ಸಿಎಂ VS ಮಾಜಿ ಸಿಎಂ: ಬಾದಾಮಿಯೇ ಯುದ್ಧಭೂಮಿ?
ಬಾದಾಮಿಗೆ ಅನುದಾನ ನೀಡೋ ವಿಚಾರದಲ್ಲಿ ಹೊರಬಿತ್ತು ಸಿಎಂ, ಮಾಜಿ ಸಿಎಂ ಮಧ್ಯೆ ವೈಮನಸ್ಸು| ಸಿದ್ದರಾಮಯ್ಯ & ಕುಮಾರಸ್ವಾಮಿ ಅಂತರಾಳದ ಅಸಮಾಧಾನ| ಸಿದ್ದು ಕೇಳಿದ್ದು 115 ಕೋಟಿ, ಸಿಎಂ ಕೊಟ್ಟಿದ್ದು 15 ಕೋಟಿ| ಬಾದಾಮಿ ಅಭಿವೃದ್ದಿಗೆ ಅಡ್ಡಗಾಲಾಯ್ತಾ ರಾಜ್ಯ ರಾಜಕೀಯ ಬದಲಾವಣೆ ಎಫೆಕ್ಟ್?| ಆರಂಭದಲ್ಲಿ ಸಿದ್ದು ಪತ್ರಕ್ಕೆ ಸಿಕ್ಕಷ್ಟು ಮಾನ್ಯತೆ ಈಗ ಕಡಿಮೆಯಾಗುತ್ತಿದೆ?
ಮಲ್ಲಿಕಾರ್ಜುನ ಹೊಸಮನಿ
ಬಾದಾಮಿ(ಜ.10): ರಾಜ್ಯ ರಾಜಕೀಯ ಬೆಳವಣಿಗೆಗಳ ಮದ್ಯೆಯೇ ದೋಸ್ತಿ ಸರ್ಕಾರದಲ್ಲಿ ಆಂತರಿಕ ಬಿಕ್ಕಟ್ಟು ಶುರುವಾಗಿರೋ ಬೆನ್ನಲ್ಲೆ ಸಿಎಂ ಕುಮಾರಸ್ವಾಮಿ ಮತ್ತು ಸಮನ್ವಯ ಸಮಿತಿ ಅದ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯ ಮಧ್ಯೆ ಅಸಮಾಧಾನದ ಕಾಣಿಸಿಕೊಳ್ಳುತ್ತಲೇ ಇದೆ.
ಈ ಮದ್ಯೆ ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಸ್ವಕ್ಷೇತ್ರದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವಂತೆ ಕೇಳಿದಷ್ಟು ಹಣ ನೀಡದೇ ಇದೀಗ ರಾಜ್ಯದ ದೊರೆ ಸಿಎಂ ಕುಮಾರಸ್ವಾಮಿ ಹಠ ಸಾಧಿಸಲು ಹೊರಟಿದ್ದಾರೆ. ಉಭಯ ನಾಯಕರ ಅಸಮಾಧಾನ ಸೇಡಿನ ರಾಜಕಾರಣಕ್ಕೆ ಇದೀಗ ಬಾದಾಮಿ ಮತಕ್ಷೇತ್ರ ಸಾಕ್ಷಿಯಾಗಿದೆ.
ಸ್ವಕ್ಷೇತ್ರದ ಅಭಿವೃದ್ಧಿಗಾಗಿ ಪಣತೊಟ್ಟ ಸಿದ್ದರಾಯ್ಯಗೆ ಸಿಕ್ತಿಲ್ಲ ಕೇಳಿದಷ್ಟು ಅನುದಾನ, ಸಿದ್ದು ಕ್ಷೇತ್ರಕ್ಕೆ ಅನುದಾನ ನೀಡೋದ್ರಲ್ಲಿ ಸಿಎಂ ಕುಮಾರಸ್ವಾಮಿ ಮೀನಾಮೇಷ, ಉಭಯ ನಾಯಕರ ಹಠಕ್ಕೆ ಸಾಕ್ಷಿಯಾಯಿತು ಐತಿಹಾಸಿಕ ಬಾದಾಮಿ ಮತಕ್ಷೇತ್ರ .
ಹೌದು. ಚಾಮುಂಡೇಶ್ವರಿಯಲ್ಲಿ ಸೋತ ತಮ್ಮನ್ನು ಗೆಲ್ಲಿಸಿಕೊಟ್ಟು ರಾಜಕೀಯ ಪುರ್ನಜನ್ಮ ನೀಡಿದ ಬಾದಾಮಿ ಮತಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿರೋ ಮಾಜಿ ಸಿಎಂ ಸಿದ್ದರಾಮಯ್ಯ ಶತಾಯಗತಾಯ ಒಂದಿಲ್ಲೊಂದು ಪ್ರಯತ್ನ ಮಾಡುತ್ತಲೇ ಇದ್ದಾರೆ.
ಆದ್ರೆ ಈಗ ಅನುದಾನ ಬಿಡುಗಡೆ ಮಾಡುವ ವಿಚಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡೆದುಕೊಂಡಿರೋ ರೀತಿ ಬಾದಾಮಿ ಮತಕ್ಷೇತ್ರದ ಜನರಿರಲಿ ಸ್ವತಃ ಸಿದ್ದರಾಮಯ್ಯಗೂ ಅಚ್ಚರಿ ತಂದರಲೂಬಹುದು.
