ಬೆಂಗಳೂರು (ಫೆ. 25): ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸಲು ಮುಂದಿನ ಒಂದು ವರ್ಷ ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳು ಕಾಲ ವಿವಿಧ ಕಾರ್ಯಯೋಜನೆ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರುವ ಮುನ್ನ ಮನೆ ಮನೆ ಬಾಗಿಲಿಗೆ ತೆರಳಿ ಸಮೀಕ್ಷೆ ಮಾಡಬೇಕೆಂದು ರಾಜ್ಯ ಹೈಕೋರ್ಟ್‌ ಆದೇಶಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ಬರುವ ಏಪ್ರಿಲ್‌ನಿಂದ ಮುಂದಿನ ವರ್ಷದ ಏಪ್ರಿಲ್‌ವರೆಗೆ ಪ್ರತಿ ತಿಂಗಳು ಯಾವ ರೀತಿ ಚಟುವಟಿಕೆ ನಡೆಸಬೇಕು ಎಂಬುದೂ ಸೇರಿದಂತೆ ವಿವಿಧ ಕಾರ್ಯ ಯೋಜನೆಯನ್ನು ರೂಪಿಸಿ, ಅದರ ಪ್ರಕಾರ ಕ್ರಮ ಕೈಗೊಳ್ಳಬೇಕಂದು ತಿಳಿಸಿದೆ.

ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ ರಾಜ್ಯದಲ್ಲೂ ಜಾರಿ: ಅಶ್ವತ್ಥನಾರಾಯಣ

ಗ್ರಾಮ ಪಂಚಾಯತಿಯ ಎಲ್ಲ ಶಾಲೆಗಳ ವ್ಯಾಪ್ತಿಯಲ್ಲಿ ಶಾಲೆಗೆ ಸೇರದ, ಸೇರಿ ಗೈರು ಹಾಜರಾಗುತ್ತಿರುವ ಮಕ್ಕಳ ಸಮೀಕ್ಷೆ ನಡೆಸಿ ಗುರುತಿಸಬೇಕು. ಶಾಲೆಗೆ ಸೇರಿಸದ, ಗೈರು ಹಾಜರಾತಿಗೆ ಕಾರಣವಾದ ಅಂಶಗಳನ್ನು ಕಂಡುಕೊಂಡು, ಶಾಲಾ ಶಿಕ್ಷಣದ ಮಹತ್ವದ ಬಗ್ಗೆ ಪೋಷಕರಿಗೆ ಅರಿವು ಮೂಡಿಸಬೇಕು.

ಮಕ್ಕಳನ್ನು ಶಾಲೆಗೆ ಸೇರಿಸಿದ ನಂತರ ಹಾಜರಾದ ಮಕ್ಕಳು ನಿರಂತರವಾಗಿ ಶಾಲೆಗೆ ಬರುವುದನ್ನು ಖಾತರಿಪಡಿಸಿಕೊಳ್ಳಲು ನಿಗಾ ವಹಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ (ಪಂಚಾಯತ್‌ ರಾಜ್‌) ಉಮಾ ಮಹದೇವನ್‌ ಜಂಟಿಯಾಗಿ ಸುತ್ತೋಲೆ ಹೊರಡಿಸಿದ್ದಾರೆ.

ಪ್ರತಿ ತಿಂಗಳು ಚಟುವಟಿಕೆ:

ಏಪ್ರಿಲ್‌- ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು, ಶಾಲಾ ಮುಖ್ಯೋಪಾಧ್ಯಾಯರು, ಅಂಗನವಾಡಿ ಮೇಲ್ವಿಚಾರಕರು, ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಸಂಘಗಳ ಪ್ರತಿನಿಧಿಗಳನ್ನು ಒಳಗೊಂಡ ಸಭೆ ನಡೆಸಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಮರಳಿ ಶಾಲೆಗೆ ಸೇರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಬೇಕು.

ಮೇ- ಮೇಲ್ಕಂಡವರು ತಮ್ಮ ಶಾಲಾ ವ್ಯಾಪ್ತಿಯಲ್ಲಿ ಮಹಿಳಾ ಸ್ವ- ಸಹಾಯ ಸಂಘಗಳ ಪ್ರತಿನಿಧಿಗಳ ಮೂಲಕ ಸಮೀಕ್ಷೆ ನಡೆಸಿ, ಶಾಲೆಗೆ ದಾಖಲಾಗದ, ದಾಖಲಾದರೂ ಹಾಜರಾಗದ ಮಕ್ಕಳನ್ನು ಗುರುತಿಸಬೇಕು. ವಿಶೇಷ ಮನವೊಲಿಕೆ ಕಾರ್ಯಕ್ರಮ ಅವಶ್ಯವಿದ್ದರೆ ಸಂಬಂಧಿಸಿದ ಶಾಲೆಯ ಮುಖ್ಯ ಶಿಕ್ಷಕರಿಂದ ಹಮ್ಮಿಕೊಳ್ಳಬೇಕು.

