ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಾಮನಿರ್ದೇಶನದ ಮೂಲಕ ನೇಮಿಸಲಾಗಿದ್ದ ಸದಸ್ಯರ ನೇಮಕಾತಿಯನ್ನು ರಾಜ್ಯ ಸರ್ಕಾರ ಬುಧವಾರ ಹಿಂಪಡೆದಿದೆ.

ಬೆಂಗಳೂರು : ರಾಜ್ಯದ ವಿವಿಧ 16 ವಿವಿಗಳ ಸಿಂಡಿಕೇಟ್, ಕಾರ್ಯಕಾರಿ ಸಮಿತಿ, ವ್ಯವಸ್ಥಾಪನಾ ಮಂಡಳಿ ಗಳಿಗೆ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಾಮನಿರ್ದೇಶನದ ಮೂಲಕ ನೇಮಿಸಲಾಗಿದ್ದ ಸದಸ್ಯರ ನೇಮಕಾತಿಯನ್ನು ರಾಜ್ಯ ಸರ್ಕಾರ ಬುಧವಾರ ಹಿಂಪಡೆದಿದೆ. ತನ್ಮೂಲಕ 2015 ರ ಸೆಪ್ಟೆಂಬರ್‌ನಿಂದ 2018 ರ ಮಾರ್ಚ್ ವರೆಗೆ ವಿವಿಧ ಹಂತಗಳಲ್ಲಿ ವಿವಿಧ ವಿವಿಗಳಿಗೆ ಕಾಂಗ್ರೆಸ್ ಸರ್ಕಾರ ನಾಮನಿರ್ದೇಶನ ಮಾಡಿದ್ದ ಸದಸ್ಯರ ನೇಮಕಾತಿಯನ್ನು ಅವಧಿಗೂ ಮೊದಲೇ ಹಿಂಪಡೆದಂತಾಗಿದೆ. 

ಇದರಿಂದ ತೆರವಾಗಿರುವ ಸ್ಥಾನಗಳಿಗೆ ಸರ್ಕಾರ ಹೊಸ ಸದಸ್ಯರನ್ನು ನಾಮನಿರ್ದೇಶನ ಮಾಡಬೇಕಾಗುತ್ತದೆ. ಕಾಂಗ್ರೆಸ್ ಅವಧಿಯಲ್ಲಿ ವಿವಿಗಳಿಗೆ ನಾಮ ನಿರ್ದೇಶನ ಮಾಡಲಾಗಿರುವ ಸದಸ್ಯ ರನ್ನು ಮುಂದುವರೆಸುವಂತೆ ಸಿದ್ದರಾಮಯ್ಯ ಅವರು ಜು. 7 ರಂದು ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದರು. ಇದಕ್ಕೆ ಕ್ಯಾರೆ ಎನ್ನದೇ ಸರ್ಕಾರ ನಾಮನಿರ್ದೇಶನವನ್ನು ಹಿಂಪಡೆದಿದೆ.

ಸರ್ಕಾರದಿಂದ ವಿವಿಧ ವಿವಿಗಳಿಗೆ ಕನಿಷ್ಠ 2ರಿಂದ ಗರಿಷ್ಠ 5 ಮಂದಿಯನ್ನು ನಾಮನಿರ್ದೇಶನ ಮಾಡಲು ಅವಕಾಶವಿದೆ. ಆ ಎಲ್ಲಾ ನಾಮ ನಿರ್ದೇಶಿತ ಸದಸ್ಯರ ನೇಮಕಾತಿ ರದ್ದಾದಂತಾಗಿದೆ. ಬೆಂಗಳೂರು ಉತ್ತರ ಮತ್ತು ಕೇಂದ್ರ ವಿವಿಗಳಲ್ಲಿ ಇದುವರೆಗೂ ಒಂದೂ ಸಿಂಡಿ ಕೇಟ್ ಸಭೆಗಳೇ ನಡೆದಿಲ್ಲ ಆದರೂ, ಆ ವಿವಿಗಳ ನಾಮನಿರ್ದೇಶಿತ ಸದಸ್ಯರ ನೇಮಕವನ್ನೂ ಹಿಂಪಡೆ ಯಲಾಗಿದೆ. ಇದರಿಂದ ಸಿಂಡಿಕೇಟ್ ಸದಸ್ಯರು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ, ತಮ್ಮ ಇಲಾಖೆಯ ಆದೇಶದ ಬಗ್ಗೆ ಬುಧವಾರ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು, ಹಳೇ ಸರ್ಕಾರದ ನಾಮನಿರ್ದೇಶಿತ ಸದಸ್ಯರನ್ನು ಮುಂದು ವರೆಸಲು ಸಾಧ್ಯವಿಲ್ಲ. ಹೊಸ ಸರ್ಕಾರ ಬಂದ ನಂತರ ಹೊಸ ಸದಸ್ಯರನ್ನು ನಾಮನಿರ್ದೇಶನ ಮಾಡುವುದು ಮೊದಲಿಂದ ನಡೆದುಬಂದಿರುವ ಪದ್ಧತಿ ಎಂದು ತಮ್ಮ ಕ್ರಮವನ್ನು ಸಮರ್ಥಿಸಿ ಕೊಂಡಿದ್ದಾರೆ. 

ಆದೇಶದಲ್ಲೇನಿದೆ: ರಾಜ್ಯದ 16 ವಿವಿಗಳ ಸಿಂಡಿಕೇಟ್, ಕಾರ್ಯಕಾರಿ ಸಮಿತಿ/ ಪರಿಷತ್ತು ಅಥವಾ ಆಡಳಿತ ಮಂಡಳಿ ಗಳಿಗೆ ಸರ್ಕಾರ ನಾಮನಿರ್ದೇಶನ ಮಾಡಿದ್ದ ಸದಸ್ಯರ ನೇಮಕಾತಿ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ಬುಧವಾರ ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ (ವಿಶ್ವವಿದ್ಯಾಲಯ- 1) ಎನ್. ವೀರಬ್ರಹ್ಮಚಾರಿ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು ವಿವಿ, ಬೆಂಗಳೂರು ಕೇಂದ್ರ ವಿವಿ, ಕೋಲಾರದ ಬೆಂಗಳೂರು ಉತ್ತರ ವಿವಿ, ಮೈಸೂರು ವಿವಿ, ಗುಲ್ಬರ್ಗಾ, ಮಂಗಳೂರು, ತುಮಕೂರು ವಿವಿ, ದಾವಣಗೆರೆ ವಿವಿ, ಧಾರವಾಡದ ಕರ್ನಾಟಕ ವಿವಿ, ಶಿವಮೊಗ್ಗದ ಕುವೆಂಪು ವಿವಿ, ಬಿಜಾಪುರದ ಕರ್ನಾಟಕ ರಾಜ್ಯ ಮಹಿಳಾ ವಿವಿ, ಹಂಪಿ ಕನ್ನಡ ವಿವಿ, ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ರಾಣಿ ಚೆನ್ನಮ್ಮ ವಿವಿ, ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿವಿಗಳ ಸಿಂಡಿಕೇಟ್, ಕಾರ್ಯಕಾರಿ ಸಮಿತಿ/ ಪರಿಷತ್ತು ಅಥವಾ ಆಡಳಿತ ಮಂಡಳಿಗಳಿಗೆ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಮಾಡಿದ್ದ ಎಲ್ಲ ಸದಸ್ಯರ ನಾಮನಿರ್ದೇಶನವನ್ನು ವಾಪಸ್ ಪಡೆಯಲಾಗಿದೆ.