ಕರ್ನಾಟಕ ಸರ್ಕಾರದ ಗೃಹಜ್ಯೋತಿ ಯೋಜನೆ ಸೌಲಭ್ಯ ಪಡೆಯಲು ಅ.31ರೊಳಗೆ ಸಂಬಂಧಿಸಿದ ವಿದ್ಯುತ್ ಉಪ ವಿಭಾಗ ಕಚೇರಿಗಳಿಗೆ ಭೇಟಿ ನೀಡಿ, ಸದರಿ ಯೋಜನೆ ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿ ನೋಂದಾಯಿಸಲು ಇಲಾಖೆ ಮನವಿ ಮಾಡಿದೆ.
ಬೆಂಗಳೂರು: ಗೃಹಜ್ಯೋತಿ ಯೋಜನೆ ಪರಿಶೀಲನೆಗೆ ದಾಖಲೆ ನೀಡಲು ಅ.31 ಕೊನೆಯ ದಿನಾಂಕವಾಗಿದ್ದು, ಈವರೆಗೆ 16 ಲಕ್ಷ ಬೆಸ್ಕಾಂ ಗ್ರಾಹಕರು ದಾಖಲೆ ನೀಡಿಲ್ಲ. ಅ.31ರ ಬಳಿಕ ದಾಖಲೆ ಸಲ್ಲಿಸದವರ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶಂಕರ್ ತಿಳಿಸಿದ್ದಾರೆ.
ಕಳೆದ ನಾಲ್ಕು ತಿಂಗಳಿಂದ ಮನೆ-ಮನೆಗೆ ಭೇಟಿ ನೀಡಿ ಬೆಸ್ಕಾಂ ಸಿಬ್ಬಂದಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಬೆಸ್ಕಾಂ ವ್ಯಾಪ್ತಿಯಲ್ಲಿ 69 ಲಕ್ಷ ಗ್ರಾಹಕರಿದ್ದು, ಈ ಪೈಕಿ ಬಾಗಿಲು ಲಾಕ್ ಆಗಿರುವ, ಯಾರೂ ವಾಸವಿಲ್ಲದ ಮನೆ, ಪರಿಶೀಲನೆಗೆ ಅಗತ್ಯ ದಾಖಲೆ ನೀಡಿ ಸಹಕರಿಸದವರು ಸೇರಿ ಈವರೆಗೆ 16 ಲಕ್ಷ ಗ್ರಾಹಕರು ಗೃಹಜ್ಯೋತಿ ಪರಿಶೀಲನೆಗೆ ದಾಖಲೆ ಒದಗಿಸಿಲ್ಲ.
ಇಂಥವರ ಮನೆಗಳಿಗೆ ಮೂರು ಬಾರಿ ತೆರಳಿ ಅಲ್ಲಿಂದ ಅವರ ಮೊಬೈಲ್ಗೆ ಸಂದೇಶವನ್ನೂ ಕಳುಹಿಸಲಾಗಿದೆ. ಹೀಗಿದ್ದರೂ 16 ಲಕ್ಷ ಮಂದಿಯಿಂದ ಸ್ಪಂದನೆ ಇಲ್ಲ. ಅವರಿಗೆ ಅ.31ರವರೆಗೆ ಬೆಸ್ಕಾಂ ಉಪವಿಭಾಗೀಯ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆ ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಅ.31ರ ಬಳಿಕ ದಿನಾಂಕ ವಿಸ್ತರಣೆ ಮಾಡುವುದಿಲ್ಲ. ಬದಲಿಗೆ ದಾಖಲೆ ಸಲ್ಲಿಸದವರ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದು, ಮುಂದಿನ ತೀರ್ಮಾನವನ್ನು ಸರ್ಕಾರ ಮಾಡಲಿದೆ ಎಂದು ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯಾದ್ಯಂತ 1.69 ಕೋಟಿ ಗೃಹಜ್ಯೋತಿ ನೋಂದಾಯಿತ ಗ್ರಾಹಕರಿದ್ದು ಬೆಸ್ಕಾಂ ವ್ಯಾಪ್ತಿಯಲ್ಲಿ 69 ಲಕ್ಷ ಮಂದಿ ಇದ್ದಾರೆ. ಈ ಪೈಕಿ ಬೆಸ್ಕಾಂ ವ್ಯಾಪ್ತಿಯಲ್ಲಿ 16 ಲಕ್ಷ ಹಾಗೂ ರಾಜ್ಯಾದ್ಯಂತ 24 ಲಕ್ಷ (ಬೆಸ್ಕಾಂ ಸೇರಿ) ಮಂದಿ ದಾಖಲೆ ಒದಗಿಸಿಲ್ಲ ಎಂದು ಹೇಳಿದರು.
