ಬೆಂಗಳೂರು[ಜ.01]: ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ 2019ರ ಜ.1ರಿಂದ ನೋಂದಣಿಯಾಗುವ ಎಲ್ಲ ಸಾರ್ವಜನಿಕ/ಪ್ರಯಾಣಿಕರ ವಾಹನ ಹಾಗೂ ವಾಣಿಜ್ಯ ವಾಹನಗಳಲ್ಲಿ ವೆಹಿಕಲ್‌ ಲೊಕೇಷನ್‌ ಟ್ರ್ಯಾಕಿಂಗ್‌ ಯುನಿಟ್‌(ವಿಎಲ್‌ಟಿ) ಮತ್ತು ತುರ್ತು ಸಂದೇಶ (ಪ್ಯಾನಿಕ್‌) ಬಟನ್‌ ಅಳವಡಿಕೆ ಕಡ್ಡಾಯವಾಗಿದೆ.

ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯದ ಅಧಿಸೂಚನೆ ಅನ್ವಯ ಜ.1ರಿಂದ ದೇಶಾದ್ಯಂತ ಈ ನಿಯಮ ಜಾರಿಯಾಗಲಿದೆ. 2018 ಡಿ.31ರ ಪೂರ್ವದಲ್ಲಿ ನೋಂದಣಿಯಾದ ಪಬ್ಲಿಕ್‌ ಸರ್ವೀಸ್ ವಾಹನಗಳಿಗೆ ವಿಎಲ್‌ಟಿ ಮತ್ತು ಪ್ಯಾನಿಕ್‌ ಬಟನ್‌ ಅಳವಡಿಕೆಯಿಂದ ವಿನಾಯಿತಿ ನೀಡಲಾಗಿದೆ. 2019 ಜ.1ರಿಂದ ನೋಂದಣಿಯಾಗುವ ಎಲ್ಲ ಪಬ್ಲಿಕ್‌ ಸವೀರ್‍ಸ್‌ ವಾಹನಗಳಲ್ಲಿ ಈ ಉಪಕರಣಗಳ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.

ಕೇಂದ್ರದ ಅಧಿಸೂಚನೆ ಅನುಷ್ಠಾನಕ್ಕೆ ಮುಂದಾಗಿರುವ ರಾಜ್ಯ ಸಾರಿಗೆ ಇಲಾಖೆ, ವಾಹನ ಮಾಲೀಕರು ಹಾಗೂ ಆರ್‌ಟಿಒ ಅಧಿಕಾರಿಗಳಿಗೆ ಕೆಲವು ಸೂಚನೆಗಳನ್ನು ನೀಡಿದೆ. ಜ.1ರಿಂದ ನೋಂದಣಿಗೆ ಬರುವ ವಾಹನಗಳಲ್ಲಿ ಪ್ಯಾನಿಕ್‌ ಬಟನ್‌ ಜತೆಗೆ ಎಐಎಸ್‌140 ಪ್ರಮಾಣೀಕೃತ ವೆಹಿಕಲ್‌ ಟ್ರಾಕಿಂಗ್‌ ಸಿಸ್ಟಂ ಕಡ್ಡಾಯವಾಗಿ ಅಳವಡಿಸಬೇಕು. ಆರ್‌ಟಿಒ ಅಧಿಕಾರಿಗಳು ವಾಹನ ನೋಂದಣಿ ಮತ್ತು ಅರ್ಹತಾ (ಫಿಟ್‌ನೆಸ್‌) ಪ್ರಮಾಣ ಪತ್ರ ನೀಡುವಾಗ ವಾಹನಗಳಲ್ಲಿ ವಿಎಲ್‌ಟಿ, ಪ್ಯಾನಿಕ್‌ ಬಟನ್‌ ಅಳವಡಿಸಲಾಗಿದೆಯೇ ಎಂಬುದನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಸೂಚಿಸಲಾಗಿದೆ.

ವಿಎಲ್‌ಟಿ ಹಾಗೂ ಪ್ಯಾನಿಕ್‌ ಬಟನ್‌ ಯೋಜನೆ ಸಮರ್ಪಕ ಅನುಷ್ಠಾನಕ್ಕಾಗಿ ಬಿಎಸ್‌ಎನ್‌ಎಲ್‌ ಎಐಎಸ್‌-140 ರಾಷ್ಟ್ರೀಯ ವೆಹಿಕಲ್‌ ಟ್ರ್ಯಾಕಿಂಗ್‌ ಪೋರ್ಟಲ್‌ ಸಿದ್ಧಪಡಿಸಿದೆ. ಆರ್‌ಟಿಒ ಅಧಿಕಾರಿಗಳು ವಾಹನ ನೋಂದಣಿ ಸಂದರ್ಭದಲ್ಲಿ ವಾಹನದಲ್ಲಿರುವ ವಿಎಲ್‌ಟಿ ಉಪಕರಣದ ಮಾಹಿತಿ, ನೋಂದಣಿ ಸಂಖ್ಯೆ ಹಾಗೂ ಚಾಸೀಸ್‌ ಸಂಖ್ಯೆಯನ್ನು ವಾಹನ್‌ 4 ತಂತ್ರಾಂಶದಲ್ಲಿ ನಮೂದಿಸಬೇಕು. ವಾಹನ್‌ 4 ತಂತ್ರಾಂಶದಲ್ಲಿನ ಮಾಹಿತಿಯನ್ನು ಎಐಎಸ್‌ 140 ಪೋರ್ಟಲ್‌ ಪಡೆದುಕೊಳ್ಳಲಿದೆ. ಬಳಿಕ ಆಯಾ ರಾಜ್ಯದ ಸಾರಿಗೆ ಇಲಾಖೆ ಎಐಎಸ್‌ 140 ಪೋರ್ಟಲ್‌ ಮೂಲಕ ವಿಎಲ್‌ಟಿ ಅಳವಡಿಕೆಯಾದ ವಾಹನದ ಸಂಚಾರದ ಮೇಲೆ ನಿಗಾ ಇರಿಸಲಿದೆ.