ಹಂಪಿ[ಜ.31]: ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ವತಿಯಿಂದ ಪ್ರತಿಷ್ಠಿತ ನಾಡೋಜ ಗೌರವ ಪ್ರದಾನ ಮಾಡಲಾಯಿತು. ವಿವಿಯ ಬಯಲು ರಂಗಮಂದಿರದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ಸಮಾರಂಭದಲ್ಲಿ ವಿವಿ ಕುಲಪತಿ ಮಲ್ಲಿಕಾ ಘಂಟಿ ಪ್ರದಾನ ಮಾಡಿದರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಾಜಿ ಅಧ್ಯಕ್ಷ ಹಾಗೂ ಹಿರಿಯ ವಿಜ್ಞಾನಿ ಎ.ಎಸ್‌.ಕಿರಣ್‌ಕುಮಾರ್‌ ಘಟಿಕೋತ್ಸವ ಭಾಷಣ ಮಾಡಿದರು. ಕುಲಸಚಿವ ಡಾ.ಅಶೋಕ್‌ ಕುಮಾರ ರಂಜೇರ ಇದ್ದರು. ಈ ಸಂದರ್ಭದಲ್ಲಿ ಡಿಲಿಟ್‌, ಪಿಎಚ್‌ಡಿ, ಎಂಫಿಲ್‌ ಸೇರಿದಂತೆ ವಿವಿಧ ವಿಭಾಗಗಳ 645 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಸಮಾರಂಭಕ್ಕೆ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ವಜುಭಾಯಿ ರೂಡಾಭಾಯಿ ವಾಲಾ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಗೈರಾಗಿದ್ದರು.

ನಾಡೋಜ ವಿವಾದ; ಬಳಿಗಾರ್‌ ಸ್ಪಷ್ಟನೆ

ಹಂಪಿ ಕನ್ನಡ ವಿವಿ ಬುಧವಾರ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್‌ ಅವರಿಗೆ ಕೊಡಮಾಡಿದ ‘ನಾಡೋಜ’ ಗೌರವ ಇದೀಗ ವಿವಾದಕ್ಕೀಡಾಗಿದೆ. ಕಸಾಪ ಅಧ್ಯಕ್ಷರಾದವರು ಸಹಜವಾಗಿಯೇ ಕನ್ನಡ ವಿವಿಯ ನಾಮನಿರ್ದೇಶನ ಸದಸ್ಯರಾಗಿರುತ್ತಾರೆ. ಹೀಗಾಗಿ ಡಾ.ಮನು ಬಳಿಗಾರ ವಿವಿಯ ನಾಮನಿರ್ದೇಶನ ಸದಸ್ಯರಾಗಿದ್ದಾರೆ. ವಿವಿಯ ನಿಯಮದಂತೆ ಸದಸ್ಯರಾದವರಿಗೆ ನಾಡೋಜ ಗೌರವ ನೀಡುವಂತಿಲ್ಲವಾದರೂ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಬಳಿಗಾರ್‌, ‘ನಾನು ಕನ್ನಡ ವಿವಿಯ ನಾಮ ನಿರ್ದೇಶನ ಸದಸ್ಯ ಎನ್ನುವುದು ನನಗೆ ಗೊತ್ತಿಲ್ಲ. ಈವರೆಗೆ ನಾನು ವಿವಿಯ ಯಾವುದೇ ಸಭೆಯಲ್ಲೂ ಭಾಗವಹಿಸಿಲ್ಲ. ರಾಜ್ಯಪಾಲರು ನನ್ನ ಹೆಸರನ್ನು ಅಂತಿಮಗೊಳಿಸಿದ್ದಾರೆ ಎನ್ನುವುದು ಮಾಧ್ಯಮಗಳ ಮೂಲಕವೇ ನನಗೆ ಗೊತ್ತಾಗಿದೆ’ ಎಂದರಲ್ಲದೆ, ಹೆಚ್ಚಿನ ಪ್ರಶ್ನೆಗೆ ‘ನೋ ಕಾಮೆಂಟ್ಸ್‌’ ಎಂದರು.