ಕೆಲ ಮನೆಗಳಿಗೆ ಬೀಗ ಹಾಕಿರುವುದು, ಬಾಡಿಗೆದಾರರು ಮನೆ ಖಾಲಿ ಮಾಡಿ ಬೇರೆಡೆಗೆ ತೆರಳಿರುವುದು ಸೇರಿ ಹಲವು ಕಾರಣಗಳಿಂದ ದಾಖಲೆ ಸಂಗ್ರಹಿಸಲು ಸಾಧ್ಯವಾಗಿಲ್ಲ. ಇನ್ನೂ ಕೆಲ ಗ್ರಾಹಕರು ಅಗತ್ಯ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಕೆಲ ಅಪಾರ್ಟ್ಮೆಂಟ್ ನಾಗರಿಕರು ಸಹಕಾರ ನೀಡುತ್ತಿಲ್ಲ. ಕೆಲವರು ದಾಖಲೆ ನೀಡಲ್ಲ ಗೃಹಜ್ಯೋತಿ ಸೌಲಭ್ಯ ಬೇಡ ಎನ್ನುತ್ತಾರೆ. ಆದರೆ, ಬೇಡ ಎಂದು ಸಹಿ ಹಾಕಲು ಹಿಂದೇಟು ಹಾಕುತ್ತಾರೆ ಎಂದು ಶಿವಶಂಕರ್ ಅವರು ವಿವರಿಸಿದರು.
ಗೃಹಜ್ಯೋತಿ ತಿರಸ್ಕರಿಸಿದ 1.10 ಲಕ್ಷ ಮಂದಿ
ಬೆಸ್ಕಾಂ ವ್ಯಾಪ್ತಿಯಲ್ಲಿ ಗೃಹಜ್ಯೋತಿ ದಾಖಲೆಗಳ ಪರಿಶೀಲನೆ ವೇಳೆ 1.10 ಲಕ್ಷ ಮಂದಿ ತಮಗೆ ಗೃಹಜ್ಯೋತಿ ಅಡಿ ಉಚಿತ ವಿದ್ಯುತ್ ಬೇಡ ಎಂದು ಹೇಳಿದ್ದಾರೆ. ಅಂಥವರಿಗೆ ಗೃಹಜ್ಯೋತಿ ಅಡಿ ಸೌಲಭ್ಯ ಕಡಿತಗೊಳ್ಳಲಿದೆ. ದಾಖಲೆ ಸಲ್ಲಿಸದೆ ತಮ್ಮ ಗೃಹಜ್ಯೋತಿ ಸಂಪರ್ಕ ಪರಿಶೀಲನೆ ಮಾಡಿಸಿಕೊಳ್ಳದ ಗ್ರಾಹಕರ ಬಗ್ಗೆ ಸರ್ಕಾರ ತೀರ್ಮಾನ ಮಾಡಬೇಕಿದೆ ಎಂದು ಡಾ.ಎನ್.ಶಿವಶಂಕರ್ ತಿಳಿಸಿದರು.