ಜೂನ್‌- ಸಮೀಕ್ಷೆಯಲ್ಲಿ ಗುರುತಿಸಲಾದ ಮಕ್ಕಳನ್ನು ಶಾಲೆಗೆ ದಾಖಲಿಸಲು ಹಾಗೂ ಹಾಜರಾಗುವಂತೆ ಮಾಡಲು ಕ್ರಮ ಕೈಗೊಳ್ಳಬೇಕು.

ದ್ವಿತೀಯ PUC ಪರೀಕ್ಷೆ: ಅಕ್ರಮ ತಡೆಗಟ್ಟಲು ಹೊಸ ರೂಲ್ಸ್ , ಹುಷಾರಾಗಿರಿ...!

ಜುಲೈನಿಂದ ಮಾರ್ಚ್- ಶಾಲೆಗೆ ದಾಖಲಾದ ಮಕ್ಕಳು ಹಾಜರಾಗುತ್ತಿರುವುದನ್ನು ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡವರು ಶಾಲೆಗೆ ಭೇಟಿ ನೀಡಿ ಖಚಿತಪಡಿಸಿಕೊಳ್ಳುವುದು. ನಂತರ ಒಂದು ತಿಂಗಳು ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡವರು, ಮತ್ತೊಂದು ತಿಂಗಳು ಗ್ರಾಮ ಪಂಚಾಯತಿ ವತಿಯಿಂದ ಶಾಲೆಗೆ ದಾಖಲಾದ ಮಕ್ಕಳ ಹಾಜರಾತಿ ಮತ್ತು ಶೈಕ್ಷಣಿಕ ಪ್ರಗತಿ ಪರಿಶೀಲಿಸಬೇಕು. ಈ ಪ್ರಕ್ರಿಯೆ ಮಾಚ್‌ರ್‍ವರೆಗೆ ನಡೆಸಬೇಕು.

ಏಪ್ರಿಲ್‌ ತಿಂಗಳಲ್ಲಿ ಇಡೀ ವರ್ಷದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ದಾಖಲಾತಿ-ಹಾಜರಾತಿ ಪ್ರಕ್ರಿಯೆಯಲ್ಲಿ ಆದ ಪ್ರಗತಿ ಪರಾಮರ್ಶೆ ಮಾಡಿ ಮುಂದಿನ ವರ್ಷ ಕೈಗೊಳ್ಳಬೇಕಾದ ಕ್ರಮದ ಯೋಜನೆ ಸಿದ್ಧಪಡಿಸಬೇಕು ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.

ಗ್ರಾ.ಪಂ.ಖರ್ಚಿನಲ್ಲೇ ಪ್ರಕ್ರಿಯೆ:

ಗ್ರಾಮ ಪಂಚಾಯತಿಗಳು ಈ ಪ್ರಕ್ರಿಯೆಗೆ ತಗಲುವ ಸಾಂದರ್ಭಿಕ ವೆಚ್ಚವನ್ನು ಗ್ರಾಮ ಪಂಚಾಯತಿಯ ಸ್ವಂತ ವೆಚ್ಚ ಸಂಪನ್ಮೂಲದಿಂದ ಭರಿಸಬೇಕು. ಶಿಕ್ಷಣ ಇಲಾಖೆ ಪ್ರತಿ ಗ್ರಾಮ ಪಂಚಾಯತಿಗೆ ನೀಡುವ ಒಂದು ಸಾವಿರ ರು.ಗಳನ್ನು ಗ್ರಾ.ಪಂ. ಮಟ್ಟದ ಮಹಿಳಾ ಸ್ವ-ಸಹಾಯ ಗುಂಪಿಗೆ ಈ ಉದ್ದೇಶಕ್ಕೆ ಬಳಸಿಕೊಳ್ಳಲು ಬಿಡುಗಡೆ ಮಾಡಬೇಕು.

ಈ ಎಲ್ಲ ಪ್ರಕ್ರಿಯೆಯನ್ನು ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲುಸ್ತುವಾರಿಯಲ್ಲಿ ಮಾಡಿ, ನೆರವು ಮಾರ್ಗದರ್ಶನ ನೀಡುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.