ಯಾಕಂದ್ರೆ ಇತ್ತೀಚೆಗೆ ಬಾದಾಮಿ ಮತಕ್ಷೇತ್ರದ ಬಾದಾಮಿ ಮತಕ್ಷೇತ್ರ ರಸ್ತೆ ಅಭಿವೃದ್ಧಿಗಾಗಿ 50 ಕೋಟಿ, ಕೆರೂರ, ಬಾದಾಮಿ, ಗುಳೇದಗುಡ್ಡ ಪಂಚಾಯತಿ ವ್ಯಾಪ್ತಿಯಲ್ಲಿ ಒಳಚರಂಡಿ, ಕಾಂಕ್ರೀಟ್ ರಸ್ತೆ ಸೇರಿ ಕಾಮಗಾರಿಗಳಿಗಾಗಿ 65 ಕೋಟಿ , ಹೀಗೆ ಒಟ್ಟು 115 ಕೋಟಿ ಅನುದಾನ ಕೇಳಿದ್ರೆ ಕುಮಾರಸ್ವಾಮಿ ಕೊಟ್ಟಿದ್ದು ಮಾತ್ರ ಕೇವಲ ೧೫ ಕೋಟಿ.
ಹೀಗಾಗಿ ಸಿದ್ದರಾಮಯ್ಯನವರ ಮೇಲೆ ಅನುದಾನ ನೀಡುವ ವಿಚಾರದಲ್ಲೂ ಕುಮಾರಸ್ವಾಮಿ ರಾಜಕೀಯ ದ್ವೇಷ ಮೆರೆದರಾ ? ಅನ್ನೋ ಮಾತು ಇದೀಗ ಬಾದಾಮಿ ಮತಕ್ಷೇತ್ರದಲ್ಲಿ ಕೇಳಿ ಬಂದಿದೆ. ಇಲ್ಲಿಯವರೆಗೆ ಸಿದ್ದರಾಮಯ್ಯನವರ ಪ್ರತಿ ಪತ್ರಕ್ಕೂ ಮನ್ನಣೆ ನೀಡಿದ ಮುಖ್ಯಮಂತ್ರಿಗಳು ಈಗ ಹಿಂದೇಟು ಹಾಕಿದ್ರಾ ಎನ್ನಲಾಗುತ್ತಿದೆ. ಇದು ಬಾದಾಮಿ ಮತಕ್ಷೇತ್ರದ ಜನರಲ್ಲೂ ಕೊಂಚ ಅಸಮಾಧಾನಕ್ಕೂ ಕಾರಣವಾಗಿದೆ.
"
ಇನ್ನು ಇತ್ತೀಚಿಗಷ್ಟೇ ಮಂತ್ರಿಮಂಡಲ ಪನರ್ ರಚನೆ, ನಿಗಮ ಮಂಡಳಿ ನೇಮಕಾತಿ ಸೇರಿದಂತೆ ಪ್ರತಿ ಹಂತದಲ್ಲೂ ಸಿದ್ದರಾಮಯ್ಯ ಮೇಲುಗೈ ಸಾಧಿಸಿರೋದು ಕುಮಾರಸ್ವಾಮಿ ಅವರ ಅಸಮಾಧಾನಕ್ಕೂ ಕಾರಣವಾಗಿರಬಹುದು. ಸಾಲದ್ದಕ್ಕೆ ಇಂಗ್ಲಿಷ್ ಮಾಧ್ಯಮ ಶಾಲೆಗಳ ವಿಚಾರದಲ್ಲಿ ಸಿದ್ದರಾಮಯ್ಯ ಬಹಿರಂಗವಾಗಿಯೇ ಸಿಎಂ ಕುಮಾರಸ್ವಾಮಿ ವಿರುದ್ದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಇವೆಲ್ಲವುಗಳನ್ನ ಮನಗಂಡಿರೋ ಮುಖ್ಯಮಂತ್ರಿ ಕುಮಾರಸ್ವಾಮಿ ಇದೀಗ ಆಂತರಿಕವಾಗಿ ಸಿದ್ದುಗೆ ಮನ್ನಣೆ ನೀಡದೇ ಹೋಗುವ ವಿಚಾರದಲ್ಲಿದ್ದಾರಾ ಅನ್ನೋ ಶಂಕೆ ವ್ಯಕ್ತವಾಗುತ್ತಿದೆ. ಉಭಯ ನಾಯಕರ ಅಸಮಾಧಾನದ ಹೊಗೆ ಇದೀಗ ಬಾದಾಮಿಗೆ ಅನುದಾನ ನೀಡುವ ವಿಚಾರದಲ್ಲೂ ಹೊರಬಿದ್ದಂತಾಗಿದೆ. ಅನುದಾನದಲ್ಲಿ ಇಂತಹ ಧೋರಣೆ ಇಟ್ಟುಕೊಳ್ಳದೆ ಉಭಯ ನಾಯಕರು ಬಾದಾಮಿ ಅಭಿವೃದ್ಧಿಗೆ ಮನ್ನಣೆ ಕೊಡುವಂತಾಗಲಿ ಅಂತಾರೆ ಜಿಲ್ಲೆಯ ಜನಸಾಮಾನ್ಯರು.
ಒಟ್ಟಿನಲ್ಲಿ ರಾಜ್ಯ ರಾಜಕೀಯ ಬೆಳವಣಿಗೆ ಮದ್ಯೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವೈಮನಸ್ಸು ಬಾದಾಮಿ ಅಭಿವೃದ್ಧಿ ಚಿಂತನೆಗೆ ಹಿನ್ನಡೆ ತಾರದಿರಲಿ ಅನ್ನೋದು ಕ್ಷೇತ್ರದ ಜನರ ಆಶಯ.