿಕ್ಷಣ ಇಲಾಖೆಗೆ ವಹಿಸುವ ಸಂಬಂಧ ನಿರ್ಧರಿಸಲು ಮುಂದಾಗಿದ್ದು, ಅದಕ್ಕಾಗಿ ಶುಕ್ರವಾರ ಸಭೆ ನಡೆಸುತ್ತಿದ್ದಾರೆ.
ಸದನದಿಂದ ಸಂಸದರು ಹೊರಕ್ಕೆ, ಪ್ರಜಾಪ್ರಭುತ್ವದ ಕಗ್ಗೊಲೆ: ಸಚಿವ ಎಂ.ಬಿ.ಪಾಟೀಲ್
ಶಾಲೆಗಳ ಹಸ್ತಾಂತರದ ಜತೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್)ಗಳ ಅವಶ್ಯಕತೆ ಹಾಗೂ ಅದನ್ನು ಆರಂಭಿಸಲು ಬೇಕಾಗುವ ಮೂಲಸೌಕರ್ಯಗಳ ಬಗ್ಗೆಯೂ ಅಧಿಕಾರಿಗಳಿಂದ ವರದಿ ಪಡೆದು ನಿರ್ಧರಿಸಲಾಗುತ್ತದೆ. ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜತೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಬಿಬಿಎಂಪಿ ಮುಖ್ಯ ಆಯುಕ್ತರು, ಶಿಕ್ಷಣ ಇಲಾಖೆ ಆಯುಕ್ತರು, ಪಿಯು ಶಿಕ್ಷಣ ಇಲಾಖೆ ನಿರ್ದೇಶಕರು ಪಾಲ್ಗೊಳ್ಳಲಿದ್ದಾರೆ.
ಡಿಕೆಶಿ ಕೇಸ್ ವಾಪಸ್ ವಿವರ ಕೇಳಿದ ಕೋರ್ಟ್: ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಸಂಬಂಧ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐಗೆ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದಿರುವ ನಿರ್ಧಾರ ಕುರಿತಂತೆ ಉತ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ರಾಜ್ಯ ಸರ್ಕಾರದ ಆದೇಶ ರದ್ದು ಕೋರಿ ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಸಲ್ಲಿಸಿರುವ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಸರ್ಕಾರದ ನಿರ್ಧಾರದ ಕುರಿತು ಅಡ್ವೋಕೆಟ್ ಜನರಲ್ ವಿಸ್ತೃತವಾಗಿ ಉತ್ತರಿಸಬೇಕು ಎಂದು ಸೂಚಿಸಿ ವಿಚಾರಣೆಯನ್ನು 2024ರ ಜ.5ಕ್ಕೆ ಮುಂದೂಡಿತು.
ಅಲ್ಲದೆ, ಅರ್ಜಿ ವಿಚಾರಣೆಗೆ ಯೋಗ್ಯವಾಗಿದೆ ಎಂಬ ಬಗ್ಗೆ ಮೊದಲು ತೀರ್ಮಾನಿಸಲಾಗುವುದು. ನಂತರ ಸರ್ಕಾರದ ಆದೇಶದ ಸಿಂಧುತ್ವದ ಕುರಿತು ನಿರ್ಧಾರ ಮಾಡಲಾಗುವುದು ಎಂದು ನ್ಯಾಯಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ. ಇದಕ್ಕೂ ಮುನ್ನ ಪ್ರತಿಕ್ರಿಯಿಸಿದ ನ್ಯಾಯಪೀಠ, ಸರ್ಕಾರದ ಆದೇಶದಿಂದ ನೀವು ಹೇಗೆ ಬಾಧಿತರಾಗುತ್ತೀರಾ? ನಿಮ್ಮ ಯಾವ ಹಕ್ಕು ಹರಣವಾಗಿದೆಯೆಂದು ಈ ಅರ್ಜಿ ಸಲ್ಲಿಸಿದ್ದೀರಾ? ನೀವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸದೆ, ಏಕೆ ತಕರಾರು ಅರ್ಜಿ ದಾಖಲಿಸಿದ್ದೀರಾ? ಎಂದು ಯತ್ನಾಳ್ ಪರ ವಕೀಲರನ್ನು ನ್ಯಾಯಪೀಠ ಪ್ರಶ್ನಿಸಿತು.
ಹಿಂದಿನ ಕೋವಿಡ್ ತಪ್ಪು ಮತ್ತೆ ಆಗಕೂಡದು: ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ
ಯತ್ನಾಳ್ ಪರ ವಕೀಲ ವೆಂಕಟೇಶ್ ದಳವಾಯಿ, ವೈಯಕ್ತಿಕವಾಗಿ ಬಾಧಿತರಾಗದಿದ್ದರೂ ಕ್ರಿಮಿನಲ್ ಪ್ರಕರಣವನ್ನು ಯಾರು ಬೇಕಾದರೂ ದಾಖಲಿಸಬಹುದಾಗಿದೆ ಎಂದು ತಿಳಿಸಿ ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳನ್ನು ಉಲ್ಲೇಖಿಸಿದರು. ಅಡ್ವೋಕೇಟ್ ಜನರಲ್ ಅವರು, ಅರ್ಜಿದಾರರು ಉಲ್ಲೇಖಿಸಿರುವ ಎಲ್ಲಾ ತೀರ್ಪುಗಳನ್ನು ಅಧ್ಯಯನ ಮಾಡಿ ಉತ್ತರಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.
