ಗೃಹಲಕ್ಷ್ಮೀ ಯೋಜನೆಯ ಸಹಾಯಧನವನ್ನು ಖಾಸಗಿ ಫೈನಾನ್ಸ್ ಸಂಸ್ಥೆಗಳು ಹಳೇ ಸಾಲದ ನೆಪದಲ್ಲಿ ಬಲವಂತವಾಗಿ ಕಡಿತಗೊಳಿಸುತ್ತಿರುವ ಬಗ್ಗೆ ಶಾಸಕ ದಿನೇಶ್‌ ಗೂಳಿಗೌಡ ಅವರು ದೂರು ಸಲ್ಲಿಸಿದ್ದರು. 

ಕನ್ನಡಪ್ರಭ ವಾರ್ತೆ ಬೆಂಗಳೂರು (ಏ.11): ಮಹಿಳಾ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಜಮೆಯಾಗುವ ಗೃಹಲಕ್ಷ್ಮೀ (gruhalakshmi) ಸಹಾಯಧನದ ಹಣವನ್ನು ಖಾಸಗಿ ಫೈನಾನ್ಸ್‌ ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಳೇ ಸಾಲದ (old debt) ಬಾಕಿ ನೆಪದಲ್ಲಿ ಬಲವಂತವಾಗಿ ಕಡಿತಗೊಳಿಸುತ್ತಿರುವ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯ (cm siddaramaiah) ಸೂಚಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮತ್ತು ಶಾಸಕ ದಿನೇಶ್‌ ಗೂಳಿಗೌಡ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಲ್ಲಿಸಿದ್ದ ಮನವಿ ಪತ್ರದ ಬೆನ್ನಲ್ಲೇ ಮುಖ್ಯಮಂತ್ರಿಯವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಈ ಸೂಚನೆ ನೀಡಿದ್ದಾರೆ.

ಜತೆಗೆ ಮುಖ್ಯಮಂತ್ರಿ ಕಾರ್ಯದರ್ಶಿ ಅವರು, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಮುಖ್ಯ ಕಾರ್ಯದರ್ಶಿ, ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತುರ್ತು ಕ್ರಮಕ್ಕೆ ನಿರ್ದೇಶಿಸಿದ್ದಾರೆ.

ಮುಖ್ಯಮಂತ್ರಿಗೆ ಪತ್ರ ಬರೆದಿದ್ದ ದಿನೇಶ್‌ ಗೂಳಿಗೌಡ

ದಿನೇಶ್‌ ಗೂಳಿಗೌಡ ಅವರು ಮುಖ್ಯಮಂತ್ರಿ ಅವರಿಗೆ ಬರೆದಿದ್ದ ಪತ್ರದಲ್ಲಿ, ಗೃಹಲಕ್ಷ್ಮೀ ಯೋಜನೆಯು ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಶಕ್ತಿಯಾಗಿದೆ. ಪ್ರತಿ ತಿಂಗಳು ತಲಾ 2 ಸಾವಿರ ರು. ಸಹಾಯಧನ ಪಾವತಿಯಾಗುತ್ತಿದೆ. ಆದರೆ, ಇತ್ತೀಚೆಗೆ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಗೃಹಲಕ್ಷ್ಮೀ ಹಣ ಜಮೆಯಾದ ಕೂಡಲೇ ಕೆಲ ಖಾಸಗಿ ಫೈನಾನ್ಸ್‌ ಸಂಸ್ಥೆಗಳು, ಸ್ತ್ರೀಶಕ್ತಿ ಸಂಘಗಳು ಆ ಹಣವನ್ನು ಸಾಲದ ಬಾಕಿ ಅಥವಾ ಬಡ್ಡಿ ಎಂದು ಹೇಳಿ ಬಲವಂತಾಗಿ ಕಡಿತಗೊಳಿಸುತ್ತಿವೆ. ಕೆಲ ಕಡೆ ಬ್ಯಾಂಕ್‌ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅಥವಾ ಫಲಾನುಭವಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಕೋರಿದ್ದರು.