ಬೆಂಗಳೂರು (ನ. 27): ಅಕ್ರಮ ವಲಸಿಗರು ಗಡೀಪಾರಾಗುವವರೆಗೂ ತಾತ್ಕಾಲಿಕವಾಗಿ ನೆಲೆಸಲು ರಾಜ್ಯದ ವಿವಿಧೆಡೆ 35 ವಿದೇಶೀಯರ ಬಂಧನ ಕೇಂದ್ರ (ಫಾರಿನರ್ಸ್‌ ಡಿಟೆನ್ಶನ್‌ ಸೆಂಟರ್‌) ಸ್ಥಾಪಿಸುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಅಕ್ರಮ ಬಾಂಗ್ಲಾ ವಲಸಿಗರು ಎನ್ನಲಾದ ಬಾಬುಲ್‌ ಖಾನ್‌ ಮತ್ತು ತಾನಿಯಾ ಅವರ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಕೆ.ಎನ್‌. ಫಣೀಂದ್ರ ಅವರ ನ್ಯಾಯಪೀಠಕ್ಕೆ ಸರ್ಕಾರ ಈ ಮಾಹಿತಿ ನೀಡಿದೆ. ಪ್ರಕರಣದ ವಿಚಾರಣೆ ವೇಳೆ ರಾಜ್ಯ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಪ್ರಸನ್ನ ದೇಶಪಾಂಡೆ ಬಂಧನ ಕೇಂದ್ರ ಸ್ಥಾಪನೆ ಕುರಿತು ಸರ್ಕಾರ ಹೊಂದಿರುವ ಯೋಜನೆ ಬಗೆಗಿನ ಪ್ರಮಾಣ ಪತ್ರ ಸಲ್ಲಿಸಿದರು.

ದೇಶಾದ್ಯಂತ NRC, ಅಕ್ರಮ ವಲಸಿಗರು ಗಡೀಪಾರು: ಈ ದಾಖಲೆ ರೆಡಿ ಇಟ್ಟುಕೊಳ್ಳಿ

ಅದರಂತೆ ಬಂಧನ ಕೇಂದ್ರಗಳನ್ನು ಸ್ಥಾಪಿಸಲು ಈಗಾಗಲೇ ರಾಜ್ಯದ 35 ಕಡೆ ಜಾಗ ಹಾಗೂ ಕಟ್ಟಡ ಗುರುತಿಸಲಾಗಿದೆ. ಈ ಪೈಕಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಬಳಿಯ ಸೊಂಡೆಕೊಪ್ಪದಲ್ಲಿ 200 ಅಕ್ರಮ ವಾಸಿಗಳಿಗೆ ನೆಲೆ ಕಲ್ಪಿಸುವ ಸಾಮರ್ಥ್ಯದ ಬಂಧನ ಕೇಂದ್ರ ಸ್ಥಾಪಿಸಲಾಗಿದೆ.

ಅಲ್ಲದೆ, ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಸರ್ಜಾಪುರದಲ್ಲಿ ಪೊಲೀಸ್‌ ಸಮುಚ್ಚಯ ಕಟ್ಟಡವನ್ನು ಸಹ ತಾತ್ಕಾಲಿಕ ವಿದೇಶೀಯರ ಬಂಧನ ಕೇಂದ್ರ ಆರಂಭಿಸಲು ಗುರುತಿಸಲಾಗಿದೆ. ಈ ಕಟ್ಟಡದಲ್ಲಿ ಸದ್ಯಕ್ಕೆ 15 ಮಂದಿಯನ್ನು ಇರಿಸಬಹುದಾಗಿದೆ. ಸ್ಥಾಪನೆಯಾಗಲಿರುವ ಎಲ್ಲಾ ಬಂಧನ ಕೇಂದ್ರಗಳಿಗೆ ಎಲ್ಲಾ ಅಗತ್ಯ ಸೌಲಭ್ಯ ಹಾಗೂ ಭದ್ರತೆ ಕಲ್ಪಿಸುವ ಬದ್ಧತೆಯನ್ನು ಪ್ರಮಾಣಪತ್ರದಲ್ಲಿ ವ್ಯಕ್ತಪಡಿಸಲಾಗಿದೆ. ಈ ಬಗೆಗೆ ಕೇಂದ್ರ ಸರ್ಕಾರದ ನಿಯಮ ಮತ್ತು ಮಾರ್ಗಸೂಚಿಗಳನ್ನು ಸೂಕ್ತವಾಗಿ ಪಾಲಿಸಲಾಗುವುದು ಎಂದು ತಿಳಿಸಲಾಗಿದೆ.

ನ.28 ಕ್ಕೆ ವಿಚಾರಣೆ ಮುಂದೂಡಿಕೆ

ಸರ್ಕಾರದ ಈ ಪ್ರಮಾಣಪತ್ರವನ್ನು ದಾಖಲಿಸಿಕೊಂಡು ನ್ಯಾಯಪೀಠವು, ರಾಜ್ಯದಲ್ಲಿ ಎಲ್ಲೆಲ್ಲಿ ಹಾಗೂ ಎಷ್ಟೆಷ್ಟುತಾತ್ಕಾಲಿಕ ಬಂಧನ ಕೇಂದ್ರಗಳನ್ನು ಆರಂಭಿಸಲಾಗುತ್ತದೆ? ಅವುಗಳಲ್ಲಿ ಎಷ್ಟುಜನರನ್ನು ಇರಿಸಲಾಗುತ್ತದೆ? ಮತ್ತು ಆ ಕೇಂದ್ರಗಳಲ್ಲಿ ಒದಗಿಸಲಾಗುವ ಸೌಲಭ್ಯಗಳೇನು? ಈ ರೀತಿಯ ತಾತ್ಕಾಲಿಕ ಬಂಧನ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರದಲ್ಲಿ ಯಾವೆಲ್ಲಾ ನಿಯಮಗಳಿವೆ ಎಂಬ ಬಗ್ಗೆ ಸಮಗ್ರ ಮಾಹಿತಿಯನ್ನೊಳಗೊಂಡ ಪ್ರಮಾಣಪತ್ರವನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಮೌಖಿಕವಾಗಿ ಸೂಚಿಸಿ ವಿಚಾರಣೆಯನ್ನು ನ.28 ಕ್ಕೆ ಮುಂದೂಡಿತು.

ಜತೆಗೆ, ಬಾಬುಲ್‌ ಖಾನ್‌ ಹಾಗೂ ತಾನಿಯಾ ಅವರ ಜಾಮೀನು ಅರ್ಜಿ ಕುರಿತ ತೀರ್ಪನ್ನು ಅಂದೇ ಪ್ರಕಟಿಸುವುದಾಗಿ ಸ್ಪಷ್ಟಪಡಿಸಿತು. ಬಾಬುಲ್‌ ಖಾನ್‌ ಹಾಗೂ ತಾನಿಯಾ ಅವರು ಅಕ್ರಮವಾಗಿ ರಾಜ್ಯಕ್ಕೆ ಬಂದು ನೆಲೆಸಿದ ಆರೋಪದ ಮೇಲೆ 2018ರಲ್ಲಿ ಆನೇಕಲ್‌ ತಾಲೂಕಿನ ಕೊಮ್ಮಸಂದ್ರ ಗ್ರಾಮದಲ್ಲಿ ಸರ್ಜಾಪುರ ಠಾಣಾ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು.